ತುಮಕೂರಿನಲ್ಲಿ ಮಕ್ಕಳ ಅಂಗನವಾಡಿಗೆ ಹಾಗೂ ಶಾಲೆಗಳಿಗೆ ನೀಡಲಾಗುವ ಆಹಾರ ಸಾಮಗ್ರಿಗಳನ್ನು ಕಳ್ಳತನ ಮಾಡುವ ಜಾಲವೊಂದು ಪತ್ತೆಯಾಗಿದೆ. ಕ್ಷೀರ ಭಾಗ್ಯ ಹಾಗೂ ಅಕ್ಷರ ದಾಸೋಹದಂಥ ಕಾರ್ಯಕ್ರಮಗಳಿಗಾಗಿ ಸರ್ಕಾರದಿಂದ ವಿತರಣೆಯಾಗಿದ್ದ ಆಹಾರ ಪದಾರ್ಥಗಳನ್ನು ಕಳ್ಳರು ಕದ್ದು ಸಾಗಿಸುತ್ತಿದ್ದು ವಾಹನವೊಂದನ್ನು ಹಿಡಿಯಲಾಗಿದೆ. ತಿಲಕ್ ಪಾರ್ಕ್ ಪೊಲೀಸರು ಆಹಾರ ಪದಾರ್ಥವನ್ನು ಹಿಡಿದು ಚಾಲಕನನ್ನು ಬಂಧಿಸಿದ್ದಾರೆ.
ಕಳ್ಳಸಾಗಣೆ ಮಾಡುತ್ತಿದ್ದ ಆಹಾರವು ಶಿಕ್ಷಣ ಇಲಾಖೆ, ಮಕ್ಕಳ ಅಭಿವೃದ್ಧಿ ಇಲಾಖೆಗೆ ಸೇರಿದ್ದು ಎನ್ನಲಾಗಿದೆ.
ಸರಕಾರಿ ಶಾಲೆ ಹಾಗೂ ಅಂಗನವಾಡಿಗೆ ಪೂರೈಕೆ ಆಗಬೇಕಿದ್ದ ಕ್ಷೀರಭಾಗ್ಯ, ಅಕ್ಷರದಾಸೋಹ ಸೇರಿದಂತೆ ನಾನಾ ಯೋಜನೆಗಳ ಆಹಾರ ಪದಾರ್ಥಗಳ ಗೋಲ್ಮಾಲ್ ತುಮಕೂರಲ್ಲಿಬೆಳಕಿಗೆ ಬಂದಿದೆ.
ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಪೂರೈಕೆಯಾಗುವ ಆಹಾರ ಧಾನ್ಯಗಳ ಕಳ್ಳ ಸಾಗಾಟ ಮಾಡುತ್ತಿದ್ದ ವಾಹನ ಸಿಕ್ಕಿಬಿದ್ದಿದ್ದು, ಆಹಾರ ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ.ನಗರದ ಮಂಡಿಪೇಟೆಯಿಂದ ನಾಗವಲ್ಲಿ ಕಡೆಗೆ ಹೋಗುತ್ತಿದ್ದ ಬೊಲೇರೋ ಟ್ರಕ್ ಕುಣಿಗಲ್ ರಸ್ತೆಯಲ್ಲಿಸಿಕ್ಕಿಬಿದ್ದಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅಕ್ಷರ ದಾಸೋಹ ಅಧಿಕಾರಿಗಳು ಬಂದು ಪರಿಶೀಲಿಸಿ ವಾಹನದಲ್ಲಿಕಳ್ಳ ಸಾಗಾಟವಾಗುತ್ತಿರುವುದು ಸರಕಾರದ ವಿವಿಧ ಯೋಜನೆಗಳ ಆಹಾರ ಪದಾರ್ಥಗಳ ಪ್ಯಾಕೆಟ್ ಎಂದು ಖಚಿತ ಪಡಿಸಿದ್ದಾರೆ. ತಿಲಕ್ ಪಾರ್ಕ್ ಪೊಲೀಸರು ಆಹಾರ ಪದಾರ್ಥಗಳ ಪ್ಯಾಕೆಟ್‌ಗಳನ್ನು ಜಪ್ತಿ ಮಾಡಿ, ವಾಹನದ ಚಾಲಕ ನೂರುಲ್ಲಾನನ್ನು ವಶಕ್ಕೆ ಪಡೆದಿದ್ದಾರೆ.
ಕ್ಷೀರಭಾಗ್ಯದ ಹಾಲಿನ ಪೌಡರ್ ಪ್ಯಾಕೆಟ್‌ಗಳು, ಅಂಗನವಾಡಿಗಳ ಮಕ್ಕಳಿಗೆ, ಗರ್ಭಿಣಿ, ಬಾಣಂತಿಯರಿಗೆ ನೀಡುವ ಗೋದಿ ನುಚ್ಚು, ಬೆಲ್ಲದ ಪುಡಿ, ಉಪ್ಪಿಟ್ಟು ಮಸಾಲ, ಲಡ್ಡು ಮಿಶ್ರಣ, ಪುಷ್ಟಿ ಹಿಟ್ಟಿನ ಪ್ಯಾಕೆಟ್‌ಗಳು ಕಳ್ಳಸಾಗಾಟ ಮಾಡಲಾಗುತ್ತಿತ್ತು. ಮಂಡಿಪೇಟೆಯ ಗೋದಾಮು ಒಂದರಿಂದ ಅವುಗಳನ್ನು ವಾಹನದ ಮೂಲಕ ಸರಬರಾಜು ಮಾಡಲಾಗುತ್ತಿತ್ತು ಎಂದು ತಿಳಿದಿದ್ದು, ಗೋದಾಮು ಪತ್ತೆ, ಪರಿಶೀಲನೆ ಕೆಲಸ ಆಗಿಲ್ಲ.
