ಬೆಂಗಳೂರು: ಆಸ್ತಿ ತೆರಿಗೆ ಕಟ್ಟುವುದಿಲ್ಲ ಎಂಬ ನಾಗರಿಕರಿಂದ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಹಾಲನಾಯಕನಹಳ್ಳಿ ಪಂಚಾಯಿತಿಯ 15 ಸದಸ್ಯರು ತಮ್ಮ ಜೇಬಿನಿಂದ ಸುಮಾರು 5 ಲಕ್ಷ ರೂ. ಪಾವತಿಸಿದ್ದಾರೆ.
ಸರ್ಜಾಪುರ ರಸ್ತೆಯ ಹಾಲನಾಯಕನಹಳ್ಳಿ ನಿವಾಸಿಗಳಿಗೆ ಬುಧವಾರ ಮಹತ್ವದ ದಿನವಾಗಿದೆ. ಸುಮಾರು ಆರು ವರ್ಷಗಳಿಂದ ಹದಗೆಟ್ಟಿದ್ದ ರಸ್ತೆ ಸರಿಪಡಿಸುವಂತೆ ನಿರಂತರ ಒತ್ತಾಯದ ನಂತರ 3 ಕಿ. ಮೀ ರಸ್ತೆಯಲ್ಲಿದ್ದ 250 ಗುಂಡಿಗಳನ್ನು ಮೂರು ದಿನಗಳ ಕೆಲಸದ ಬಳಿಕ ಮುಚ್ಚಲಾಗಿದೆ.
ದೊಡ್ಡಕನಹಳ್ಳಿ-ಚಿಕ್ಕನಾಯಕನಹಳ್ಳಿ ಮುಖ್ಯರಸ್ತೆ ಎಂದು ಕರೆಯಲ್ಪಡುವ ಈ ರಸ್ತೆಯು ವೈಟ್‌ಫೀಲ್ಡ್, ಬೆಳ್ಳಂದೂರಿನಿಂದ ಗಟಹಳ್ಳಿ ಮೂಲಕ ಎಲೆಕ್ಟ್ರಾನಿಕ್ ಸಿಟಿಗೆ ಹೋಗುವ ಶಾರ್ಟ್ ಕಟ್ ಆಗಿದೆ. ಮಹಾದೇವಪುರ ವಲಯದಡಿ ಬರುವ ಇಲ್ಲಿ ಎಲ್ಲಾ ಬಿಬಿಎಂಪಿ ವಲಯಗಳಿಗಿಂತ ಅತಿ ಹೆಚ್ಚು ತೆರಿಗೆ ಪಾವತಿದಾರರು ಇದ್ದಾರೆ. ಇಲ್ಲಿರುವ ಸುಮಾರು 8,000 ಕುಟುಂಬಗಳಿಗಾಗಿ ರಸ್ತೆ ಬೇಡಿಕೆಯನ್ನು ಬೆಂಗಳೂರು ಪೂರ್ವ ನಾಗರಿಕ ಸಂಘಟನೆಯೊಂದು ಮೊದಲು ಆರಂಭಿಸಿತು. ಬಳಿಕ ಇತರ ಚಿಕ್ಕ ಸ್ವಯಂ ಸೇವಾ ಸಂಸ್ಥೆಗಳು ಕೂಡಾ ಇದಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದವು.
ಆಸ್ತಿ ತೆರಿಗೆ ಕಟ್ಟುವುದಿಲ್ಲ ಎಂಬ ನಾಗರಿಕರಿಂದ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಹಾಲನಾಯಕನಹಳ್ಳಿ ಪಂಚಾಯಿತಿಯ 15 ಸದಸ್ಯರು ತಮ್ಮ ಜೇಬಿನಿಂದ ಸುಮಾರು 5 ಲಕ್ಷ ರೂ. ಪಾವತಿಸಿದ್ದಾರೆ. ಖಾಸಗಿ ಬಿಲ್ಡರ್ ಆದರ್ಶ್ ಬಿಲ್ಡರ್ಸ್ ಜನರಿಗಾಗಿ ಉಚಿತವಾಗಿ ಡಾಂಬರೀಕರಣ ಮಾಡಿರುವುದಾಗಿ ಸ್ಥಳೀಯರು ಹೇಳುತ್ತಾರೆ.
