ಹೊಸದಿಲ್ಲಿ: ರಾಜಧಾನಿಯ ವಾಯು ಮಾಲಿನ್ಯ ಪ್ರಮಾಣ ತೀವ್ರ ಸ್ವರೂಪಕ್ಕೆ ಮುಟ್ಟಿದ್ದು, ಇನ್ನೂರಕ್ಕೂ ಅಧಿಕ ವಿಮಾನಗಳ ಸಂಚಾರ ವಿಳಂಬವಾಗಿದೆ. ಕೆಲವು ಪ್ರದೇಶಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ ಅಪಾಯಕಾರಿ ಸ್ವರೂಪಕ್ಕೆ ತಲುಪಿದೆ. ನೆರೆಯ ರಾಜ್ಯಗಳಲ್ಲಿಯೂ ಹೊಂಜು ಅಡಚಣೆ ಉಂಟುಮಾಡಿದೆ.
ಉಸಿರಾಡಲು ಶುದ್ದ ಗಾಳಿ, ಆಹ್ಲಾದಕರ ವಾತಾವರಣ ಇಲ್ಲದೆ ಜನಸಾಮಾನ್ಯರು ಪರದಾಡುವ ಪರಿಸ್ಥಿತಿ ಮತ್ತೆ ಮರುಕಳಿಸಿದೆ. ಗುರುವಾರ ಬೆಳಿಗ್ಗೆ ದಟ್ಟನೆಯ ಹೊಂಜು ಆವರಿಸಿದ್ದನ್ನು ಕಂಡು ದಿಲ್ಲಿಗರು ಕಂಗಾಲಾಗಿದ್ದಾರೆ.
ವಾಯು ಗುಣಮಟ್ಟ ಸೂಚ್ಯಂಕದಲ್ಲಿ (ಎಕ್ಯೂಐ) ಮಟ್ಟ ಅಪಾಯಕಾರಿ ಹಂತದತ್ತ ತಲುಪುತ್ತಿದ್ದು, 432 ಅಂಶ ದಾಖಲಾಗಿದೆ. ಬುಧವಾರ ರಾತ್ರಿ 11 ಗಂಟೆಗೆ ಇದು 452 ಇದ್ದು, ಕೊಂಚ ಇಳಿಕೆಯಾಗಿದೆ.
ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಐಜಿಐ) ಗೋಚರತೆ ಮಟ್ಟ ಬೆಳಿಗ್ಗೆ 5.30ರ ವೇಳೆಗೆ 800 ಮೀಟರ್ ಇದ್ದರೆ, 6.30ರ ಹೊತ್ತಿಗೆ 500 ಮೀಟರ್‌ಗೆ ಕುಸಿದಿತ್ತು. ಕಡಿಮೆ ಗೋಚರತೆ ಕಾರಣದಿಂದಾಗಿ 203 ವಿಮಾನಗಳ ಸಂಚಾರ ವಿಳಂಬವಾಗಿದೆ ಎಂದು ಪ್ಲೈಟ್ ಟ್ರೇಡರ್ ತಿಳಿಸಿದೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಪ್ರಕಾರ, ರಾಜಧಾನಿ ಭಾಗದ ಹಲವು ಪ್ರದೇಶಗಳಲ್ಲಿ ಎಕ್ಯೂಐ ಪ್ರಮಾಣ 450 ದಾಟಿದೆ.
ಪಂಜಾಬಿನ ಅಮೃತಸರ ಹಾಗೂ ಪಠಾಣ್‌ಕೋಟ್ ವಿಮಾನ ನಿಲ್ದಾಣಗಳಲ್ಲಿ ಗೋಚರತೆ ಪ್ರಮಾಣ ಬೆಳಿಗ್ಗೆ 5.30ರ ವೇಳೆಗೆ ಶೂನ್ಯ ಇತ್ತು. ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ಕೂಡ ಶೂನ್ಯ ಗೋಚರತೆ ದಾಖಲಾಗಿದೆ.
‘ಚಳಿಗಾಲದ ಮಂಜಿನ ಕಾರಣದಿಂದ ಕೆಲವು ವಿಮಾನಗಳ ಸಂಚಾರ ವಿಳಂಬವಾಗಬಹುದು. ಹೀಗಾಗಿ ತಮ್ಮ ವಿಮಾನಗಳ ಸ್ಥಿತಿಗತಿಗಳ ಬಗ್ಗೆ ಅವಲೋಕಿಸುತ್ತಿರಿ’ ಎಂಬುದಾಗಿ ತನ್ನ ಪ್ರಯಾಣಿಕರಿಗೆ ಇಂಡಿಗೋ ಬೆಳಿಗ್ಗೆ ಪ್ರಯಾಣ ಸೂಚನೆ ಪ್ರಕಟಿಸಿತ್ತು.
ಆನಂದ ವಿಹಾರ್, ಅಶೋಕ್ ವಿಹಾರ್, ಬವಾನಾ, ದ್ವಾರಕಾ, ಜಹಾಂಗೀರ್‌ಪುರಿ, ಮುಂಡ್ಕ, ನಜಾಫ್‌ಗಡ, ಲಾಜ್‌ಪತ್ ನಗರ್, ಪತ್ಪರ್‌ಗಂಜ್, ಪಂಜಾಬಿ ಬಾಗ್, ಆರ್‌ಕೆ ಪುರಂ, ರೋಹಿಣಿ, ವಿವೇಕ್ ವಿಹಾರ್ ಮತ್ತು ವಾಜಿರ್‌ಪುರ ಪ್ರದೇಶಗಳನ್ನು ಎಕ್ಯೂಐ ಸರಾಸರಿ ‘ತೀವ್ರ’ ಸ್ವರೂಪದ ವರ್ಗದಲ್ಲಿ ಗುರುತಿಸಲಾಗಿದ್ದು, ಬೆಳಿಗ್ಗೆ 6 ಗಂಟೆ ಸುಮಾರಿಗೆ 450ಕ್ಕಿಂತ ಅಧಿಕವಿತ್ತು.
‘ಅಮೃತಸರ, ವಾರಾಣಸಿ ಮತ್ತು ದಿಲ್ಲಿಗೆ ಬರುವ ಹಾಗೂ ಇವುಗಳಿಂದ ಹೊಗುವ ವಿಮಾನಗಳ ಸಂಚಾರಕ್ಕೆ ಅಡ್ಡಿಯಾಗಬಹುದು. ರಸ್ತೆ ಸಂಚಾರಕ್ಕೆ ಸಹ ಗೋಚರತೆ ಪ್ರಮಾಣ ಕಡಿಮೆ ಇರುವುದರಿಂದ ಪ್ರಯಾಣಕ್ಕೆ ಹೆಚ್ಚಿನ ಸಮಯ ಇರಿಸಿಕೊಳ್ಳಿ’ ಎಂದು ಸಲಹೆ ನೀಡಿತ್ತು.
ದಿಲ್ಲಿ ವಿಮಾನ ನಿಲ್ದಾಣ ಸಹ ಪ್ರಯಾಣಿಕರಿಗೆ ಅಡಚಣೆಯಾಗುವ ಬಗ್ಗೆ ಸೂಚನೆ ಹೊರಡಿಸಿತ್ತು. ಹೊಂಜಿನ ವಾತಾವರಣ ಕಾರಣದಿಂದಾಗಿ ಐಜಿಐ ವಿಮಾನ ನಿಲ್ದಾಣದಲ್ಲಿ ಸರಾಸರಿ 30 ನಿಮಿಷದಷ್ಟು ವಿಮಾನ ಸಂಚಾರ ವಿಳಂಬವಾಗಿತ್ತು.