ಡಮಾಸ್ಕಸ್: ಸಿರಿಯಾದಲ್ಲಿ ಬಂಡುಕೋರರ ‘ಯುಗ’ ಆರಂಭವಾಗಿದೆ. ಹಯಾತ್ ತಹ್ರೀರ್ ಅಲ್ ಶಾಮ್ ಗುಂಪು ನೇತೃತ್ವದ ಬಂಡುಕೋರ ಪಡೆಗಳು ರಾಜಧಾನಿ ಡಮಾಸ್ಕಸ್ ಅನ್ನು ತಮ್ಮ ನಿಯಂತ್ರಣಕ್ಕೆ ಪಡೆದುಕೊಂಡಿದ್ದು, ಅಧ್ಯಕ್ಷ ಬಶಾರ್ ಅಲ್ ಅಸ್ಸಾದ್ ಅವರು ಅಜ್ಞಾತ ಸ್ಥಳಕ್ಕೆ ಪಲಾಯನ ಮಾಡಿದ್ದಾರೆ.
ಆಂತರಿಕ ಸಂಘರ್ಷದಿಂದ ನಲುಗುತ್ತಿರುವ ಸಿರಿಯಾ, ಈಗ ಸಂಪೂರ್ಣವಾಗಿ ಬಂಡುಕೋರ ಪಡೆಗಳ ವಶವಾಗಿದೆ. ತಲೆಮಾರುಗಳಿಂದ ಸಿರಿಯಾ ಆಡಳಿತ ನಡೆಸುತ್ತಿರುವ ಅಧ್ಯಕ್ಷ ಬಶರ್ ಅಲ್ ಅಸ್ಸಾದ್ ಅವರು ಡಮಾಸ್ಕಸ್‌ನಿಂದ ಅಜ್ಞಾತ ಸ್ಥಳಕ್ಕೆ ಪರಾರಿಯಾಗಿದ್ದಾರೆ. ಇದು “ಯುಗಾಂತ್ಯ” ಎಂದು ಬಂಡುಕೋರರು ಘೋಷಣೆ ಮಾಡಿದ್ದಾರೆ.
ತಮ್ಮ ಪಡೆಗಳು ಡಮಾಸ್ಕಸ್ ಕಡೆ ತೆರಳುತ್ತಿವೆ ಎಂದು ಇಸ್ಲಾಮಿಸ್ಟ್ ಹಯಾತ್ ತಹ್ರೀರ್ ಅಲ್ ಶಾಮ್ ಗುಂಪು ಹೇಳಿಕೊಂಡಿದೆ. ಸಿರಿಯಾ ಆಡಳಿತದ ದೌರ್ಜನ್ಯದ ಸಂಕೇತವಾಗಿದ್ದ ಜೈಲನ್ನು ಬಂಡುಕೋರ ಪಡೆಗಳು ಪುಡಿಗಟ್ಟಿದ್ದು, ‘ಸೆಡ್ನಿಯಾದ ಕಾರಾಗೃಹದಲ್ಲಿನ ದೌರ್ಜನ್ಯದ ಯುಗ ಅಂತ್ಯಗೊಂಡಿದೆ” ಎಂದು ಘೋಷಿಸಿವೆ.
ಟರ್ಕಿ ಬೆಂಬಲಿತ ಪಡೆಗಳ ಪ್ರಾಬಲ್ಯಕ್ಕೆ ಬೆದರಿರುವ ಸಿರಿಯಾ ಪ್ರಧಾನಿ ಮೊಹಮ್ಮದ್ ಘಾಜಿ ಅಲ್ ಜಲಾಲಿ ಅವರು ಅಧಿಕಾರ ಹಸ್ತಾಂತರಕ್ಕೆ ಸರ್ಕಾರ ಸಿದ್ಧವಿದೆ ಎಂದು ತಿಳಿಸಿದ್ದಾರೆ. ಸೇನೆ ಹಾಗೂ ಭದ್ರತಾ ಪಡೆಗಳು ಡಮಾಸ್ಕಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರ ನಡೆದಿವೆ. ಇದರಿಂದ ಸಿರಿಯಾ ವಿಮಾನ ನಿಲ್ದಾಣದ ಸ್ಥಿತಿ ಅತಂತ್ರವಾಗಿದ್ದು, ಅಂತಾರಾಷ್ಟ್ರೀಯ ಸಂಚಾರ ಅಪಾಯಕ್ಕೆ ಸಿಲುಕಿದೆ ಎಂದು ವರದಿಯಾಗಿದೆ.
ಇರಾನ್ ಮೊದಲು ಎಂಬ ನೀತಿಯೊಂದಿಗೆ 24 ವರ್ಷಗಳ ಕಾಲ ಆಡಳಿತ ನಡೆಸಿದ ಅಸ್ಸಾದ್, ವಿಮಾನವೇರಿ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎಂದು ಸಿರಿಯಾದ ಹಿರಿಯ ಸೇನಾ ಅಧಿಕಾರಿಗಳು ತಿಳಿಸಿದ್ದಾರೆ. ಅಸ್ಸಾದ್ ಸರ್ಕಾರ ಪತನಗೊಂಡಿದೆ ಎಂದು ಅಧಿಕಾರಿಗಳಿಗೆ ಸೇನಾ ಕಮಾಂಡ್ ಮಾಹಿತಿ ನೀಡಿದೆ ಎನ್ನಲಾಗಿದೆ.
