ಬೆಂಗಳೂರು: ಅತಿವೇಗದ ಎರಡು ರೈಲುಗಳ ವಿನ್ಯಾಸ ಹಾಗೂ ತಯಾರಿಕೆಗೆ ಸಂಬಂಧಿಸಿದಂತೆ ಪ್ರತಿ ರೈಲು ಎಂಟು ಬೋಗಿಗಳನ್ನು ಒಳಗೊಂಡಿದೆ. ಗಂಟೆಗೆ 280 ಕಿ.ಮೀ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರಲಿದೆ. ಇದು ಮುಂಬೈ ಹಾಗೂ ಅಹಮದಾಬಾದ್ ನಡುವೆ ನಿರ್ಮಿಸಲಾಗುತ್ತಿರುವ ಅತಿವೇಗದ ರೈಲ್ವೆ ಕಾರಿಡಾರ್‌ನಲ್ಲಿ (ಬುಲೆಟ್ ರೈಲು ಯೋಜನೆ) 2027ರಿಂದ ಬಳಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಚೆನ್ನೈನಲ್ಲಿರುವ ಭಾರತೀಯ ರೈಲ್ವೆ ಇಲಾಖೆಯ ಅಧೀನಕ್ಕೆ ಸೇರಿರುವ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಿಂದ (ಐಸಿಎಫ್) 866.87 ಕೋಟಿ ರು. ಮೌಲ್ಯದ ಗುತ್ತಿಗೆ ಲಭಿಸಿದೆ ಎಂದು ಬಿಇಎಂಎಲ್ ಮಂಗಳವಾರ ತಿಳಿಸಿದೆ.
‘ಭಾರತದ ಅತಿ ವೇಗದ ರೈಲು ಅಭಿವೃದ್ಧಿ ಯೋಜನೆಯಲ್ಲಿ ಇದೊಂದು ಮೈಲಿಗಲ್ಲಾಗಲಿದೆ. ಗಂಟೆಗೆ 280 ಕಿ.ಮೀ. ವೇಗದಲ್ಲಿ ಸಾಗುವ ಸಾಮರ್ಥ್ಯವಿರುವ ಸ್ವದೇಶಿ ನಿರ್ಮಿತ ರೈಲು ಇದಾಗಲಿದೆ.
ಈ ರೈಲು ಬೆಂಗಳೂರಿನಲ್ಲಿರುವ ರೈಲು ಕೋಚ್ ಸಂಕೀರ್ಣದಲ್ಲಿ ಅಭಿವೃದ್ಧಿಪಡಿಸಲಾಗುವುದು. ಜತೆಗೆ 2026ರ ಅಂತ್ಯದ ಹೊತ್ತಿಗೆ ಹಸ್ತಾಂತರಿಸುವ ಗುರಿ ಹೊಂದಲಾಗಿದೆ’ ಎಂದು ಬಿಇಎಂಎಲ್ ತಿಳಿಸಿದೆ.
ಚೇರ್ ಕಾರ್‌ಗಳನ್ನು ಅಳವಡಿಸಲಾಗುವುದು. ಪ್ರಯಾಣಿಕರಿಗೆ ಪ್ರಯಾಣದ ಹೊಸ ಅನುಭೂತಿ ನೀಡುವ ಉದ್ದೇಶದೊಂದಿಗೆ ಹಿಂದಕ್ಕೆ ಬಾಗುವ ಹಾಗೂ ತಿರುಗುವ ಸೀಟುಗಳು ಇರಲಿವೆ.
ಅಂಗವಿಕಲರಿಗಾಗಿ ವಿಶೇಷ ಆಸನ ವ್ಯವಸ್ಥೆ ಹಾಗೂ ಮನರಂಜನೆಗಾಗಿ ಇನ್ಫೋಟೈನ್ಮೆಂಟ್ ವ್ಯವಸ್ಥೆಯನ್ನು ಕಲ್ಪಿಸುವ ಯೋಜನೆ ಇದೆ ಎಂದು ಹೇಳಿದರು.