ಲಕ್ಷ್ಮೇಶ್ವರ: ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಬಡತನ ರೇಖೆಗಿಂತ ಕೆಳಮಟ್ಟದಲ್ಲಿ ಇರುವ ಮಹಿಳಾ ಗುಂಪುಗಳನ್ನು ರಚಿಸಿ
ಆರ್ಥಿಕ, ಸಾಮಾಜಿಕವಾಗಿ ಸಹಕಾರಿ ಆಗಲು ಗ್ರಾಮೀಣ ಜೀವನೋಪಾಯ ಇಲಾಖೆಯ ಸಂಜೀವಿನಿ ಯೋಜನೆ ಸಹಾಯ ಮಾಡುತ್ತಿದೆ.
ಸಂಜೀವಿನಿ ಯೋಜನೆಯಡಿ ತಾಲ್ಲೂಕಿನ ಶಿಗ್ಲಿ ಗ್ರಾಮದಲ್ಲಿ ಕೂಲಿ ಕೆಲಸ ಮಾಡುತ್ತ ಜೀವನ ಸಾಗಿಸುತ್ತಿದ್ದ ನೇತ್ರಾವತಿ ಮಂಜುನಾಥ ಮಹೇಂದ್ರಕರ ಅವರು ಸಂಜೀವಿನಿ ಯೋಜನೆಯ ಮೂಲಕ ಯಶಸ್ಸು ಸಾಧಿಸಿದ್ದಾರೆ.
2017-18ನೇ ಸಾಲಿನಲ್ಲಿ ಗ್ರಾಮದ ತಮ್ಮ ಮನೆಯ ಅಕ್ಕ ಪಕ್ಕದ 10 ಮಹಿಳೆಯರು ಸೇರಿ ನೇತ್ರಾವತಿ ಮಹೇಂದ್ರಕರ ಅವರ ಮುಂದಾಳತ್ವ ಉಪಯೋಗಿಸಿ ಸಿಬ್ಬಂದಿ ಮಾರ್ಗದರ್ಶನದಲ್ಲಿ ಕೊಟ್ರೇಶ್ವರ ಮಹಿಳಾ ಸ್ವ-ಸಹಾಯ ಗುಂಪು ಕಟ್ಟಿದ್ದರು.
10 ಸಾವಿರ ಆಂತರಿಕ ಸಾಲ ಪಡೆದು ಒಂದು ಹೊಲಿಗೆ ಯಂತ್ರ ಖರೀದಿಸಿ ಬಟ್ಟೆಗಳನ್ನು ಹೊಲಿದು ಜೀವನ ನಡೆಸುತ್ತ ತಿಂಗಳಿಗೆ ₹1000-₹1200 ಆದಾಯ ಗಳಿಸುತ್ತಿದ್ದರು.
ನಂತರ ಗ್ರಾಮ ಪಂಚಾಯ್ತಿಮಟ್ಟದ ಸಂಜೀವಿನಿ ಮಹಿಳಾ ಒಕ್ಕೂಟದ ಸಮುದಾಯ ಬಂಡವಾಳ ನಿಧಿಯ ಮೂಲಕ ಆರಂಭದಲ್ಲಿ ₹1.5 ಲಕ್ಷ ಸಾಲ ಪಡೆದು ಬಟ್ಟೆ ವ್ಯಾಪಾರ ಪ್ರಾರಂಭ ಮಾಡಿದರು.
ಶಿಗ್ಲಿ ಗ್ರಾಮ ಪಂಚಾಯ್ತಿಮಟ್ಟದ ಸಂಜೀವಿನಿ ಮಹಿಳಾ ಒಕ್ಕೂಟದ ಅಧ್ಯಕ್ಷೆಯಾಗಿ 2021-22ನೇ ಸಾಲಿನಲ್ಲಿ ಆಯ್ಕೆ ಆಗುವ ಮೂಲಕ ಗ್ರಾಮದ ಬಡ ಮಹಿಳೆಯರಿಗೆ ಸ್ವ-ಸಹಾಯ ಗುಂಪು ರಚನೆ, ಉಳಿತಾಯ ಮನೋಭಾವ ಮೂಡಿಸುವ ಮೂಲಕ ಅವರಿಗೆ ಸಲಹೆ, ಮಾರ್ಗದರ್ಶ ನೀಡಿದರು.
