ಪೋರ್ಟ್ ಸುಡಾನ್: ಸ್ಥಳಾಂತರಗೊಂಡಿರುವ ಸಾವಿರಾರು ಜನರಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಲು ನೆರವು ನೀಡಬೇಕೆಂದು ಸುಡಾನ್ನ ರೆಡ್ ಸೀ ಪ್ರಾಂತ್ಯದ ಸರ್ಕಾರವು ಅಂತಾರಾಷ್ಟ್ರೀಯ ಸಮುದಾಯ ಮತ್ತು ಮಾನವೀಯ ಸಂಸ್ಥೆಗಳಿಗೆ ಮನವಿ ಮಾಡಿದೆ.
“ಪ್ರಾಂತ್ಯದಲ್ಲಿ ಅತ್ಯಧಿಕ ಸಂಖ್ಯೆಯ ಸ್ಥಳಾಂತರಗೊಂಡ ಜನರಿದ್ದು, ಇವರ ಸಂಖ್ಯೆ ಇನ್ನೂ ಹೆಚ್ಚುತ್ತಿದೆ” ಎಂದು ರೆಡ್ ಸೀ ಪ್ರಾಂತ್ಯದ ಸಮಾಜ ಕಲ್ಯಾಣ ಸಚಿವ ಇಲ್ಹಾಮ್ ಇಡ್ರಿಸ್ ಗಸ್ಮಾಲ್ಲಾ ಹೇಳಿದರು.
“ಇಷ್ಟೊಂದು ದೊಡ್ಡ ಸಂಖ್ಯೆಯ ಜನರಿಗೆ ನಾವು ಸಾಧ್ಯವಿರುವ ಎಲ್ಲ ಸಹಾಯ ಮಾಡುತ್ತೇವೆ. ಆದರೆ, ಅವರಿಗೆ ಅಗತ್ಯ ಇರುವುದೆಲ್ಲವನ್ನೂ ನೀಡಲು ಸಾಧ್ಯವಾಗುತ್ತಿಲ್ಲ. ಈ ಕೊರತೆ ನೀಗಿಸಲು ನಾವು ಪ್ರಯತ್ನಿಸುತ್ತಿದ್ದೇವೆ” ಎಂದು ಅವರು ಹೇಳಿದರು. ಸ್ಥಳಾಂತರಗೊಂಡವರಿಗೆ ಆಶ್ರಯ ಸಾಮಗ್ರಿಗಳು, ವೈದ್ಯಕೀಯ ಸರಬರಾಜು ಮತ್ತು ಪರಿಸರ ನೈರ್ಮಲ್ಯ ಸಂಪನ್ಮೂಲಗಳ ತುರ್ತು ಅಗತ್ಯ ಒತ್ತಿ ಹೇಳಿದ ಗಸ್ಮಾಲ್ಲಾ ಅಂತಾರಾಷ್ಟ್ರೀಯ ಸಹಾಯಕ್ಕಾಗಿ ಮನವಿ ಮಾಡಿದರು ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
“ಟೆಂಟ್ಗಳ ಕೊರತೆ ತೀವ್ರವಾಗಿದೆ ಮತ್ತು ರೆಡ್ ಸೀ ಪ್ರಾಂತ್ಯದಲ್ಲಿ ಇಷ್ಟರಲ್ಲೇ ಮಳೆಗಾಲ ಪ್ರಾರಂಭವಾಗುತ್ತಿರುವುದರಿಂದ, ನೈರ್ಮಲ್ಯ ಮತ್ತು ರೋಗ ನಿಯಂತ್ರಣಕ್ಕೆ ಅಗತ್ಯ ವಸ್ತುಗಳ ಪೂರೈಕೆಗಳ ಜೊತೆಗೆ ಜ್ವರದಂಥ ಸೀಸನಲ್ ಸಾಂಕ್ರಾಮಿಕ ರೋಗಗಳನ್ನು ಎದುರಿಸಲು ನಮಗೆ ತುರ್ತಾಗಿ ಔಷಧಗಳ ಅಗತ್ಯವಿದೆ” ಎಂದು ಅವರು ಹೇಳಿದರು.
ಸ್ಥಳಾಂತರಗೊಂಡವರ ಮೂಲಭೂತ ಅಗತ್ಯಗಳನ್ನು ಪೂರೈಸಲು ಫೆಡರಲ್ ಸರ್ಕಾರದ ಮಾನವೀಯ ನೆರವು ಆಯೋಗ ಮತ್ತು ರಾಜ್ಯ ಸರ್ಕಾರದ ಪ್ರಯತ್ನಗಳನ್ನು ಗಸ್ಮಾಲ್ಲಾ ಶ್ಲಾಘಿಸಿದರು. ಸುಮಾರು 21,000 ಸ್ಥಳಾಂತರಗೊಂಡ ಕುಟುಂಬಗಳಿಗೆ ಸ್ಥಳಾವಕಾಶ ಕಲ್ಪಿಸಲು ಸ್ಥಳೀಯ ಸರ್ಕಾರವು ರಾಜ್ಯದ ರಾಜಧಾನಿ ಪೋರ್ಟ್ ಸುಡಾನ್ ನಲ್ಲಿ 80 ಕೇಂದ್ರಗಳನ್ನು ನಿಗದಿಪಡಿಸಿದ್ದು, ಇವುಗಳಲ್ಲಿ ಒಟ್ಟು ಸುಮಾರು 1,05,000 ಜನ ಆಶ್ರಯ ಪಡೆದಿದ್ದಾರೆ.
ಪೋರ್ಟ್ ಸುಡಾನ್ನಲ್ಲಿ ಸುಮಾರು 44,448 ಸ್ಥಳಾಂತರಗೊಂಡ ಕುಟುಂಬಗಳ ಸುಮಾರು 2,22,240 ಜನ ಕೂಡ ಆಶ್ರಯ ಪಡೆದಿದ್ದಾರೆ. ಸುಡಾನ್ನಲ್ಲಿ 2023 ರ ಏಪ್ರಿಲ್ ಮಧ್ಯದಿಂದ ಸುಡಾನ್ ಸಶಸ್ತ್ರ ಪಡೆಗಳು ಮತ್ತು ಅರೆಸೈನಿಕ ಕ್ಷಿಪ್ರ ಬೆಂಬಲ ಪಡೆಗಳ ನಡುವೆ ಸಂಘರ್ಷ ನಡೆಯುತ್ತಿದೆ.
ಸಂಘರ್ಷದಿಂದಾಗಿ ಅಕ್ಟೋಬರ್ 14 ರ ಹೊತ್ತಿಗೆ, 24,850 ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ.
ಅಕ್ಟೋಬರ್ 29 ರ ವೇಳೆಗೆ ಸುಡಾನ್ ಒಳಗೆ ಅಥವಾ ಹೊರಗೆ 14 ದಶಲಕ್ಷಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ ಎಂದು ಅಂತಾರಾಷ್ಟ್ರೀಯ ವಲಸೆ ಸಂಸ್ಥೆ ಅಂದಾಜಿಸಿದೆ.