ಈ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಸ್ವಯಂಸೇವಕ ಆರಿಫ್ ಮುದ್ಗಲ್, ಇಲ್ಲಿ ಮನೆಗಳನ್ನು ಖರೀದಿಸಿದ ಅನೇಕ ಐಟಿ ವೃತ್ತಿಪರರಿದ್ದಾರೆ. ರಸ್ತೆ ಮಾಡಿಸಲು ನೆರವಾಗುವಂತೆ ಪ್ರತಿಯೊಬ್ಬರನ್ನು ಸಂಪರ್ಕಿಸಿದ್ದೇವೆ. ಅರವಿಂದ ಲಿಂಬಾವಳಿ ಶಾಸಕರಾಗಿದ್ದಾಗ ಭೇಟಿಯಾಗಿದ್ದೆವು ಮತ್ತು ಇತ್ತೀಚೆಗೆ ಅವರ ಪತ್ನಿ ಮಂಜುಳಾ ಎಸ್ ಲಿಂಬಾವಳಿ ಅವರನ್ನು ಭೇಟಿಯಾದಾಗ ನಮಗೆ ಹಣ ಮೀಸಲಿಟ್ಟಿಲ್ಲ ಎಂದು ಹೇಳಿದರು. ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗದ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿರುವ ಡಿಸಿಎಂ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಿದ್ದೇವು. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಈ ಬಾರಿ ರಸ್ತೆ ಸರಿಪಡಿಸದಿದ್ದರೆ ಆಸ್ತಿ ತೆರಿಗೆ ಕಟ್ಟುವುದಿಲ್ಲ ಎಂದು ಪಂಚಾಯತ್‌ಗೆ ಹೇಳಿದ್ದೇವು ಎಂದು ತಿಳಿಸಿದರು.
ರಸ್ತೆಯಲ್ಲಿನ ಗುಂಡಿನ ಮುಚ್ಚಲು ರೂ.5 ಲಕ್ಷ ಖರ್ಚು ಮಾಡಿದ್ದೇವೆ. ಇದಕ್ಕಾಗಿ ನಮ್ಮ ಕುಟುಂಬದವರು ಹಾಗೂ ಪಂಚಾಯಿತಿ ಸದಸ್ಯರು ತುಂಬಾ ನೆರವು ನೀಡಿದ್ದಾರೆ. ಖಾಸಗಿ ಬಿಲ್ಡರ್ ಆದರ್ಶ್ ಬಿಲ್ಡರ್ಸ್ ಜನರಿಗಾಗಿ ಉಚಿತವಾಗಿ ಡಾಂಬರು ಕೆಲಸಕ್ಕೆ ಒಪ್ಪಿಕೊಂಡಿತು ಎಂದು ಸವಿತಾ ರೆಡ್ಡಿ ಪತಿ ವಿ ಬಾಬು ರೆಡ್ಡಿ ತಿಳಿಸಿದರು.
ವಿವಿಧ ಗುಂಪುಗಳ ಸ್ವಯಂಸೇವಕರು ಕೂಡಾ ಹಣ ಕ್ರೋಡೀಕರಿಸಿ ಗುಂಡಿ ಮುಚ್ಚುವ ನಿರ್ಧಾರ ಕೈಗೊಂಡಿದ್ದರು. ಕೊನೆಗೆ ಎಚ್ಚೆತ ಪಂಚಾಯಿತಿ ಸದಸ್ಯರು, ಈ ರಸ್ತೆ ಪಿಡಬ್ಲ್ಯುಡಿ ಇಲಾಖೆ ವ್ಯಾಪ್ತಿಗೆ ಬಂದರೂ ಜನರಿಗಾಗಿ ತಮ್ಮ ಸ್ವಂತ ಖರ್ಚಿನಲ್ಲಿ ರಸ್ತೆ ಸರಿಪಡಿಸಲು ನಿರ್ಧರಿಸಿದ್ದಾರೆ. ಕಳೆದ ವಾರ ಸತತ ಎರಡು ದಿನ ಕೆಲಸ ನಡೆದಿದ್ದು, ಬುಧವಾರ (ಡಿಸೆಂಬರ್ 12) ಸಾರ್ವಜನಿಕ ರಜೆ ಘೋಷಿಸಿದ್ದರಿಂದ ಕಾಮಗಾರಿ ಪೂರ್ಣಗೊಂಡಿದೆ. ಸವಿತಾ ರೆಡ್ಡಿ ಹಾಲನಾಯಕನಹಳ್ಳಿ ಪಂಚಾಯಿತಿ ಅಧ್ಯಕ್ಷೆಯಾಗಿದ್ದಾರೆ.