ಬೆಂಗಳೂರು: ಕೌಟುಂಬಿಕ ಕಲಹ ಪ್ರಕರಣವೊಂದರಲ್ಲಿ ದಂಪತಿಗೆ ಕೌಟುಂಬಿಕ ನ್ಯಾಯಾಲಯವು ಮಂಜೂರು ಮಾಡಿದ್ದ ವಿಚ್ಛೇದನದ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.
ಮದುವೆಯಾದ ಬಳಿಕ ಗಂಡನ ಮನೆಯಲ್ಲೇ ಇದ್ದುಕೊಂಡು, ಪದೇ ಪದೆ ನಿಂದಿಸುತ್ತಾ ಎರಡನೇ ಮದುವೆಗೆ ವರನನ್ನು ಹುಡುಕಿಕೊಳ್ಳುತ್ತಿರುವುದಾಗಿ ಸಂದೇಶ ರವಾನಿಸಿದ್ದಲ್ಲದೇ, ಗಂಡನೊಂದಿಗೆ ವೈವಾಹಿಕ ಸಂಬಂಧಗಳನ್ನು ಬೆಳೆಸಲು ಮುಂದಾಗದ ಮಹಿಳೆಗೆ ಹೈಕೋರ್ಟ್ ವಿಚ್ಛೇದನಕ್ಕೆ ಅಸ್ತು ಎಂದಿದೆ.
ಕೌಟುಂಬಿಕ ನ್ಯಾಯಾಲಯ ಮಂಜೂರು ಮಾಡಿದ್ದ ವಿಚ್ಛೇದನವನ್ನು ಪ್ರಶ್ನಿಸಿ ಬೆಂಗಳೂರಿನ ವಿಜಯನಗರದ ಮಹಿಳೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನು ಶಿವರಾಮನ್ ಮತ್ತು ನ್ಯಾಯಮೂರ್ತಿ ಉಮೇಶ್ ಅಡಿಗ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ವಿವಾಹದ ಬಳಿಕ ಆಕಸ್ಮಿಕವಾಗಿ ನಡೆದ ಅಪಘಾತದಲ್ಲಿ ಪತ್ನಿಯ ತಂದೆ ಸಾವನ್ನಪ್ಪಿದ ಪರಿಣಾಮ, ನಿನ್ನನ್ನು ಮದುವೆಯಾದ ಕಾರಣದಿಂದಲೇ ನಮ್ಮ ಕುಟುಂಬಕ್ಕೆ ದುರಾದೃಷ್ಟ ಎದುರಾಗಿದೆ.
ಆದ ಕಾರಣ ನಮ್ಮ ತಂದೆ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿ ಅನುಮಾನಪಡುತ್ತಿದ್ದ ಅಂಶಗಳನ್ನು ಪರಿಗಣಿಸಿ ಕೌಟುಂಬಿಕ ನ್ಯಾಯಾಲಯ ಮಂಜೂರು ಮಾಡಿದ್ದ ವಿಚ್ಛೇದನದ ಆದೇಶದಲ್ಲಿ ಮಧ್ಯಪ್ರವೇಶಕ್ಕೆ ಹೈಕೋರ್ಟ್ ನಿರಾಕರಿಸಿದೆ.
”ಈ ಪ್ರಕರಣದಲ್ಲಿ 2018ರ ಜುಲೈನಿಂದ 2019ರ ನವೆಂಬರ್‌ವರೆಗೆ ಪತ್ನಿ ಕಳುಹಿಸಿರುವ ವಾಟ್ಸ್‌ಆ್ಯಪ್ ಸಂದೇಶಗಳನ್ನು ಪತಿ ಹೈಕೋರ್ಟ್ಗೆ ಸಲ್ಲಿಸಿದ್ದಾರೆ. ಸಂದೇಶಗಳು ಬರೋಬ್ಬರಿ 127 ಪುಟಗಳಷ್ಟಿದೆ. ಪತಿಯೊಂದಿಗೆ ಜೀವನ ನಡೆಸಲು ಪತ್ನಿಗೆ ಇಚ್ಛೆಯಿಲ್ಲ ಎಂಬುದು ಆಕೆಯ ಸಂದೇಶಗಳಿಂದ ಸ್ಪಷ್ಟವಾಗುತ್ತದೆ.