“ನಿರಂಕುಶಾಧಿಕಾರಿ ಬಶರ್ ಅಲ್ ಅಸ್ಸಾದ್ ಪಲಾಯನ ಮಾಡಿದ್ದಾರೆ. ಡಮಾಸ್ಕಸ್ ಈಗ ನಿರಂಕುಶಾಧಿಕಾರಿ ಬಶರ್ ಅಲ್ ಅಸ್ಸಾದ್‌ನಿಂದ ಮುಕ್ತವಾಗಿದೆ ಎಂದು ಘೋಷಿಸಿದ್ದೇವೆ” ಎಂಬುದಾಗಿ ಬಂಡುಕೋರರು ಹೇಳಿದ್ದಾರೆ.
“8-12-2024ರ ಈ ದಿನ ಸಿರಿಯಾದ ಕರಾಳ ಯುಗ ಅಂತ್ಯಗೊಂಡಿದೆ ಮತ್ತು ಹೊಸ ಯುಗ ಆರಂಭಗೊಂಡಿದೆ” ಎಂದು ಹಯಾತ್ ಹೇಳಿದೆ.
ಇದಕ್ಕೂ ಮುನ್ನ ರಾಜಧಾನಿಯತ್ತ ನುಗ್ಗುವ ಮಾರ್ಗದಲ್ಲಿ ಹೋಮ್ಸ್ ನಗರವನ್ನು ವಶಪಡಿಸಿಕೊಂಡಿರುವುದಾಗಿ ಬಂಡುಕೋರರು ತಿಳಿಸಿದ್ದರು. ಆದರೆ ಇದನ್ನು ನಿರಾಕರಿಸಿದ್ದ ಸಿರಿಯಾ ರಕ್ಷಣಾ ಇಲಾಖೆ, ಹೋಮ್ಸ್‌ನಲ್ಲಿನ ಪರಿಸ್ಥಿತಿ ಸುರಕ್ಷಿತ ಹಾಗೂ ಶಾಂತವಾಗಿದೆ ಎಂದಿದ್ದರು.
ಅಸ್ಸಾದ್ ಸರ್ಕಾರಕ್ಕೆ ಹಲವಾರು ವರ್ಷಗಳಿಂದ ಬೆಂಬಲ ನೀಡಿದ್ದ ಇರಾನ್ ಪೋಷಿತ ಹೆಜ್ಬೊಲ್ಲಾ, ತನ್ನ ಪಡೆಗಳನ್ನು ಸಿರಿಯಾ ತೊರೆಯುವಂತೆ ಸೂಚಿಸಿದೆ.
ಡಮಾಸ್ಕಸ್ ಉಪನಗರದಲ್ಲಿ ಅಸ್ಸಾದ್ ತಂದೆ, ಹಫೇಜ್ ಅಲ್ ಅಸ್ಸದ್ ಅವರ ಪ್ರತಿಮೆಯನ್ನು ಪ್ರತಿಭಟನಾಕಾರರು ಉರುಳಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಬಂಡುಕೋರರು ಪಾರಮ್ಯ ಮರೆಯುತ್ತಿದ್ದಂತೆ ನೂರಾರು ಸಿರಿಯಾ ಸೈನಿಕರು ಇರಾನ್ ಕಡೆ ಪಲಾಯನ ಮಾಡುತ್ತಿದ್ದು, ಅವರಿಗೆ ಗಡಿಗಳನ್ನು ಮುಕ್ತಗೊಳಿಸಲಾಗಿದೆ. ಅಧಿಕಾರಿಗಳು ಸೇರಿದಂತೆ ಸುಮಾರು 2 ಸಾವಿರ ಸೈನಿಕರು ಇರಾನ್ ಕಡೆ ದೌಡಾಯಿಸಿದ್ದಾರೆ ಎನ್ನಲಾಗಿದೆ.
ಇದು ಸಿರಿಯಾ ನಾಗರಿಕರಲ್ಲಿ ಆತಂಕ ಮೂಡಿಸಿದ್ದು, ಪರಿಸ್ಥಿತಿ ಪರಿಣಾಮದಿಂದ ಪ್ರಮುಖ ಬೀದಿಗಳಲ್ಲಿ ಭಾರಿ ಸಂಚಾರ ದಟ್ಟಣೆ ಉಂಟಾಗಿದೆ. ಜನರು ಎಟಿಎಂಗಳಿಂದ ಹಣ ಡ್ರಾ ಮಾಡಿಕೊಳ್ಳಲು ಸರದಿ ಸಾಲುಗಳಲ್ಲಿ ಕಾದು ನಿಲ್ಲುತ್ತಿದ್ದಾರೆ.
ಹಯಾತ್ ತಹ್ರೀರ್ ಅಲ್ ಶಾಮ್ ಗುಂಪನ್ನು 2012ರಲ್ಲಿ ಅಲ್ ನುಸ್ರಾ ಎಂಬ ಹೆಸರಲ್ಲಿ ಸ್ಥಾಪಿಸಲಾಗಿತ್ತು. ಮರು ವರ್ಷ ಅದು ಅಲ್ ಖೈದಾ ಜತೆ ಹೊಂದಾಣಿಕೆಯನ್ನು ಘೋಷಿಸಿಕೊಂಡಿತ್ತು. ಆದರೆ 2016ರಲ್ಲಿ ಈ ನಂಟು ಕಡಿದುಕೊಂಡು ಹೆಸರು ಬದಲಿಸಿಕೊಂಡಿತ್ತು. ಆದರೆ ಇದು ಅಲ್ ಖೈದಾ ಅಂಗ ಎಂದೇ ಅಮೆರಿಕ, ಬ್ರಿಟನ್ ಹಾಗೂ ಇತರೆ ಅನೇಕ ದೇಶಗಳು ಪರಿಗಣಿಸಿವೆ.