ಕೊಪ್ಪಳ: ಮಕ್ಕಳಿಲ್ಲದೆ ಕೊರಗುತ್ತಿದ್ದ ಇಟಲಿಯ ದಂಪತಿ ಕೊಪ್ಪಳದ ದತ್ತು ಸ್ವೀಕಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ಮೂವರು ಅನಾಥ ಹೆಣ್ಣುಮಕ್ಕಳನ್ನು ತಮ್ಮ ಮಕ್ಕಳಂತೆ ಬೆಳೆಸುವ ವಾಗ್ದಾನದೊಂದಿಗೆ ಅವರನ್ನು ದತ್ತು ಪಡೆದು ಇಟಲಿಗೆ ಕರೆದೊಯ್ದಿದ್ದಾರೆ.
2019ರಲ್ಲಿ ಕೊಪ್ಪಳ ನಗರದ ಅಂಬೇಡ್ಕರ್ ಸರ್ಕಲ್‌ನಲ್ಲಿ ದೊರಕಿದ ಮೂವರು ಅನಾಥ ಶಿಶುಗಳು, ಇಟಲಿಯ ಶಿಕ್ಷಕಿ ಹಾಗೂ ಬ್ಯಾಂಕ್ ಉದ್ಯೋಗಿ ದಂಪತಿಯ ಮಡಿಲು ಸೇರಿದ್ದಾರೆ.ಸ್ಥಳೀಯ ಪೊಲೀಸರಿಗೆ ಸಿಕ್ಕ ಈ ಮೂವರು ಹೆಣ್ಣು ಶಿಶುಗಳನ್ನು ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಲಾಗಿತ್ತು.
ಮೂವರು ಹೆಣ್ಣು ಮಕ್ಕಳು ಕೊಪ್ಪಳದ ದತ್ತು ಸಾಧ್ವಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದರು. ದತ್ತು ಕೇಂದ್ರದ ಸಿಬ್ಬಂದಿಯ ಜತೆ ಸಂತಸದಿಂದ ಕಾಲ ಕಳೆಯುತ್ತಿದ್ದರು. ಮೂವರು ಮಕ್ಕಳಲ್ಲಿ ಒಬ್ಬರನ್ನು ದತ್ತು ತೆಗೆದುಕೊಳ್ಳಲು ಕೆಲವರು ಮುಂದೆ ಬಂದರು. ಆದರೆ, ತಂದೆ-ತಾಯಿ ಪ್ರೀತಿಯಿಂದ ವಂಚಿತರಾದ ಮೂವರು ಮಕ್ಕಳನ್ನು ಅಗಲಿಸಬಾರದು ಎಂಬ ಚಿಂತನೆಯಿಂದ ಮೂವರು ಮಕ್ಕಳನ್ನೂ ಸಾಕುವ ದಂಪತಿಗೆ ದತ್ತು ಕೊಡುವ ತಿರ್ಮಾನ ಕೈಗೊಳ್ಳಲಾಯಿತು.
ಇತರ 38 ಮಕ್ಕಳನ್ನು ತಮಿಳುನಾಡು, ಮಹಾರಾಷ್ಟ್ರ, ಕೇರಳ, ದೆಹಲಿ ಸೇರಿ ರಾಜ್ಯದ ವಿವಿಧ ಜಿಲ್ಲೆಗಳ ಮಕ್ಕಳಿಲ್ಲದ ದಂಪತಿಗಳು ಮುದ್ದಿನಿಂದ ಸಾಕುತ್ತಿದ್ದಾರೆ. ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ 2015ರಿಂದ ಈವೆರೆಗೆ 23 ಮಕ್ಕಳನ್ನು ಕೆಲವು ಸಮಸ್ಯಾತ್ಮಕ ಪಾಲಕರೇ ಒಪ್ಪಿಸಿದ್ದರೆ, ಚರಂಡಿ, ಪೊದೆಗಳಲ್ಲಿ ಸಿಕ್ಕ 19 ಮಕ್ಕಳಿಗೂ ಘಟಕದಲ್ಲಿ ನೆಲೆ ಒದಗಿಸಲಾಗಿತ್ತು.
7ಮಕ್ಕಳು ಮೃತಪಟ್ಟಿದ್ದು, ದತ್ತು ಕೇಂದ್ರದಲ್ಲಿ ಸದ್ಯ ಇದ್ದ 6 ಮಕ್ಕಳ ಪೈಕಿ ಮೂವರು ಬಾಲಕಿಯರು ಇಟಲಿಗೆ ದತ್ತು ರೂಪದಲ್ಲಿ ತೆರಳಿದ್ದಾರೆ.
“ತಮಗೆ ಬೇಡವಾದ ನವಜಾತ ಶಿಶುಗಳನ್ನು ಯಾರೂ ರಸ್ತೆ, ಚರಂಡಿ, ಪೊದೆಗಳಲ್ಲಿ ಬಿಸಾಡಬಾರದು. ಮಮತೆಯ ತೊಟ್ಟಿಲಿನಲ್ಲಿ ಹಾಕಿದ ಮಕ್ಕಳಿಗೆ ಉತ್ತಮ ಭವಿಷ್ಯ ದೊರೆಯಲಿದೆ” ಎಂದು ಕೊಪ್ಪಳ ಜಿಲ್ಲಾಧಿಕಾರಿ ನಲಿನ್ ಅತುಲ್ ಮನವಿ ಮಾಡಿದ್ದಾರೆ.