ಮಂಡ್ಯ: ಮೈಸೂರು-ಬೆಂಗಳೂರು ಚತುಷ್ಪಥ ಹೆದ್ದಾರಿಯ ಜೊತೆಗೆ ಶಾಲೆಗಳಲ್ಲಿ ಮಕ್ಕಳಿಗಾಗಿ ಬಿಸಿಯೂಟ ಕಾರ‍್ಯಕ್ರಮ, ಮಂಡ್ಯ ಜಿಲ್ಲೆಯಲ್ಲೇ ಎಪಿಡಿಪಿ ಕಾರ‍್ಯಕ್ರಮದ ಮೂಲಕ ವಿದ್ಯುತ್ ಗುಣಮಟ್ಟ ಸುಧಾರಿಸುವ ಕಾರ‍್ಯಕ್ರಮಕ್ಕೆ ಚಾಲನೆ, ಸಹಕಾರಿ ರೈತ ಬಂಧುಗಳಿಗೆ ಹೆಚ್ಚಿನ ರೀತಿಯಲ್ಲಿ ನೆರವಾಗಿದ್ದ ಯಶಸ್ವಿನಿ ಯೋಜನೆಗೆ ಚಾಲನೆ ಸೇರಿ ತವರೂರು ಮಂಡ್ಯಕ್ಕೆ ಅನೇಕ ಕೊಡುಗಯನ್ನು ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರು ನೀಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಮಂಡ್ಯ ಜಿಲ್ಲೆಗೆ ನೀಡಿದ ಕೊಡುಗೆಗಳನ್ನು ಸ್ಮರಿಸಿ ಜನರು ಕಣ್ಣೀರುತ್ತಿದ್ದಾರೆ. ಮಂಗಳವಾರ ನಸುಕಿನ ಜಾವ ಕೊನೆಯುಸಿರೆಳೆದ ಎಸ್.ಎಂ.ಕೃಷ್ಣ ಅವರ ಸಾವಿನ ಸುದ್ದಿ ಹೊರ ಬೀಳುತ್ತಿದ್ದಂತೆ ಇಡೀ ಜಿಲ್ಲೆಯೇ ಕಂಬಿನಿ ಮಿಡಿಯುತ್ತಿದೆ. ಪಕ್ಷಾತೀತವಾಗಿ ಅವರನ್ನು ಸ್ಮರಿಸುತ್ತಿರುವ ಜನರು, ಜಿಲ್ಲೆಯ ರಾಜಕಾರಣಿಗಳು ಕೃಷ್ಣ ಅವರ ಸಾವಿನಿಂದಾಗಿ ದುಃಖತಪ್ತರಾಗಿದ್ದಾರೆ. ಅವರ ವ್ಯಕ್ತಿತ್ವ, ಮಾತುಗಾರಿಕೆ, ಬುದ್ಧಿವಂತಿಕೆ, ಸಾಧನೆ, ರಾಜಕಾರಣದ ಏರಿಳಿತ, ರೈತರಿಗಾಗಿ ಜಾರಿಗೊಳಿಸಿದ ಕಾರ‍್ಯಕ್ರಮಗಳನ್ನು ನೆನೆಯುತ್ತಿದ್ದಾರೆ. ಅವುಗಳ ಬಗ್ಗೆ ಚರ್ಚಿಸುತ್ತಿದ್ದಾರೆ.
ಎಸ್.ಎಂ.ಕೃಷ್ಣ ಅವರು ಬಹುದೊಡ್ಡ ಕೊಡುಗೆಯಾಗಿ ಜನರ ಕಣ್ಣೆದುರಿಗೆ ಮೊದಲು ಬರುವುದೇ ಬೆಂಗಳೂರು-ಮೈಸೂರು ಹೆದ್ದಾರಿ. ಅವರು ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರು- ಮೈಸೂರು ರಾಜ್ಯ ಹೆದ್ದಾರಿಯು ದ್ವಿಮುಖ ಸಂಚಾರ ವ್ಯವಸ್ಥೆ ಹೊಂದಿದ್ದ ಸಿಂಗಲ್ ರಸ್ತೆಯಾಗಿತ್ತು. ಈ ಹೆದ್ದಾರಿಯಲ್ಲಿ ವಾಹನಗಳು ಸಂಚರಿಸುತ್ತಿದ್ದ ರೀತಿ ಅತ್ಯಂತ ಅಪಾಯಕಾರಿಯಾಗಿತ್ತು. ರಸ್ತೆ ಕಿರಿದಾಗಿದ್ದರಿಂದ ನಿತ್ಯ ಅಪಘಾತಗಳಾಗಿ ಸಾವು-ನೋವು ಸಂಭವಿಸುತ್ತಿತ್ತು.
ಯಶಸ್ವಿನಿ ಯೋಜನೆ, ಭೂಮಿ ತಂತ್ರಾಂಶ ಜಾರಿಯೊಂದಿಗೆ ಗಣಕೀಕೃತ ಆರ್‌ಟಿಸಿ ವಿತರಣೆ, ಎಪಿಡಿಪಿ ಕಾರ‍್ಯಕ್ರಮದ ಮೂಲಕ ವಿದ್ಯುತ್ ಗುಣಮಟ್ಟ ಸುಧಾರಿಸುವ ಕಾರ‍್ಯಕ್ರಮ ಜಾರಿಯಾಯಿತು. ಏತ ನೀರಾವರಿ ಯೋಜನೆಗಳು, ಕೈಗಾರಿಕಾ ವಲಯಗಳು ಹೊಸದಾಗಿ ಸೃಷ್ಟಿಯಾಯಿತು.
