ನವದೆಹಲಿ: ಗಡಿ ವಿವಾದವನ್ನು ಅಂತ್ಯಗೊಳಿಸಲು ನ್ಯಾಯಯುತ ಮತ್ತು ಪರಸ್ಪರ ಸ್ವೀಕಾರಾರ್ಹ ಒಪ್ಪಂದಕ್ಕೆಬರಲು ಚೀನಾದೊಂದಿಗೆ ಮಾತುಕತೆ ನಡೆಸಲು ಭಾರತ ಬದ್ಧವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಮಂಗಳವಾರ ಹೇಳಿದ್ದಾರೆ.
ಇಂದು ಲೋಕಸಭೆಯಲ್ಲಿ ಭಾರತ-ಚೀನಾ ಗಡಿ ಪರಿಸ್ಥಿತಿ ಕುರಿತು ಮಾತನಾಡಿದ ಜೈಶಂಕರ್ ಅವರು, ಚೀನಾದ ಕ್ರಮಗಳಿಂದಾಗಿ ಗಡಿಯಲ್ಲಿ ಶಾಂತಿ ಸ್ಥಾಪನೆ ಸಾಧ್ಯವಾಗುತ್ತಿಲ್ಲ ಮತ್ತು ಉದ್ವಿಗ್ನ ಪರಿಸ್ಥಿತಿ ಮುಂದುವರೆದಿದ್ದು, 2020 ರಿಂದ ಭಾರತ-ಚೀನಾ ಸಂಬಂಧ ಸಹಜವಾಗಿಲ್ಲ ಎಂದು ಹೇಳಿದರು.
ಇಂದು ಲೋಕಸಭೆಯಲ್ಲಿ ಭಾರತ-ಚೀನಾ ಗಡಿ ಪರಿಸ್ಥಿತಿ ಕುರಿತು ಮಾತನಾಡಿದ ಜೈಶಂಕರ್ ಅವರು, ಚೀನಾದ ಕ್ರಮಗಳಿಂದಾಗಿ ಗಡಿಯಲ್ಲಿ ಶಾಂತಿ ಸ್ಥಾಪನೆ ಸಾಧ್ಯವಾಗುತ್ತಿಲ್ಲ ಎಂದರು.
ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿ ಇಲ್ಲದಿರುವಾಗ ಭಾರತ-ಚೀನಾ ಸಂಬಂಧ ಸಹಜವಾಗಿರಲು ಸಾಧ್ಯವಿಲ್ಲ. ನಮ್ಮ ಪರಸ್ಪರ ಸಂಬಂಧಗಳು ಶಾಂತಿ ಮತ್ತು ರಾಜಿ ಆಧಾರದ ಮೇಲೆ ಮಾತ್ರ ಸುಧಾರಿಸುವ ಭರವಸೆ ಇದೆ. ರಾಜತಾಂತ್ರಿಕ ಮಟ್ಟದಲ್ಲಿ ಮಾತುಕತೆಗಳು ನಡೆಯುತ್ತಿವೆ ಮತ್ತು ಮಿಲಿಟರಿ ಮಟ್ಟದಲ್ಲಿಯೂ ಇದೇ ರೀತಿಯ ಕೆಲಸ ನಡೆಯುತ್ತಿದೆ ಎಂದು ಜೈಶಂಕರ್ ಲೋಕಸಭೆಗೆ ತಿಳಿಸಿದರು.
“ಶಾಂತಿ ಮತ್ತು ನೆಮ್ಮದಿಯ ಮರುಸ್ಥಾಪನೆಯು ಇತರ ವಿಚಾರಗಳಲ್ಲಿ ಉಭಯ ದೇಶಗಳ ಸಂಬಂಧ ಮುಂದುವರಿಯಲು ಆಧಾರವಾಗಿದೆ ಎಂದು ನಾವು ಸ್ಪಷ್ಟವಾಗಿ ಹೇಳಿದ್ದೇವೆ” ಎಂದು ಅವರು ಹೇಳಿದರು.
ಜೂನ್ 2020 ರಲ್ಲಿ ಗಲ್ವಾನ್ ಕಣಿವೆಯಲ್ಲಿ ಉದ್ವಿಗ್ನತೆಯ ನಂತರ ಚೀನಾ ಮತ್ತು ಭಾರತದ ನಡುವೆ ಸಾಕಷ್ಟು ಉದ್ವಿಗ್ನತೆ ಉಂಟಾಗಿತ್ತು. 1991 ರಲ್ಲಿ, ಎರಡೂ ದೇಶಗಳು ಎಲ್‌ಎಸಿಯಲ್ಲಿ ಶಾಂತಿಗೆ ಒಪ್ಪಿಕೊಂಡಿದ್ದವು. 1993 ರಲ್ಲಿ LAC ಯಲ್ಲಿ ಶಾಂತಿಯನ್ನು ಮರುಸ್ಥಾಪಿಸುವ ಕುರಿತು ಒಪ್ಪಂದ ಮುಂದುವರೆದಿತ್ತು.
ನಿರಂತರ ರಾಜತಾಂತ್ರಿಕ ಮಾತುಕತೆಗಳ ನಂತರ ಇತ್ತೀಚಿಗೆ ಭಾರತ-ಚೀನಾ ಬಾಂಧವ್ಯದಲ್ಲಿ “ಸ್ವಲ್ಪ ಸುಧಾರಣೆ” ಕಾಣುತ್ತಿದೆ ಎಂದು ಅವರು ಹೇಳಿದರು.
“2020 ರ ಏಪ್ರಿಲ್-ಮೇನಲ್ಲಿ ಪೂರ್ವ ಲಡಾಖ್‌ನಲ್ಲಿ ಚೀನಾ ಹೆಚ್ಚಿನ ಸಂಖ್ಯೆಯ ಸೈನಿಕರನ್ನು ನಿಯೋಜಿಸಿತ್ತು. ಇದರಿಂದ ನಮಗೆ ಗಸ್ತು ತಿರುಗಲು ತೊಂದರೆಯಾಗಿತ್ತು ಮತ್ತು ಹಲವಾರು ಬಾರಿ ಉಭಯ ದೇಶಗಳ ಸೇನೆ ಮುಖಾಮುಖಿಯಾದವು ಎಂದರು.