ರಿಯಾದ್ (ಸೌದಿ ಅರೇಬಿಯಾ) : ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ಆಯ್ಕೆಯಾದ ಬೆನ್ನಲ್ಲೇ, ಗಾಜಾ ಮತ್ತು ಲೆಬನಾನ್ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಯ ವಿರುದ್ಧ ಅರಬ್ ಮತ್ತು ಮುಸ್ಲಿಂ ದೇಶಗಳ ನಾಯಕರು ಒಂದಾಗಿದ್ದಾರೆ. ಈ ನಿಟ್ಟಿನಲ್ಲಿ ಸೌದಿ ಅರೇಬಿಯಾದಲ್ಲಿ ಸೋಮವಾರ ಸಭೆ ನಡೆಸಿದರು.
ರಿಯಾದ್‌ನಲ್ಲಿ ಮುಸ್ಲಿಂ ನಾಯಕರು ಸಭೆ ನಡೆಸುವ ಬಗ್ಗೆ ಅಕ್ಟೋಬರ್ನಲ್ಲೇ ದಿನಾಂಕ ನಿಗದಿ ಮಾಡಲಾಗಿತ್ತು. ಪ್ರತ್ಯೇಕ ಪ್ಯಾಲೆಸ್ಟೈನ್ ದೇಶ ರಚಿಸುವುದು ಈ ಹೊಸ ‘ಅಂತಾರಾಷ್ಟ್ರೀಯ ಮೈತ್ರಿಕೂಟ’ದ ಒತ್ತಾಯವಾಗಿದೆ.
ಕೈರೋ ಮೂಲದ ಅರಬ್ ರಾಷ್ಟ್ರಗಳು ಮತ್ತು ಜೆಡ್ಡಾ ಭಾಗದ ಇಸ್ಲಾಮಿಕ್ ದೇಶಗಳು ರಿಯಾದ್‌ನಲ್ಲಿ ಸಭೆ ನಡೆಸುವುದಕ್ಕೂ ಮೊದಲು ವರ್ಷದ ಹಿಂದೆ ಇದೇ ರೀತಿಯ ಸಭೆ ನಡೆಸಿದ್ದವು.
ಸಭೆಯಲ್ಲಿ ಗಾಜಾದಲ್ಲಿ ಇಸ್ರೇಲಿ ಪಡೆಗಳು ನಡೆಸುತ್ತಿರುವ ಕಾರ್ಯಾಚರಣೆಗಳು ‘ಅನಾಗರಿಕ’ ಎಂದು ಕೂಟ ಖಂಡಿಸಿತ್ತು.
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಆಯ್ಕೆಯಾಗಿದ್ದು, ಮುಸ್ಲಿಂ ರಾಷ್ಟ್ರಗಳನ್ನು ಕಂಗೆಡಿಸಿದೆ. ಟ್ರಂಪ್ ಇಸ್ರೇಲ್ಗೆ ಬೆಂಬಲ ನೀಡುವ ಸಾಧ್ಯತೆಯನ್ನು ಅವು ಮನಗಂಡಿವೆ. ಹೀಗಾಗಿ, ಅಮೆರಿಕದ ಮುಂದಿನ ಅಧ್ಯಕ್ಷರಿಗೆ ಪೂರ್ವ ಸಂದೇಶ ರವಾನಿಸಲು ಈ ಸಭೆ ನಡೆಸಲಾಗಿದೆ ಎಂದು ವಿಶ್ಲೇಷಿಸಲಾಗಿದೆ.
ಇಂಟರ್ನ್ಯಾಷನಲ್ ಕ್ರೈಸಿಸ್ ಗ್ರೂಪ್ ಥಿಂಕ್ ಟ್ಯಾಂಕ್‌ನ ಹಿರಿಯ ವಿಶ್ಲೇಷಕ ಅನ್ನಾ ಜೇಕಬ್ಸ್ ಪ್ರಕಾರ, ಮುಸ್ಲಿಂ ನಾಯಕರ ಈ ಸಭೆಯು ಯುಎಸ್ ನಿಲುವನ್ನು ಪ್ರಶ್ನಿಸುವುದಾಗಿದೆ. ಮುಂಬರುವ ಟ್ರಂಪ್ ಆಡಳಿತಕ್ಕೆ ಇದು ಮುನ್ನೆಚ್ಚರಿಕೆ ಗಂಟೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಮಾಜಿ ಅಧ್ಯಕ್ಷರ ಮೊದಲ ಅವಧಿಯ ಆಡಳಿತದಲ್ಲಿ ಇಸ್ರೇಲ್ಗೆ ಅವರು ಬೆಂಬಲವಾಗಿ ನಿಂತಿದ್ದರು. ಜೆರುಸಲೆಮ್ ಅನ್ನು ಇಸ್ರೇಲ್‌ನ ರಾಜಧಾನಿಯಾಗಿ ಗುರುತಿಸುವ ಮೂಲಕ, ವಾಷಿಂಗ್ಟನ್‌ನ ರಾಯಭಾರ ಕಚೇರಿಯನ್ನು ಅಲ್ಲಿಗೆ ಸ್ಥಳಾಂತರಿಸಿ ಅಂತಾರಾಷ್ಟ್ರೀಯ ಒಮ್ಮತಕ್ಕೆ ಸವಾಲು ಹಾಕಿದ್ದರು. ಜೊತೆಗೆ ಆಕ್ರಮಿತ ಗಾಜಾ ಪಟ್ಟಿಯಲ್ಲಿ ಇಸ್ರೇಲಿ ಸೇನಾಪಡೆಗಳನ್ನು ನಿಯೋಜಿಸಲು ಅನುಮೋದಿಸಿದ್ದರು. ಇದು ಅಂತಾರಾಷ್ಟ್ರೀಯ ಕಾನೂನಿಗೆ ವಿರುದ್ಧವಾಗಿತ್ತು.
ಇಸ್ರೇಲ್‌ನ ಅಧಿಕೃತ ಅಂಕಿಅಂಶಗಳ ಪ್ರಕಾರ, 2023ರ ಅಕ್ಟೋಬರ್ 7 ರಂದು ದಕ್ಷಿಣ ಇಸ್ರೇಲ್ ಮೇಲೆ ಹಮಾಸ್ ಉಗ್ರರು ದಾಳಿ ಮಾಡಿ 1,206 ಜನರನ್ನು ಹತ್ಯೆ ಮಾಡಿ, ನೂರಾರು ಜನರನ್ನು ಒತ್ತೆಯಾಳಾಗಿ ಕರೆದೊಯ್ದಿದೆ. ಅಂದಿನಿಂದ ಇದಕ್ಕೆ ಪ್ರತೀಕಾರವಾಗಿ ಇಸ್ರೇಲ್ ಯುದ್ಧ ಆರಂಭಿಸಿದ್ದರಿಂದ ಗಾಜಾದಲ್ಲಿ 43,600ಕ್ಕೂ ಹೆಚ್ಚು ಜನರು ಹತರಾಗಿದ್ದಾರೆ.