ಒಂದಲ್ಲಾ ಒಂದು ಕಾರಣಕ್ಕೆ ಪತಿ, ಆತನ ಪೋಷಕರು ಮತ್ತು ಹತ್ತಿರದ ಸಂಬಂಧಿಕರನ್ನು ಪತ್ನಿ ದೂರುತ್ತಿದ್ದರು. ಜೊತೆಗೆ, ತನ್ನ ಕನಸುಗಳನ್ನು ಪತಿ ಕೊಂದಿದ್ದಾರೆ. ವಿಚ್ಛೇದನ ನೀಡಿದರೆ ಇಬ್ಬರು ಸಂತೋಷದಿಂದ ಪ್ರತ್ಯೇಕವಾಗಿ ಜೀವಿಸಬಹುದು ಎಂದು ಪತ್ನಿ ಹೇಳಿದ್ದಾರೆ” ಎಂದು ಪೀಠ ತನ್ನ ಆದೇಶದಲ್ಲಿ ವಿವರಿಸಿದೆ.
ದಂಪತಿಯ ಪೋಷಕರ ನಿಶ್ಚಯದಂತೆ ಸವಿತಾ ಮತ್ತು ರಾಮಕೃಷ್ಣ (ಹೆಸರು ಬದಲಿಸಲಾಗಿದೆ) 2017ರ ಸೆ.27ರಂದು ವಿವಾಹವಾಗಿದ್ದರು. ಆದರೆ, 2019ರಲ್ಲಿ ವಿವಾಹ ಅನೂರ್ಜಿತಗೊಳಿಸಿ ವಿಚ್ಚೇದನ ಮಂಜೂರು ಮಾಡುವಂತೆ ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ರಾಮಕೃಷ್ಣ, ”ಮದುವೆ ನಂತರ ಪತ್ನಿ, ತನ್ನ ಅಂತಸ್ತು ಹಾಗೂ ಕನಸಿಗೆ ತಕ್ಕಂತೆ ಅದ್ದೂರಿಯಾಗಿ ಆರಕ್ಷತೆ ಮಾಡಿಲ್ಲ ಎಂದು ಆಕ್ಷೇಪಿಸಿ ಮೊದಲ ರಾತ್ರಿಗೆ ಒಪ್ಪಿರಲಿಲ್ಲ.
ನಂತರ ಒಂದಲ್ಲ ಒಂದು ಕಾರಣ ನೀಡಿ ಅದನ್ನು ಮಂದೂಡುತ್ತಲೇ ಬಂದರು. ಹಲವು ಕಾರಣ ನೀಡಿ ನನ್ನನ್ನು ನಿಂದಿಸುತ್ತಿದ್ದರು. ಕೆಲ ಸಂದರ್ಭದಲ್ಲಂತೂ ಬೆಡ್ ರೂಂನಲ್ಲಿ ನನ್ನ ಮೇಲೆ ಹಲ್ಲೆ ಸಹ ಮಾಡಿದ್ದಾರೆ” ಎಂದು ಆರೋಪಿಸಿದ್ದರು.
ಆ ಅರ್ಜಿ ಪುರಸ್ಕರಿಸಿದ್ದ ಕೌಟುಂಬಿಕ ನ್ಯಾಯಾಲಯ ವಿಚ್ಛೇದನ ಮಂಜೂರು ಮಾಡಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಸವಿತಾ ಹೈಕೋರ್ಟ್ ಮೆಟ್ಟಿಲೇರಿದ್ದರು.
”ಜೊತೆಗೆ, ಕಡಿಮೆ ವೇತನ ಪಡೆಯುತ್ತಿದ್ದು, ತನ್ನ ಕನಸುಗಳನ್ನು ಈಡೇರಿಸಲು ಹಣ ಖರ್ಚು ಮಾಡುವ ಪರಿಸ್ಥಿತಿಯಲ್ಲಿ ನೀನು ಇಲ್ಲ. ಹಾಗಾಗಿ, ತವರು ಮನೆಗೆ ಕಳುಹಿಸು ಎಂದು ಪತ್ನಿ ನನಗೆ ಒತ್ತಾಯಿಸುತ್ತಿದ್ದರು.
