ನವದೆಹಲಿ: ಎನ್‌ಡಿಆರ್‌ಎಫ್‌ನಿಂದ ನೆರವು ಬಿಡುಗಡೆಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಕರ್ನಾಟಕ ಸರ್ಕಾರ ಸಲ್ಲಿಸಿರುವ ಅರ್ಜಿಯನ್ನು ಇಂದು (ಮಂಗಳವಾರ) ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತು.
ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ (ಎನ್ಡಿಆರ್ಎಫ್) ಕುರಿತು ಕರ್ನಾಟಕ ಮತ್ತು ಕೇಂದ್ರ ಸರ್ಕಾರದ ನಡುವಿನ ವ್ಯಾಜ್ಯವನ್ನು ಬಗೆಹರಿಸಿಕೊಳ್ಳಲು ಸುಪ್ರೀಂ ಕೋರ್ಟ್ ಮಂಗಳವಾರದ ವಿಚಾರಣೆಯಲ್ಲಿ ಮೌಖಿಕ ಸಲಹೆ ನೀಡಿದೆ.
ಕರ್ನಾಟಕಕ್ಕೆ ಈವರೆಗೆ ಎಷ್ಟು ಎನ್ಡಿಆರ್ಎಫ್ ನಿಧಿ ಬಿಡುಗಡೆಯಾಗಿದೆ ಎಂದು ಪ್ರಶ್ನಿಸಿತು. ಕೇಂದ್ರದ ಪರ ಹಾಜರಿದ್ದ ಅಟಾರ್ನಿ ಜನರಲ್ ಆರ್.ವೆಂಕಟರಮಣಿ, ರಾಜ್ಯ ಸರ್ಕಾರ ಕೇಳಿದ 18,171 ಕೋಟಿ ರೂಪಾಯಿಗಳಲ್ಲಿ 3,819 ಕೋಟಿ ರೂಪಾಯಿ ನೀಡಲಾಗಿದೆ. ಈ ಬಗ್ಗೆ ಅಫಿಡವಿಟ್ ಸಲ್ಲಿಸಲು ಕಾಲಾವಕಾಶ ಬೇಕು ಎಂದು ಮನವಿ ಮಾಡಿದರು.
ಬರ ನಿರ್ವಹಣೆಗಾಗಿ ರಾಜ್ಯಕ್ಕೆ ಎನ್‌ಡಿಆರ್‌ಎಫ್‌ನಿಂದ ಹಣಕಾಸು ನೆರವು ಬಿಡುಗಡೆ ಮಾಡುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಲು ಕೋರಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಕೆ.ವಿ.ವಿಶ್ವನಾಥನ್ ಅವರಿದ್ದ ಪೀಠ ವಿಚಾರಣೆ ನಡೆಸಿತು.
ಇದಕ್ಕೆ ಸ್ಪಂದಿಸಿದ ಪೀಠ, ಎನ್ಡಿಆರ್ಎಫ್ ನಿಧಿ ಬಿಡುಗಡೆ ಕುರಿತ ವ್ಯಾಜ್ಯವನ್ನು ಕೇಂದ್ರ ಸರ್ಕಾರ ಶೀಘ್ರವೇ ಅಂತ್ಯಗೊಳಿಸಲು ಪ್ರಯತ್ನಿಸಬೇಕು ಎಂದು ತಿಳಿಸಿ, ಮುಂದಿನ ವಿಚಾರಣೆಯನ್ನು 2025ರ ಜನವರಿಗೆ ಮುಂದೂಡಿತು.
ರಾಜ್ಯದಲ್ಲಿ ತೀವ್ರ ಬರಗಾಲ ಕಾಡಿದೆ. ರೈತರು ನಷ್ಟಕ್ಕೀಡಾಗಿದ್ದಾರೆ. ಆರ್ಥಿಕ ಪರಿಹಾರ ನೀಡಲು ಕೇಂದ್ರ ಸರ್ಕಾರವು ರಾಜ್ಯದ ಪಾಲಿನ ಎನ್ಡಿಆರ್ಎಫ್ ನಿಧಿಯನ್ನು ಬಿಡುಗಡೆ ಮಾಡಬೇಕು. ಈವರೆಗೂ 3400 ರೂಪಾಯಿ ಮಾತ್ರ ಸಿಕ್ಕಿದೆ ಎಂದು ಏಪ್ರಿಲ್ 29 ರಂದು ನಡೆದ ವಿಚಾರಣೆಯಲ್ಲಿ ಕೋರ್ಟ್ಗೆ ತಿಳಿಸಿತ್ತು.
2023ರ ಋತುವಿನಲ್ಲಿ ರಾಜ್ಯವು ಭೀಕರ ಬರಗಾಲ ಕಂಡಿದೆ. 236ರ ಪೈಕಿ 223 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಲಾಗಿದೆ. ಇದರಲ್ಲಿ 196 ತಾಲೂಕುಗಳು ತೀವ್ರ ಬರ ಪೀಡಿತವಾಗಿದ್ದರೆ, 27 ಮಧ್ಯಮ ಪೀಡಿತ ಎಂದು ಗುರುತಿಸಲಾಗಿದೆ ಎಂದು ಅರ್ಜಿಯಲ್ಲಿ ತಿಳಿಸಿದೆ. ಎನ್ಡಿಆರ್ಎಫ್ ಹಣ ಬಿಡುಗಡೆಗೆ ವಿಳಂಬ ತೋರಿದ ಕೇಂದ್ರದ ವಿರುದ್ಧ ರಾಜ್ಯ ಕಾಂಗ್ರೆಸ್ ಸರ್ಕಾರ ಸುಪ್ರೀಂ ಮೆಟ್ಟಿಲೇರಿದೆ.
ರಾಜ್ಯಕ್ಕೆ ಆರ್ಥಿಕ ನೆರವು ನಿರಾಕರಿಸುತ್ತಿರುವ ಮೂಲಕ ಕೇಂದ್ರವು ಸಂವಿಧಾನದ 14, 21ನೇ ವಿಧಿಗಳ ಅನುಸಾರ ಜನರ ಮೂಲಭೂತ ಹಕ್ಕುಗಳ ಉಲ್ಲಂಘಿಸಿದೆ. ಇದಲ್ಲದೆ, ವಿಪತ್ತು ನಿರ್ವಹಣಾ ಕಾಯಿದೆ- 2005, ಬರ ನಿರ್ವಹಣೆಯ ಕೈಪಿಡಿ, ರಾಜ್ಯ ವಿಪತ್ತು ನಿರ್ವಹಣಾ ನಿಧಿ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ, ಸಂವಿಧಾನ ಮತ್ತು ಆಡಳಿತದ ಮಾರ್ಗಸೂಚಿಗಳನ್ನು ಉಲ್ಲಂಘಿಸಿದಂತಾಗಿದೆ ಎಂದು ಆಪಾದಿಸಿದೆ.