ಬೆಂಗಳೂರು: ಕಳೆದ ತಿಂಗಳು ಕಂದಾಯ ಸಚಿವ ಹಾಗೂ ಬ್ಯಾಟರಾಯನಪುರ ಶಾಸಕ ಕೃಷ್ಣ ಬೈರೇಗೌಡ ಅವರು ಎನ್‌ಎಚ್‌ಎಐ ಮತ್ತು ಬೆಂಗಳೂರು ಟ್ರಾಫಿಕ್ ಪೊಲೀಸ್ ಅಧಿಕಾರಿಗಳೊಂದಿಗೆ ಈ ಮಾರ್ಗದಲ್ಲಿ ಟ್ರಾಫಿಕ್ ದಟ್ಟಣೆಯನ್ನು ಕಡಿಮೆ ಮಾಡುವ ಕುರಿತು ಸಭೆ ನಡೆಸಿದ್ದರು.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ರಸ್ತೆಯಲ್ಲಿ ಸಂಚಾರ ದಟ್ಟಣೆ ಸಮಸ್ಯೆ ತಲೆದೋರಿದ್ದು, ಈ ಹಿನ್ನೆಲೆಯಲ್ಲಿ ಸಾದಹಳ್ಳಿ ಜಂಕ್ಷನ್‌ನಲ್ಲಿ ಮೇಲ್ಸೇತುವೆ ನಿರ್ಮಿಸುವ ಯೋಜನೆಯನ್ನು ಮುಂದುವರೆಸುವುದಾಗಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಹೇಳಿದೆ.
ಹೆಬ್ಬಾಳದಲ್ಲಿ ಎನ್‌ಎಚ್‌ಎಐ ರಸ್ತೆ ಪ್ರಾರಂಭವಾಗುತ್ತದೆ. ವಾಹನ ಸವಾರರು ವಿಮಾನ ನಿಲ್ದಾಣದ ಮೇಲ್ಸೇತುವೆ ಬಳಸಿ ಸಾದಹಳ್ಳಿಯಲ್ಲಿರುವ ಟೋಲ್ ಪ್ಲಾಜಾ ತಲುಪುತ್ತಿದ್ದಾರೆ. ಇದರಿಂದ ಟೋಲ್ ಪ್ಲಾಜಾದ ಬಳಿಯಿರುವ ಜಂಕ್ಷನ್’ನಲ್ಲಿ ಅಡಚಣೆಯಾಗುತ್ತಿದ್ದು, ಇದರಿಂದ ಸಂಚಾರ ದಟ್ಟಣೆ ಸಮಸ್ಯೆ ಎದುರಾಗುತ್ತಿದೆ ಎಂದು ಎನ್‌ಎಚ್‌ಎಐ ಪ್ರಾದೇಶಿಕ ಅಧಿಕಾರಿ (ಕರ್ನಾಟಕ) ವಿಲಾಸ್ ಪಿ ಬ್ರಹ್ಮಂಕರ್ ಅವರು ಹೇಳಿದ್ದಾರೆ.
ಕಳೆದ ತಿಂಗಳು ಕಂದಾಯ ಸಚಿವ ಹಾಗೂ ಬ್ಯಾಟರಾಯನಪುರ ಶಾಸಕ ಕೃಷ್ಣ ಬೈರೇಗೌಡ ಅವರು ಎನ್‌ಎಚ್‌ಎಐ ಮತ್ತು ಬೆಂಗಳೂರು ಟ್ರಾಫಿಕ್ ಪೊಲೀಸ್ ಅಧಿಕಾರಿಗಳೊಂದಿಗೆ ಈ ಮಾರ್ಗದಲ್ಲಿ ಟ್ರಾಫಿಕ್ ದಟ್ಟಣೆಯನ್ನು ಕಡಿಮೆ ಮಾಡುವ ಕುರಿತು ಸಭೆ ನಡೆಸಿದ್ದರು.
ಸಮಸ್ಯೆ ಪರಿಹಾರಕ್ಕಾಗಿ ಎನ್‌ಎಚ್‌ಎಐ ಮೇಲ್ಸೇತುವೆಯನ್ನು ನಿರ್ಮಿಸಲಿದೆ. ಈ ಮೇಲ್ಸೇತುವೆಯಿಂದ ರಸ್ತೆಯು ಸಿಗ್ನಲ್ ಮುಕ್ತವಾಗಲಿದೆ. ಶೀಘ್ರದಲ್ಲೇ ಟೆಂಡರ್ ಆಹ್ವಾನಿಸಿ, ಮೇಲ್ಸೇತುವೆ ಕಾಮಗಾರಿಯನ್ನು ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.
ಕ್ಯಾಬೂ್ ಚಾಲಕ ಪ್ರಮೋದ್ ಅವರು ಮಾತನಾಡಿ, ಪ್ರತಿನಿತ್ಯ ಸಾವಿರಾರು ಜನರು ಹೆಬ್ಬಾಳ ರಸ್ತೆಯ ಮೂಲಕ ವಿಮಾನ ನಿಲ್ದಾಣ ರಸ್ತೆಗೆ ಬರುತ್ತಾರೆ. ಇದರಿಂದ ಕಾವೇರಿ ಥಿಯೇಟರ್ ಜಂಕ್ಷನ್ ಮತ್ತು ಮೇಖ್ರಿ ವೃತ್ತದ ಬಳಿ ಹೆಬ್ಬಾಳ ಕಡೆಗೆ ಸಾಗುವ ರಸ್ತೆಯಲ್ಲಿ ಪ್ರತಿನಿತ್ಯ ಸಂಚಾರ ದಟ್ಟಣೆ ಎದುರಾಗುತ್ತಿದೆ. ಹೆಬ್ಬಾಳದ ನಂತರ ವಿಮಾನ ನಿಲ್ದಾಣದ ರಸ್ತೆಯ ಮೇಲ್ಸೇತುವೆಯನ್ನು ಪ್ರವೇಶಿಸಿದರೆ, ಸಾದಹಳ್ಳಿಯ ಟ್ರಾಫಿಕ್ ಸಿಗ್ನಲ್ ಅನ್ನು ಸ್ವಲ್ಪ ಸಮಯದಲ್ಲೇ ತಲುಪುತ್ತೇವೆ. ಆದರೆ, ಅಲ್ಲಿಂದ ವೇಗವಾಗಿ ಬಂದರೂ, ಆ ಸಮಯ ಟ್ರಾಫಿಕ್ ಸಿಗ್ನಲ್ ನಿಂದ ವ್ಯರ್ಥಾಗುತ್ತಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಮೇಲ್ಸೇತುವೆ ನಿರ್ಮಿಸುವ ಎನ್‌ಎಚ್‌ಎಐ ಯೋಜನೆಯನ್ನು ಸ್ವಾಗತಿಸಿದ ಅವರು, ಕೆಐಎ ಕಡೆಗೆ ಮತ್ತು ಮುಂದೆ ಬಳ್ಳಾರಿ ರಸ್ತೆಯಲ್ಲಿ ಸುಗಮ ಸಂಚಾರವನ್ನು ಇದು ಖಚಿತಪಡಿಸುತ್ತದೆ ಎಂದು ತಿಳಿಸಿದರು.