ಬೆಂಗಳೂರು : ಬೆಂಗಳೂರು ನಗರದ ಶಾಲಾ ಮಕ್ಕಳು ಎದುರಿಸುತ್ತಿರುವ ಸಂಚಾರ ದಟ್ಟಣೆ ಹಾಗೂ ರಸ್ತೆ ದಾಟುವಲ್ಲಿನ ಸುರಕ್ಷತೆಯಂತಹ ಸಮಸ್ಯೆಗಳಿಗೆ ಪರಿಹಾರ ನಿಡಲು ಸಂಚಾರ ಪೊಲೀಸರು ‘ಸೇಫ್ ರೂಟ್ ಟು ಸ್ಕೂಲ್’ ಯೋಜನೆಯನ್ನು ಮರಳಿ ಜಾರಿಗೆ ತರುತ್ತಿದೆ. ರಾಜ್ಯ ಸರಕಾರವು ಯೋಜನೆ ಜಾರಿಗೆ 3.50 ಕೋಟಿ ರೂ. ಅನುದಾನ ಮಂಜೂರು ಮಾಡಿದೆ.
ರಾಜಧಾನಿಯ ಶಾಲಾ ಮಕ್ಕಳ ಸುರಕ್ಷತೆಯ ಸಲುವಾಗಿ ಸಂಚಾರ ಪೊಲೀಸರು ರೂಪಿಸಿರುವ ‘ಸೇಫ್ ರೂಟ್ ಟು ಸ್ಕೂಲ್’ (ಎಸ್‌ಆರ್‌ಟಿಎಸ್) ಯೋಜನೆ ಮರು ಜಾರಿಗೆ ಮುಹೂರ್ತ ಕೂಡಿಬಂದಿದ್ದು, ನಗರದ 36 ಶಾಲಾ ಪ್ರದೇಶಗಳ ವಿದ್ಯಾರ್ಥಿಗಳಿಗೆ ಸಂಚಾರ ದಟ್ಟಣೆ ಸೇರಿ ಇತರೆ ಸಮಸ್ಯೆಗಳಿಂದ ಪರಿಹಾರ ಸಿಗಲಿದೆ.
ನಗರದ ಸೆಂಟ್ರಲ್ ಬಿಸಿನೆಸ್ ಡಿಸ್ಟ್ರಿಕ್ಟ್ (ಸಿಬಿಡಿ) ಪ್ರದೇಶಗಳಾದ ಅಶೋಕನಗರ, ಕಬ್ಬನ್‌ಪಾರ್ಕ್, ಇಂದಿರಾನಗರ, ಹೆಣ್ಣೂರು, ಜಯನಗರ ವ್ಯಾಪ್ತಿ ಸೇರಿದಂತೆ ಹಲವು ಶಾಲೆಗಳ ಬಳಿ ಸಂಚಾರ ದಟ್ಟಣೆ, ಮಕ್ಕಳ ಪಿಕ್‌ಅಪ್ ಮತ್ತು ಡ್ರಾಪ್‌ಗೆ ತೊಂದರೆ, ರಸ್ತೆ ದಾಟಲು ಹರಸಾಹಸಪಡುವ ಪರಿಸ್ಥಿತಿಯಿದೆ.
ಎಸ್‌ಆರ್‌ಟಿಎಸ್ ಯೋಜನೆಗೆ ಆಯ್ಕೆಯಾಗಿರುವ ಶಾಲಾ ಪ್ರದೇಶಗಳು ಸಂಚಾರ ಪೊಲೀಸರ ವ್ಯಾಪ್ತಿಗೆ ಸಿಗಲಿವೆ. ಈ ಪ್ರದೇಶಗಳಲ್ಲಿ ವಾಹನಗಳ ವೇಗಕ್ಕೆ ಮಿತಿ ನಿಗದಿಪಡಿಸಲಾಗುತ್ತದೆ.
