ಯಾದಗಿರಿ: ಬೀದಿಬದಿ ವ್ಯಾಪಾರಿಗಳು, ತಳ್ಳು ಬಂಡಿ ವ್ಯಾಪಾರಿಗಳು ,ಬೇಕರಿಗಳು, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಸೇರಿ ಇತರೆ ಕಡೆಗಳಲ್ಲೂ ಅಸುರಕ್ಷಿತ ಹಾಗೂ ಗುಣಮಟ್ಟವಲ್ಲದ ಆಹಾರ ಪದಾರ್ಥ ಮಾರಾಟ ಮಾಡುತ್ತಿರುವ ಬಗ್ಗೆ ವ್ಯಾಪಕವಾಗಿ ದೂರುಗಳು ಕೇಳಿಬರುತ್ತಿವೆ. ನಗರದ ರೈಲ್ವೆ ನಿಲ್ದಾಣ ರಸ್ತೆಯಲ್ಲಿ, ಬಸ್ ನಿಲ್ದಾಣ, ಗಾಂಧಿ ಚೌಕ್,ಸುಭಾಶ್ಚಂದ್ರ ಬೋಸ್ ವೃತ್ತ ಸೇರಿ ಪ್ರಮುಖ ಸ್ಥಳಗಳಲ್ಲಿ ಹಾಗೂ ಜನನಿಬಿಡ ಪ್ರದೇಶದಲ್ಲಿ ಸಿಗುವ ಉಪಹಾರ ಹಾಗೂ ಊಟ ಗ್ರಾಮೀಣ ಮತ್ತು ನಗರ ಪ್ರದೇಶದ ಜನರು ವಿವಿಧ ಕಾರಣಗಳಿಗಾಗಿ ಅನಿವಾರ್ಯವಾಗಿ ಸೇವನೆ ಮಾಡುತ್ತಿದ್ದಾರೆ.
ಕೆಲವೊಂದು ಕಡೆಗಳಲ್ಲಿ ಸಿಗುವ ಆಹಾರವಂತೂ ನೋಡಿದರೆ ಸಾಕು ಇಂತಹ ಆಹಾರ ಸೇವಿಸುವುದಾದರೂ ಹೇಗೆ ಎಂದು ಆಲೋಚನೆ ಬಂದುಬಿಡುತ್ತದೆ. ಹೀಗಾಗಿ ಹೊರಗಡೆ ಆಹಾರ ಸೇವಿಸುವ ಮುನ್ನ ಸಾರ್ವಜನಿಕರು ಒಮ್ಮೆ ಯೋಚಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಕರಿದ ಎಣ್ಣೆ ಮತ್ತೆ ಬಳಸಬಾರದು ಎಂಬ ಫರ್ಮಾನು ಹೊರಡಿಸಲಾಗಿದ್ದರೂ, ಇಂತಹ ಎಣ್ಣೆಯನ್ನೇ ಬಳಕೆ ಮಾಡಲಾಗುತ್ತಿದೆ ಎಂದು ಪದೇ ಪದೇ ಆರೋಪಿಸಲಾಗುತ್ತಿದೆ. ಅಲ್ಲದೇ ತಯಾರಿಸಿದ ಆಹಾರವನ್ನು ತೆರೆದಿಡುವುದರಿಂದ ನೊಣಗಳು ಹಾಗೂ ಸೊಳ್ಳೆಯಂತಹ ಕೀಟಗಳು ಆಶ್ರಯ ಪಡೆಯುವುದರಿಂದ ಆಹಾರವೇ ಕಲುಷಿತಗೊಂಡಿರುತ್ತದೆ. ಆಹಾರ ತಯಾರಿಸುವ ಸ್ಥಳಗಳಲ್ಲಿ ನೈರ್ಮಲ್ಯ ಹಾಗೂ ಶುಚಿತ್ವ ಕಾಪಾಡಬೇಕು. ಆಹಾರ ಸುರಕ್ಷತೆ, ಸ್ವಚ್ಛತೆ, ಆಹಾರ ಕಲಬೆರಕೆ ಬಗ್ಗೆ ಎಚ್ಚರಿಕೆ ವಹಿಸಬೇಕು. ಎಫ್‌ಎಸ್‌ಎಸ್‌ಎಐ ಮಾರ್ಗಸೂಚಿಗಳನ್ನು ಪಾಲಿಸಿ ಆಹಾರ ಗುಣಮಟ್ಟಕ್ಕೆ ಪ್ರಾಮುಖ್ಯತೆ ನೀಡಬೇಕು ಎಂಬ ನಿಯಮಗಳಿವೆ.
