ಬೆಂಗಳೂರು: ಮೂರು ದಿನಗಳಿಂದ ಕನ್ನಡ ಕಿರುತೆರೆ ಧಾರಾವಾಹಿಗಳ (Kannada TV Serials) ಕಾರ್ಮಿಕರು ಸಂಬಳ ಮತ್ತಿತರ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕೆಲಸ (Serial shooting) ನಿಲ್ಲಿಸಿ ಪ್ರತಿಭಟನೆ (Labourers strike) ನಡೆಸುತ್ತಿದ್ದು, ಸೀರಿಯಲ್‌ಗಳ ಪ್ರಸಾರ ಸ್ಥಗಿತವಾಗುವ ಆತಂಕ ಎದುರಾಗಿದೆ.
ಕಾರ್ಮಿಕರ ಹೋರಾಟದ ಹಿನ್ನೆಲೆಯಲ್ಲಿ ಸದ್ಯ ಕಿರುತೆರೆ ಧಾರಾವಾಹಿಗಳ ನಿರ್ಮಾಪಕರು ಆತಂಕದಲ್ಲಿದ್ದಾರೆ. ಸದ್ಯ ಕನ್ನಡ ಕಿರುತೆರೆಯಲ್ಲಿ 68 ಧಾರಾವಾಹಿಗಳು ಪ್ರಸಾರ ಆಗುತ್ತಿವೆ. ಮೂರು ದಿನಗಳಿಂದ ಬಹುತೇಕ ಶೂಟಿಂಗ್ ಬಂದ್ ಆಗಿದೆ. ಕೇವಲ ಮೂರು ಸೀರಿಯಲ್‌ಗಳ ಶೂಟಿಂಗ್ ನಡೆಯುತ್ತಿದೆ. ಕಾರ್ಮಿಕರ ಹೋರಾಟದ ಎಫೆಕ್ಟ್‌ಗೆ 65 ಧಾರವಾಹಿಗಳ ಶೂಟಿಂಗ್ ಬಂದ್ ಆಗಿದೆ. ಸೀರಿಯಲ್ ನಿರ್ಮಾಪಕರು ಸ್ಪಂದಿಸದ ಕಾರಣ ಕಾರ್ಮಿಕರ ಹೋರಾಟ ಇನ್ನಷ್ಟು ಮುಂದುವರಿಯುವ ಸಾಧ್ಯತೆ ಕಾಣಿಸಿದೆ.
ಮೂರು ದಿನಗಳ ನಂತರ ಕಾರ್ಮಿಕರ ಹೋರಾಟಕ್ಕೆ ಸ್ಪಂದಿಸಿರುವ ನಿರ್ಮಾಪಕರು ಕಾರ್ಮಿಕರ ಜೊತೆಗೆ ಮಾತುಕತೆಗೆ ಮುಂದಾಗಿದ್ದಾರೆ. ಮೇಕಪ್, ವಸ್ತ್ರಾಲಂಕಾರ, ಲೈಟ್ ಬಾಯ್ಸ್, ಸೆಟ್ ಬಾಯ್ಸ್ , ಸೌಂಡ್, ಹೇರ್ ಸ್ಟೈಲಿಸ್ಟ್‌ಗಳ ಯೂನಿಯನ್ ಮುಷ್ಕರ ನಡೆಸುತ್ತಿದ್ದು, ಈ ಎಲ್ಲ ಯೂನಿಯನ್‌ಗಳ ಜೊತೆ ಮಾತುಕತೆಗೆ ಮುಂದಾಗಿದ್ದಾರೆ. ಇಂದಿನ ರಾಜಿಸಂಧಾನದಲ್ಲಿ ತಮ್ಮ ಬೇಡಿಕೆಗಳು ಇತ್ಯರ್ಥ ಆಗದಿದ್ದರೆ ಕೆಲಸ ಪೂರ್ತಿಯಾಗಿ ನಿಲ್ಲಿಸಿ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಮಾಡಲು ಕಾರ್ಮಿಕರು ಸಜ್ಜಾಗಿದ್ದಾರೆ.
ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ವಿರುದ್ಧ ಹೋರಾಟಕ್ಕಿಳಿದ ಕಿರುತೆರೆ ಕಾರ್ಮಿಕರ ಒಕ್ಕೂಟ, ಮಳೆಯನ್ನೂ ಲೆಕ್ಕಿಸದೆ ಅಸೋಸಿಯೇಷನ್ ಮುಂದೆ ಪ್ರತಿಭಟನೆ ಮಾಡಿದರು. ಟೆಲಿವಿಷನ್ ಅಸೋಸಿಯೇಷನ್‌ನಲ್ಲಿ ಕೆಲಸ ಮಾಡುತ್ತಿರುವ 1000ಕ್ಕೂ ಹೆಚ್ಚು ಕಾರ್ಮಿಕರಲ್ಲಿ 300ಕ್ಕೂ ಹೆಚ್ಚು ಕಾರ್ಮಿಕರು ಪ್ರತಿಭಟನೆಗೆ ಇಳಿದಿದ್ದಾರೆ. ಮುಖ್ಯವಾಗಿ ಶೂಟಿಂಗ್ ಸಮಯ ಕಡಿಮೆಗೊಳಿಸಲು ಹಾಗೂ ಪೇಮೆಂಟ್ ಹೆಚ್ಚಿಸುವಂತೆ ಇವರ ಬೇಡಿಕೆ ಆಗಿದೆ.
“ಈ ವಿಚಾರವಾಗಿ ನಾವು ಸಭೆ ಮಾಡಿ ಮಾತನಾಡಲು ಅಸೋಸಿಯೇಷನ್ ಬಳಿಗೆ ಬಂದರೆ ನಮ್ಮನ್ನು ಒಳಗೆ ಬಿಡಲಿಲ್ಲ. ಪೋನ್ ಮಾಡಿದರೂ ಯಾರೂ ನಮಗೆ ಸ್ಪಂದಿಸಿಲ್ಲ. ನಾವು ಸಭೆ ಮಾಡಲು ಬಂದ್ರೆ ಪ್ರತಿಭಟನೆ ಮಾಡ್ತೀರಾ ಅಂತ ಬೆದರಿಸ್ತಾರೆ. ನಮ್ಮ ಸಮಸ್ಯೆ ಬಗೆಹರಿಯದೆ ಹೋದರೆ ಮುಂದಿನ ದಿನಗಳಲ್ಲಿ ಎಲ್ಲಾ ಕಾರ್ಮಿಕರು ಸೇರಿ ಮುಂದಿನ ಹೋರಾಟ ನಡೆಸುತ್ತೇವೆ” ಎಂದು ಎಚ್ಚರಿಸಿದ್ದಾರೆ.
“ಬೆಳಗ್ಗೆ 8 ಗಂಟೆ ಶೂಟಿಂಗ್‌ಗೆ 6 ಗಂಟೆಗೆ ಬನ್ನಿ ಅಂತಾರೆ. 12 ಗಂಟೆಗಳ ಕೆಲಸಕ್ಕೆ ಪೇಮೆಂಟ್ ಕೊಡ್ತಾರೆ. ಪ್ರತಿದಿನ ನಾವು 17 ಗಂಟೆಗೂ ಹೆಚ್ಚಿನ ಸಮಯ ಕೆಲಸ ಮಾಡ್ತೀವಿ. ಇತ್ತೀಚೆಗೆ ಟೆಲಿವಿಷನ್ ಅಸೋಸಿಯೇಷನ್ ಕೈಪಿಡಿ ರಿಲೀಸ್ ಮಾಡಿದೆ. ಜೂನ್‌ನಲ್ಲಿ ನಮ್ಮ ಪೇಮೆಂಟ್ ಹೆಚ್ಚಿಸಬೇಕಿತ್ತು. ಆದರೆ ಇದುವರೆಗೂ ನಮ್ಮ ಪೇಮೆಂಟ್ ಹೆಚ್ಚಿಸಿಲ್ಲ” ಎಂದು ಕಾರ್ಮಿಕರು ಹೇಳಿದ್ದಾರೆ.
WhatsApp Group
Join Now
Telegram Group
Join Now
Instagram Account
Follow Now
Facebook Page
Follow Now