ಬೆಳಗಾವಿ: ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಫೈನಲ್ ಹ್ಯಾಕಥಾನ್ ಸ್ಪರ್ಧೆ ಏರ್ಪಡಿಸಲಾಗಿತ್ತು. ಇಲ್ಲಿ ಅಂತಿಮ ಹಂತದ ಹ್ಯಾಕಥಾನ್ ಸ್ಪರ್ಧಾಳುಗಳೊಂದಿಗೆ ಪ್ರಧಾನಿ ವರ್ಚುಯಲ್ ಮೂಲಕ ಸಂವಾದ ನಡೆಸಿದರು.
ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯ ಹಮ್ಮಿಕೊಂಡಿದ್ದ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ 7ನೇ ಆವೃತ್ತಿಯ ಫೈನಲ್ ಹಂತದ ಹ್ಯಾಕಥಾನ್ ಸ್ಪರ್ಧಾಳುಗಳೊಂದಿಗೆ ಬುಧವಾರ ಸಂಜೆ ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುಯಲ್ ಮೂಲಕ ಸಂವಾದ ನಡೆಸಿದರು.
ರಾಷ್ಟ್ರದ ಬೇರೆ ಭಾಗಗಳಿಂದ ಅಂತಿಮ ಸುತ್ತಿಗಾಗಿ ಆಯ್ಕೆಯಾದ ಒಟ್ಟು 25 ತಂಡಗಳು ವಿಟಿಯುದಲ್ಲಿ ಆಯೋಜಿತ ಫೈನಲ್ ಹ್ಯಾಕಥಾನ್ ಸ್ಪರ್ಧೆಯಲ್ಲಿ ಭಾಗವಹಿಸಿ, ಪ್ರಧಾನಿಯವರ ಮಾತುಗಳನ್ನು ತುಂಬಾ ಉತ್ಸಾಹದಿಂದ ಆಲಿಸಿದರು.
ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಬೆಂಗಳೂರಿನ ವಿದ್ಯಾರ್ಥಿ ತೇಜಸ್ ಮಾತನಾಡಿ, “ಪ್ರಧಾನಿಯವರು ನಮ್ಮನ್ನು ಉದ್ದೇಶಿಸಿ ಮಾತನಾಡಿದ ಮಾತುಗಳು ಪ್ರೋತ್ಸಾಹದಾಯಕವಾಗಿದ್ದವು. ಅಲ್ಲದೇ ಸೈಬರ್ ಕ್ರೈಮ್ ಬಗ್ಗೆ ಯಾವ ರೀತಿ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು” ಎಂದರು.
ಮುಂಬೈನಿಂದ ಆಗಮಿಸಿದ್ದ ವಿದ್ಯಾರ್ಥಿ ಎಸ್. ಪರಮಾಜ್ “ಹ್ಯಾಕಥಾನ್ದಲ್ಲಿ ಭಾಗವಹಿಸಿದ್ದು ತುಂಬಾ ಖುಷಿ ತಂದಿದೆ. ಯುವಕರ ಸಾಮಾಜಿಕ ಜವಾಬ್ದಾರಿ ಕುರಿತು ಪ್ರಧಾನಿಯವರು ಹೇಳಿದ ಸೂಚನೆಗಳು ಅನುಕರಣೀಯ” ಎಂದು ತಿಳಿಸಿದರು.
ಮತ್ತೋರ್ವ ಮುಂಬೈ ವಿದ್ಯಾರ್ಥಿ ಅನಿಶ್ ಕುಮಾರ್ ಸಿಂಗ್ ಮಾತನಾಡಿ, “ಭಾರತದ ನದಿಗಳ ಶುಚಿತ್ವ ಹಾಗೂ ನೀರಿನ ಅಗತ್ಯತೆ ಮತ್ತು ನವಾಮಿ ಗಂಗೆ ಯೋಜನೆ ಬಗ್ಗೆ ತಿಳಿಸಿದ ಪ್ರಧಾನಿಯವರ ಮಾತಗಳು ಅರ್ಥಪೂರ್ಣವಾಗಿದ್ದವು” ಎಂದು ಹೇಳಿದರು.
ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಎಸ್. ವಿದ್ಯಾಶಂಕರ, ಕುಲಸಚಿವ ಪ್ರೊ. ಬಿ.ಇ. ರಂಗಸ್ವಾಮಿ, ಮೌಲ್ಯಮಾಪನ ಕುಲಸಚಿವ ಪ್ರೊ. ಟಿ.ಎನ್. ಶ್ರೀನಿವಾಸ ಸೇರಿದಂತೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.