ಕೇಂದ್ರ ಸರ್ಕಾರದ ಸುಕನ್ಯಾ ಸಮೃದ್ಧಿ ಯೋಜನೆಯಡಿಯಲ್ಲಿ ದೇಶಾದ್ಯಂತ ಹೆಣ್ಣು ಮಕ್ಕಳ ಭವಿಷ್ಯವನ್ನು ಭದ್ರಪಡಿಸುವ ಗುರಿಯನ್ನು ಹೊಂದಿರುವ ಈ ಯೋಜನೆಯಡಿ ವಾರ್ಷಿಕವಾಗಿ 5000 ರೂ. ಠೇವಣಿ ಮಾಡಿದರೆ ಮಗಳನ್ನು ಲಕ್ಷಾಧಿಪತಿಯನ್ನಾಗಿ ಮಾಡಬಹುದು ಎಂದು ಸರ್ಕಾರ ತಿಳಿಸಿದೆ.
ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ವಾರ್ಷಿಕವಾಗಿ ಗರಿಷ್ಠ 1.5 ಲಕ್ಷ ರೂ. ನಿಂದ ಕನಿಷ್ಠ 250 ರೂ. ಠೇವಣಿ ಮಾಡಬಹುದಾಗಿದೆ. ಪ್ರತಿ ವರ್ಷ 5000 ರೂ. ಠೇವಣಿ ಮಾಡುವುದಾದರೆ ಪ್ರತಿ ತಿಂಗಳು 416 ರೂ. ಠೇವಣಿ ಮಾಡಬೇಕಾಗುತ್ತದೆ. ಮಗಳು 5 ವರ್ಷ ವಯಸ್ಸಿನವರಾಗಿದ್ದರೆ 2024 ರಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯಡಿ 5000 ರೂ.ಗಳನ್ನು ಠೇವಣಿ ಮಾಡಿದರೆ ಒಟ್ಟು ಠೇವಣಿ ಮೊತ್ತ 7,5000 ರೂ. ಗಳಾಗುತ್ತವೆ.
ಈ ಮೊತ್ತವನ್ನು 15 ವರ್ಷಗಳ ಕಾಲ ಠೇವಣಿ ಮಾಡಲಾಗುತ್ತದೆ. ಆದರೆ ಯೋಜನೆಯು 21 ವರ್ಷಗಳ ಅನಂತರ ಪಕ್ವವಾಗುತ್ತದೆ. ಮುಕ್ತಾಯದ ಅನಂತರ ಒಟ್ಟು ಠೇವಣಿ ಮೊತ್ತಕ್ಕೆ ಶೇ. 8.2 ಬಡ್ಡಿ ದರವನ್ನು ಸೇರಿಸಲಾಗುತ್ತದೆ. 2024ರಲ್ಲಿ ಪ್ರಾರಂಭವಾದ ಯೋಜನೆಯು 2045ರಲ್ಲಿ ಪೂರ್ಣಗೊಳ್ಳಲಿದೆ.
ಆ ಸಮಯದಲ್ಲಿ ಮಗಳ ಖಾತೆಗೆ ಮೂಲ ಠೇವಣಿ ಮತ್ತು ಸಂಚಿತ ಬಡ್ಡಿ ಎರಡನ್ನೂ ಒಳಗೊಂಡಂತೆ ಒಟ್ಟು ಮೊತ್ತ 2,30,919 ರೂ. ಗಳಾಗಲಿವೆ.
ಸುಕನ್ಯಾ ಸಮೃದ್ಧಿ ಯೋಜನೆಯಡಿಯಲ್ಲಿ ಹೆಣ್ಣು ಮಕ್ಕಳಿಗಾಗಿ ಖಾತೆಯನ್ನು ತೆರೆಯಲು ವಿಶೇಷ ನಿಯಮಗಳಿವೆ. ಒಂದು ಕುಟುಂಬದಲ್ಲಿ ಇಬ್ಬರು ಹೆಣ್ಣು ಮಕ್ಕಳಿಗೆ ಮಾತ್ರ ಪ್ರಯೋಜನ ಪಡೆಯಬಹುದು. ಈ ಖಾತೆ ತೆರೆಯಲು ಮಗಳ ವಯಸ್ಸು 10 ವರ್ಷಕ್ಕಿಂತ ಹೆಚ್ಚಿರಬಾರದು.
ಪ್ರಸ್ತುತ ದೇಶದ ಕೋಟ್ಯಂತರ ಹೆಣ್ಣು ಮಕ್ಕಳು ಈ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ.
ಮಗಳ ಹೆಸರಿನಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ ಖಾತೆಯನ್ನು ಅಂಚೆ ಕಚೇರಿ ಅಥವಾ ಬ್ಯಾಂಕ್‌ಗಳಲ್ಲಿ ತೆರೆಯಬಹುದು.
ಸುಕನ್ಯಾ ಸಮೃದ್ಧಿ ಯೋಜನೆಯ ಕುರಿತು ಇತ್ತೀಚಿಗೆ ಪ್ರಮುಖ ಮಾಹಿತಿಯೊಂದನ್ನು ಸರ್ಕಾರ ಬಿಡುಗಡೆಗೊಳಿಸಿದ್ದು, ಈ ಯೋಜನೆಯಡಿಯಲ್ಲಿ ಹೆಣ್ಣು ಮಗುವಿನ ಪೋಷಕರು ಮಾತ್ರ ಖಾತೆಗಳನ್ನು ತೆರೆಯಬಹುದು. ಈಗಾಗಲೇ ಅಸ್ತಿತ್ವದಲ್ಲಿರುವ ಖಾತೆಗಳಿಗೆ ಕಾನೂನು ಪಾಲಕರ ಹೆಸರನ್ನು ನೋಂದಾಯಿಸುವುದು ಕಡ್ಡಾಯವಾಗಿದೆ.