ಶಾಲಾ ಮಕ್ಕಳ ಸುರಕ್ಷತೆ ಕೇಂದ್ರೀಕರಿಸಿ ಈ ಯೋಜನೆ ಜಾರಿಗೊಳಿಸಲಾಗುವುದು. ವಾಹನ ಸವಾರರು ಶಾಲಾ ವ್ಯಾಪ್ತಿಯ ರಸ್ತೆಗೆ ಬರುತ್ತಿದ್ದಂತೆ ಅವರಿಗೆ ಸುರಕ್ಷತಾ ಕ್ರಮಗಳ ಬಗ್ಗೆ ಅರಿವಾಗುವ ರೀತಿ ಯೋಜನೆ ರೂಪಿಸಲಾಗಿದೆ.
ನಗರದಲ್ಲಿ 2006ರಲ್ಲಿ ಮೊದಲ ಬಾರಿಗೆ 16 ಶಾಲೆಗಳ ವ್ಯಾಪ್ತಿಯಲ್ಲಿ ಎಸ್‌ಆರ್‌ಟಿಎಸ್ ಜಾರಿಯಾಗಿ ಉತ್ತಮ ಯಶಸ್ಸು ಸಿಕ್ಕಿತ್ತು. ನಂತರ ಹತ್ತಾರು ಕಾರಣಗಳಿಂದ ಈ ಯೋಜನೆ ಸ್ಥಗಿತಗೊಂಡಿದ್ದು, 2023ರಲ್ಲಿ ಯೋಜನೆ ಮರುಜಾರಿಗೆ ಅನುಮತಿ ಹಾಗೂ ಅನುದಾನ ನೀಡುವಂತೆ ಸಲ್ಲಿಸಿದ್ದ ಪ್ರಸ್ತಾವನೆಗೆ ಸರಕಾರ ಒಪ್ಪಿಗೆ ನೀಡಿದೆ.
ಪ್ರಮುಖವಾಗಿ ಮಕ್ಕಳನ್ನು ಶಾಲೆಗಳಿಗೆ ಬಿಡಲು ಖಾಸಗಿ ವಾಹನಗಳನ್ನು ಬಳಸುವ ಪೋಷಕರು ಸಮೂಹ ಸಾರಿಗೆಗಳಾದ ಬಿಎಂಟಿಸಿ, ಮೆಟ್ರೋ ರೈಲು ಸೇವೆಯನ್ನು ಹೆಚ್ಚು ಬಳಸುವಂತಾಗಬೇಕು. ಆಗ ಶಾಲೆಗಳ ವ್ಯಾಪ್ತಿಯಲ್ಲಿ ವಾಹನ ಸಂಚಾರ ತಗ್ಗಲಿದ್ದು, ದಟ್ಟಣೆ ಬವಣೆ ತಪ್ಪಲಿದೆ.
ಸಂಚಾರ ನಿಯಮಗಳ ಪಾಲನೆ ಕುರಿತು ಮಾರ್ಗಸೂಚಿ ಫಲಕಗಳು ಮತ್ತು ರಬ್ಬಲ್ ಸ್ಟ್ರಿಫ್ಸ್‌ಗಳನ್ನು ಅಳವಡಿಸಲು ಉದ್ದೇಶಿಸಲಾಗಿದೆ.
ಈ ಶಾಲೆಗಳ ವ್ಯಾಪ್ತಿಯಲ್ಲಿ ಸುಗಮ ಸಂಚಾರಕ್ಕೆ ಮತ್ತು ಮಕ್ಕಳ ಸುರಕ್ಷತೆಗೆ ಅಗತ್ಯವಿರುವ ಕಾಮಗಾರಿಗಳನ್ನು ಕೈಗೊಳ್ಳಲು ಪೊಲೀಸ್ ಇಲಾಖೆಯು ಟೆಂಡರ್ ಆಹ್ವಾನಿಸಿದೆ. ಮುಂದಿನ ಎರಡು ವಾರದಲ್ಲಿ ಟೆಂಡರ್ ಪ್ರಕ್ರಿಯೆ ಅಂತಿಮಗೊಳ್ಳಲಿದೆ.