ಹೋಟೆಲ್, ಬೇಕರಿ ಸೇರಿ ಅಗತ್ಯ ಕಡೆಗಳಲ್ಲಿಆಹಾರದ ಗುಣಮಟ್ಟದ ಪರಿಶೀಲನೆ ಕಾರ್ಯ ಕಾಲಕಾಲಕ್ಕೆ ಸೂಕ್ತ ರೀತಿಯಲ್ಲಿ ನಡೆಯುತ್ತಿಲ್ಲ.ಹೀಗಾಗಿ ಎಲ್ಲೆಂದರೆಲ್ಲಿ ತಲೆ ಎತ್ತಿರುವ ಹೋಟೆಲ್, ಬೀದಿಬದಿ ಆಹಾರ ಕೇಂದ್ರಗಳಲ್ಲಿ ಆಹಾರ ಸೇವನೆ ಸುರಕ್ಷಿತವೇ ಹಾಗೂ ತಿನ್ನಲು ಯೋಗ್ಯವೇ ಎಂಬುದು ಪ್ರಶ್ನೆ ಜನರಿಗೆ ಕಾಡುತ್ತಿದೆ.
ಕಡಿಮೆ ಗುಣಮಟ್ಟ ಹೊಂದಿರುವ ವರದಿ ಬಂದರೆ ಅವುಗಳನ್ನು ವರದಿ ಮಾಡಿ ಪ್ರಾಧಿಕಾರದ ನಿಯಮಾನುಸಾರ ಕ್ರಮ ಜರುಗಿಸಲಾಗುತ್ತಿದೆ ಆಂಜನೇಯ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಯಾದಗಿರಿ ತಾಲೂಕು ಅಧಿಕಾರಿ ಹೇಳಿದ್ದಾರೆ.
ಟೇಸ್ಟಿಂಗ್ ಪೌಡರ್ ಹಾಕಲಾಗುತ್ತಿದೆ. ಇದರಿಂದಾಗಿ ಆಸಿಡಿಟಿ ಸಲುವಾಗಿ ಅತೀ ಹೆಚ್ಚು ಮಾತ್ರೆ ತೆಗೆದುಕೊಳ್ಳುವಂತಾಗಿದೆ. ಆದರೆ, ಸಂಬಂಧಪಟ್ಟ ಅಧಿಕಾರಿಗಳು ಇಂತಹ ಆಹಾರ ಪರೀಕ್ಷೆಗೆ ಒಳಡಿಸುವ ಕೆಲಸ ಆಗುತ್ತಿಲ್ಲ. ಆರೋಗ್ಯ ಕೆಡುತ್ತಿದೆ ಎಂಬುದು ಜನರಿಗೆ ಗೊತ್ತಿಲ್ಲ, ವ್ಯಾಪಾರಿಗಳು ಹಣ ನೋಡಿದರೆ, ಜನರು ಹೊಟ್ಟೆ ತುಂಬಿಸಿಕೊಳ್ಳುವುದು ನೋಡುತ್ತಿದ್ದಾರೆ.
ಬೀದಿ ವ್ಯಾಪಾರದಲ್ಲಿಇತ್ತೀಚಿಗೆ ದಿನಗಳಲ್ಲಿಫಾಸ್ಟ್ ಫುಡ್‌ಗಳಲ್ಲಿಆರೋಗ್ಯಕ್ಕೆ ಮಾರಕವಾದ ಬಣ್ಣ ಮಿಶ್ರಣ ಹೆಚ್ಚಾಗಿದೆ. ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ಉಮೇಶ ಮುದ್ನಾಳ, ಸಾಮಾಜಿಕ ಹೋರಾಟಗಾರ ಹೇಳಿದ್ದಾರೆ.