ಶಾಲೆಗಳಲ್ಲಿ ಮಕ್ಕಳಿಗಾಗಿ ಬಿಸಿಯೂಟ ಕಾರ‍್ಯಕ್ರಮ ಅನುಷ್ಠಾನಗೊಂಡಿತು. ಇವುಗಳ ಪ್ರಯೋಜನವು ಜಿಲ್ಲೆಗೆ ಹೆಚ್ಚಿನ ಮಟ್ಟದಲ್ಲಿ ಆಯಿತು. ಮಂಡ್ಯ ಜಿಲ್ಲೆಯಲ್ಲೇ ಎಪಿಡಿಪಿ ಕಾರ‍್ಯಕ್ರಮದ ಮೂಲಕ ವಿದ್ಯುತ್ ಗುಣಮಟ್ಟ ಸುಧಾರಿಸುವ ಕಾರ‍್ಯಕ್ರಮಕ್ಕೆ ಚಾಲನೆ ನೀಡಿದ್ದರು.
ಆಗ ಹೆದ್ದಾರಿಯನ್ನು ಮೇಲ್ದರ್ಜೆಗೇರಿಸಲು ನಿರ್ಧರಿಸಿದ ಎಸ್.ಎಂ.ಕೃಷ್ಣ ಅವರು ಬೆಂಗಳೂರು-ಮೈಸೂರು ಹೆದ್ದಾರಿಯನ್ನು ಚತುಷ್ಪಥ ರಸ್ತೆಯಾಗಿ ಮೇಲ್ದರ್ಜೆಗೇರಿಸಿ ಹೊಸದಾಗಿ ರಸ್ತೆ ನಿರ್ಮಿಸಿದರು. ರಸ್ತೆ ಅಗಲೀಕರಣಕ್ಕೆ ರೈತರಿಂದ ಭೂ ಸ್ವಾಧೀನಪಡಿಸಿಕೊಂಡ ಭೂಮಿಗೆ ಮಾರುಕಟ್ಟೆ ಬೆಲೆಗಿಂತ 2-3 ಪಟ್ಟು ಹೆಚ್ಚು ಪರಿಹಾರ ಮೊತ್ತ ಕೊಡಿಸಿದರು.
ಚತುಷ್ಪಥ ರಸ್ತೆ ಕಾಮಗಾರಿ ಪೂರ್ಣಗೊಳ್ಳುತ್ತಿದ್ದಂತೆ ಬೆಂಗಳೂರು-ಮೈಸೂರು ನಡುವಿನ ಸಂಚಾರ ಅವಧಿಯು ಕಡಿಮೆಯಾಯಿತು. ಜತೆಗೆ, ಹೆದ್ದಾರಿ ಅಕ್ಕಪಕ್ಕದ ರಸ್ತೆಗಳಿಗೆ ಚಿನ್ನದ ಬೆಲೆ ಬಂದಿತು. ಕೇವಲ ಸಾವಿರ ರೂ. ಲೆಕ್ಕದಲ್ಲಿ ಮಾರಾಟವಾಗುತ್ತಿದ್ದ ಹೆದ್ದಾರಿ ಅಕ್ಕಪಕ್ಕದ ಜಮೀನುಗಳ ಬೆಲೆಯು ಚತುಷ್ಪಥ ರಸ್ತೆ ಕಾಮಗಾರಿಯಿಂದಾಗಿ ಲಕ್ಷ ರೂ. ದಾಟಿತು. ಇದರಿಂದ ರೈತರ ಬದುಕು ಕೂಡ ಬದಲಾಯಿತು. ಆರ್ಥಿಕವಾಗಿಯೂ ಚೇತರಿಸಿಕೊಂಡರು.
ಮುಖ್ಯವಾಗಿ ಸಹಕಾರಿ ರೈತ ಬಂಧುಗಳಿಗೆ ಹೆಚ್ಚಿನ ರೀತಿಯಲ್ಲಿ ನೆರವಾಗಿದ್ದ ಯಶಸ್ವಿನಿ ಯೋಜನೆಗೆ ಚಾಲನೆ ದೊರೆತದ್ದು ಕೂಡ ನಾಗಮಂಗಲ ತಾಲೂಕು ಆದಿಚುಂಚನಗಿರಿ ಶ್ರೀ ಕ್ಷೇತ್ರದಲ್ಲಿ. ಮಂಡ್ಯ, ಮದ್ದೂರು ತಾಲೂಕಿನಲ್ಲಿ 25ಕ್ಕೂ ಹೆಚ್ಚು ಏತ ನೀರಾವರಿ ಯೋಜನೆಗಳಿಗೆ ಕೃಷ್ಣ ಅವರು ಮಂಜೂರು ಕೊಡಿಸಿದ್ದರು.