ಮದುವೆ ಆದ ಕೆಲ ತಿಂಗಳ ನಂತರ ಅಪಘಾತದಿಂದ ಆಕೆಯ ತಂದೆ ಸಾವನ್ನಪ್ಪಿದ್ದರೆ, ಅದಕ್ಕೂ ನಾನೇ ಕಾರಣ ಎಂದು ದೂಷಿಸಿದರು. ಸದಾ ನನ್ನನ್ನು ಅನುಮಾನಿಸುತ್ತಾ, ಫೋನ್ ಪರಿಶೀಲಿಸುತ್ತಿದ್ದರು. ಮಹಿಳಾ ಸಹೋದ್ಯೋಗಿ ಫೋನ್ನಲ್ಲಿ ಮಾತನಾಡಿದರೆ ಸಾಕು, ಅವರೊಂದಿಗೆ ಅಕ್ರಮ ಸಂಬಂಧ ಕಟ್ಟುತ್ತಿದ್ದರು. ತನಗೆ ವಿವಾಹ ಸಂಬಂಧ ಮುಂದುವರೆಸಲು ಇಷ್ಟವಿಲ್ಲ. ಅದಕ್ಕಾಗಿ ವಿಚ್ಚೇದನ ನೀಡುವಂತೆ ನನಗೆ ಒತ್ತಾಯಿಸಿ ಸಂದೇಶ ಕಳುಹಿಸುತ್ತಿದ್ದರು” ಎಂದು ಅರ್ಜಿಯಲ್ಲಿ ತಿಳಿಸಿದ್ದರು.
”ಅಲ್ಲದೆ, ತನ್ನ ಅಂತಸ್ತಿಗೆ ತಕ್ಕಂತೆ ಆರತಕ್ಷತೆ ಮಾಡಿ ಕೊಟ್ಟಿಲ್ಲ ಎಂದು ಮುನಿಸಿಕೊಂಡು ಮದುವೆಯಾಗಿ 7 ವರ್ಷ ಕಳೆದರೂ ವೈವಾಹಿಕ ಜೀವನಕ್ಕೆ ಒಪ್ಪದೇ ದೈಹಿಕ ಹಲ್ಲೆ ಮಾಡಿ, ಮಾನಸಿಕ ಹಿಂಸೆ ನೀಡಿದ್ದರು.
ವಿನಾಃಕಾರಣ ದೂಷಿಸುತ್ತಾ ಬೆಡ್ ರೂಂನಲ್ಲಿ ಪತಿಯ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಬೇರೊಬ್ಬನನ್ನು ವಿವಾಹವಾಗಲು ವಿಚ್ಛೇದನ ನೀಡುವುದು ಸೇರಿದಂತೆ ವಿವಿಧ ರೀತಿಯಲ್ಲಿ 127 ಪುಟಗಳಾಗುವಷ್ಟು ವಾಟ್ಸ್‌ಆ್ಯಪ್ ಸಂದೇಶ ಕಳುಹಿಸಿ ಕಿರುಕುಳ ನೀಡಿದ್ದರು. ಅಂತಿಮವಾಗಿ ಪತ್ನಿಯ ಈ ಎಲ್ಲ ಸಂದೇಶಗಳನ್ನು ನೋಡಿದರೆ, ವೈವಾಹಿಕ ಜೀವನ ನಡೆಸಲು ಆಕೆಗೆ ಆಸಕ್ತಿ ಇಲ್ಲ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ಅಲ್ಲದೆ, 2017ರಲ್ಲಿ ವೈವಾಹಿಕ ಜೀವನ ನಡೆಸಲು ಪತ್ನಿ ಅವಕಾಶವೇ ನೀಡಿಲ್ಲ.
ಇದರಿಂದ ಪತ್ನಿಯ ಕೈಗಳಿಂದ ಪತಿ ಕಿರುಕುಳ ಅನುಭವಿಸಿದ್ದಾರೆ. ಇದೀಗ, ಪತಿಗೆ ಕಿರುಕುಳ ನೀಡಲೆಂದೇ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ ಎಂಬುದು ತಿಳಿಯುತ್ತಿದೆ. ಆದ್ದರಿಂದ ಕೌಟುಂಬಿಕ ನ್ಯಾಯಾಲಯವು ವಿವಾಹ ವಿಚ್ಛೇದನ ಮಂಜೂರು ಮಾಡಿರುವ ಆದೇಶದಲ್ಲಿ ಮಧ್ಯ ಪ್ರವೇಶಿಸಲಾಗುವುದಿಲ್ಲ” ಎಂದು ಪೀಠ ಹೇಳಿದೆ.