ಬೆಳಕಿಗೆ ಬಂದಿರುವ ಕಳ್ಳಸಾಗಾಟ ನಾನಾ ಕಡೆಗಳಲ್ಲಿಗೋಲ್ಮಾಲ್ ನಡೆಯುತ್ತಿರುವ ಶಂಕೆಯನ್ನು ಸೃಷ್ಟಿಸಿದ್ದು, ದಂಧೆಕೋರರು ಬಡ ಮಕ್ಕಳ ಆಹಾರ ಕಸಿಯುತ್ತಿದ್ದಾರೆ. ಈ ಗೋಲ್ಮಾಲ್‌ನಲ್ಲಿಸಿಬ್ಬಂದಿಯ ಕೈವಾಡ ಇದ್ದೇ ಇರುತ್ತದೆ, ತನಿಖೆಯಿಂದ ಸಾಬೀತಾಗಬೇಕಿದೆ. ಅಪೌಷ್ಟಿಕತೆ ನಿವಾರಣೆಗೆ ಸರಕಾರ ಜಾರಿಗೆ ತಂದಿರುವ ಯೋಜನೆಗಳು ಇಂತಹ ಗೋಲ್ಮಾಲ್‌ನಿಂದ ಹಳ್ಳ ಹಿಡಿಯುತ್ತಿವೆ.
ಆಹಾರ ಪದಾರ್ಥಗಳ ಪ್ಯಾಕೆಟ್ ಮೇಲೆ ಯೋಜನೆ, ಇಲಾಖೆ ಗುರುತಿದೆ. ತುಮಕೂರು ತಾಲೂಕು ಮಾತ್ರವಲ್ಲದೆ ಕೊರಟಗೆರೆ, ತುರುವೇಕೆರೆ, ತಿಪಟೂರು, ಪಾವಗಡ ಸೇರಿದಂತೆ ನಾನಾ ತಾಲೂಕುಗಳಿಗೆ ಸೇರಬೇಕಿದ್ದ ಪ್ಯಾಕೆಟ್‌ಗಳು ಪತ್ತೆಯಾಗಿವೆ.
ಹಾಲಿನ ಪೌಡರ್: 125 ಕೆ.ಜಿ. (1 ಕೆ.ಜಿ.ಪ್ಯಾಕೆಟ್‌ನಂತೆ 125 ಪ್ಯಾಕೆಟ್) (ಶಿಕ್ಷಣ ಇಲಾಖೆಗೆ ಸಂಬಂಧಿಸಿದ್ದು)
ಹಾಲಿನ ಪೌಡರ್: 17.5 ಕೆ.ಜಿ. (ಅರ್ಧ ಕೆಜಿ ಪ್ಯಾಕೆಟ್‌ಗಳು -ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸಂಬಂಧಿಸಿದ್ದು)
ಮಿಲೆಟ್ ಲಡ್ಡು : 24 ಕೆ.ಜಿ. (ತಲಾ 1 ಕೆ.ಜಿ.ಪ್ಯಾಕೆಟ್‌ನಂತೆ)
ಪುಷ್ಠಿ ಪ್ಯಾಕೆಟ್: 360 ಕೆ.ಜಿ.
ಉಪ್ಪಿಟ್ಟು ಮಸಾಲ: 9 ಕೆ.ಜಿ
ಬೆಲ್ಲಾ: 775 ಗ್ರಾಂನ 56 ಪ್ಯಾಕೆಟ್
ವಾಹನವೊಂದರಲ್ಲಿ ರಾಗಿ, ಹಾಲಿನ ಪೌಡರ್, ಅಂಗನವಾಡಿಗೆ ಪೂರೈಕೆ ಆಗುವ ಆಹಾರ ಪದಾರ್ಥಗಳು ಸಿಕ್ಕಿವೆ. ಪೊಲೀಸ್ ಠಾಣೆಗೆ ವಾಹನ ತೆಗೆದುಕೊಂಡು ಹೋಗಿ ಮಹಜರು ಮಾಡಲಾಗಿದೆ.
ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಉತ್ಪಾದನಾ ಘಟಕಗಳು ನಾನಾ ಕಡೆಗಳಲ್ಲಿವೆ. ಎಲ್ಲಿಂದ ಎಲ್ಲಿಗೆ ಪೂರೈಕೆ ಆಗುತ್ತಿತ್ತು ಎಂದು ಪರಿಶೀಲಿಸುತ್ತೇವೆ.