ಸಂಜೀವಿನಿ ಯೋಜನೆ ಮೂಲಕ ಆರಂಭವಾದ ವ್ಯಾಪಾರ ಪ್ರಸ್ತುತ ಚಿಕ್ಕ ಮಕ್ಕಳ ಸಿದ್ದ ಉಡುಪುಗಳು ಮತ್ತು ಶಿಗ್ಲಿ ಸೀರೆ ಮಾರಾಟ ಮಾಡುವ ಮೂಲಕ ತಿಂಗಳಿಗೆ ₹18 ಸಾವಿರದಿಂದ ₹20 ಸಾವಿರ ಆದಾಯ ಗಳಿಸುವ ಮೂಲಕ ಇತರ ಮಹಿಳೆಯರಿಗೆ ಮಾದರಿಯಾಗಿದ್ದಾರೆ.
ಸಂಜೀವಿನಿ ಯೋಜನೆ ಮೂಲಕ ಕಳೆದ ಜನವರಿ 26ರಂದು ಗಣರಾಜೊತ್ಸವ ಕಾರ್ಯಕ್ರಮಕ್ಕೆ ಗದಗ ಜಿಲ್ಲೆಯಿಂದ ಆಯ್ಕೆ ಆಗುವ ಮೂಲಕ ದೆಹಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಹಿಳೆ ಎಂಬ ಹೆಗ್ಗಳಿಕೆಗೆ ನೇತ್ರಾವತಿ ಪಾತ್ರರಾಗಿದ್ದಾರೆ. ಸಂಜೀವಿನಿ ಯೋಜನೆಯಡಿ ಆಯೋಜಿಸುವ ಸ್ವ-ಸಹಾಯ ಸಂಘಗಳ ವಸ್ತುಪ್ರದರ್ಶನ ಮಾರಾಟ ಮೇಳದಲ್ಲಿ ಭಾಗಿಯಾಗಿ ಬಟ್ಟೆ ವ್ಯಾಪಾರ ಮಾಡುತ್ತಿದ್ದರು. ನಂತರ ಸಧ್ಯ ಒಕ್ಕೂಟದಲ್ಲಿ 125 ಗುಂಪು ಇದ್ದು, ಸಾವಿರಾರು ಬಡ ಮಹಿಳೆಯರನ್ನು ಒಕ್ಕೂಟದ ವ್ಯಾಪ್ತಿಗೆ ಬರುವಂತೆ ಕಾರ್ಯನಿರ್ವಹಿಸಿದ್ದಾರೆ.
ಮಕ್ಕಳ ವಿವಿಧ ಸಿದ್ದ ಉಡುಪುಗಳನ್ನು ತಯಾರಿಸುವ ಮೂಲಕ ರಾಜ್ಯ ಮತ್ತು ಬೇರೆ ರಾಜ್ಯಗಳಿಗೆ ನಿರಂತರವಾಗಿ ಬಟ್ಟೆ ಸರಬರಾಜು ಮಾಡುತ್ತಾರೆ.
ಸಂಜೀವಿನಿ ಯೋಜನೆಯಡಿ ಬೃಹತ್ ಪ್ರಮಾಣದ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳಗಳಲ್ಲಿ ರಾಜ್ಯದ ಬೆಳಗಾವಿ ಬೆಂಗಳೂರು ಮೈಸೂರು ಮುಂಬೈ ಮತ್ತು ದೆಹಲಿ ಸೇರಿದಂತೆ ತಮ್ಮ ಗಾರ್ಮೇಂಟ್ಸ್‌ನಲ್ಲಿ ಸಿದ್ಧಪಡಿಸಿದ ಮಕ್ಕಳ ವಿವಿಧ ಸಿದ್ದ ಉಡುಪುಗಳ ಮಾರಾಟ ಮಳಿಗೆಯಲ್ಲಿ ಉತ್ತಮ ಬೆಲೆಗೆ ಮಾರಾಟ ಮಾಡಿ ಉತ್ತಮ ಆದಾಯ ಪಡೆಯುತ್ತಿದ್ದಾರೆ.
WhatsApp Group
Join Now
Telegram Group
Join Now
Instagram Account
Follow Now
Facebook Page
Follow Now