ಬೆಂಗಳೂರು: ಪರಿಸರಸ್ನೇಹಿ ಇ-ಕಿಕ್ ಸ್ಕೂಟರ್ ವಾಹನವನ್ನು ರ‍್ಯಾಡ್ ಬೋರ್ಡ್ಸ್ ಕಂಪೆನಿ ಪರಿಚಯಿಸಿದ್ದು, ಬೆಂಗಳೂರಿನಲ್ಲಿ ನಡೆಯುತ್ತಿರುವ ಟೆಕ್ ಸಮ್ಮಿಟ್ನಲ್ಲಿ ಪ್ರದರ್ಶನಕ್ಕಿಡಲಾಗಿದೆ. ಮನೆಯ ಹತ್ತಿರವೇ ಹೋಗಬೇಕಾದರೂ ಇಂದು ಬಹುತೇಕರು ದ್ವಿಚಕ್ರ ವಾಹನ ಬಳಸುತ್ತಾರೆ. ಇದರಿಂದ ಇಂಧನ ಜೊತೆಗೆ ಮಾಲಿನ್ಯ ಹೆಚ್ಚಳಕ್ಕೆ ಕಾರಣರಾಗುತ್ತಿದ್ದಾರೆ.
ಪರಿಸರಸ್ನೇಹಿಯುಳ್ಳ ಇ-ಕಿಕ್ ಸ್ಕೂಟರ್ ಅನ್ನು ನಗರದ ಅರಮನೆ ಮುಂಭಾಗದಲ್ಲಿ ಆರಂಭಗೊಂಡಿರುವ ಟೆಕ್ ಸಮ್ಮಿಟ್ನಲ್ಲಿ ಪ್ರದರ್ಶನಕ್ಕಿಟ್ಟಿದ್ದು, ನೋಡುಗರ ಗಮನ ಸೆಳೆಯುತ್ತಿದೆ. ಮೆಟ್ರೋ ರೈಲು, ಬಸ್‌ನಲ್ಲಿಯೂ ಈ ವಾಹನ ಹೊತ್ಯೊಯ್ಯಬಹುದು ಎಂದು ತಿಳಿಸಿದ್ದಾರೆ.
ದಿನೇ ದಿನೇ ರಾಜಧಾನಿಯಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿರುವ ಪರಿಣಾಮ, ಸಂಚಾರ ದಟ್ಟಣೆ ಮಾತ್ರವಲ್ಲದೆ ಮಾಲಿನ್ಯವೂ ಅಧಿಕವಾಗುತ್ತಿದೆ. ರಾಜ್ಯದ ಎರಡನೇ ಹಂತದ ನಗರಗಳಲ್ಲಿ ಪರಿಸ್ಥಿತಿ ಬಿಗಾಡಯಿಸುತ್ತಿದೆ.
ಸಮೀಪದ ಅಂಗಡಿಗೆ ಹೋಗಬೇಕಾದರೂ ಇಂದಿನ ಯುವಸಮೂಹ ವಾಹನಗಳ ಮೇಲೆ ಅವಲಂಬಿಸುತ್ತಿರುವುದು ಹೆಚ್ಚಾಗುತ್ತಿದೆ. ಅವಲಂಬನೆ ತಗ್ಗಿಸುವ ಉದ್ದೇಶದಿಂದ ಇ-ಕಿಕ್ ಸ್ಕೂಟರ್ ವಾಹನವನ್ನು ಆವಿಷ್ಕರಿಸಲಾಗಿದೆ. ಬೆಂಗಳೂರು ಮುಂಬೈ, ದೆಹಲಿ ಸೇರಿದಂತೆ ದೇಶದ ನಾನಾ ನಗರಗಳಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಸಂಸ್ಥೆಯ ಸಂಸ್ಥಾಪಕ ಕಿರಣ್ ತಿಳಿಸಿದ್ದಾರೆ.
ಇ-ಸ್ಕೂಟರ್ ವಾಹನ ಬ್ಯಾಟರಿ ಆಧರಿತವಾಗಿದ್ದು, ಒಮ್ಮೆ ಚಾರ್ಜ್ ಹಾಕಿಕೊಂಡರೆ 25ರಿಂದ 30 ಕೀ.ಮೀವರೆಗೂ ಓಡಿಸಬಹುದು. ಮನೆಯಲ್ಲಿ ಚಾರ್ಜ್ ಹಾಕಿಕೊಳ್ಳಬಹುದಾಗಿದೆ. ಸಮೀಪದ ಗಮ್ಯ ಸ್ಥಳಗಳಿಗೆ ಹೋಗಲು ಈ ವಾಹನ ಅನುಕೂಲಕರವಾಗಿದೆ.
ವಾಹನವನ್ನು ವಸ್ತುವಿನಂತೆ ಮಡಚಬಹುದಾಗಿದ್ದು, ಬ್ಯಾಗ್ನಲ್ಲಿ ಎಲ್ಲೆಂದರಲ್ಲಿ ಎತ್ತಿಕೊಂಡು ಓಡಾಡಬಹುದಾಗಿದೆ. ವಿವಿಧ ಕಂಪೆನಿಗಳಿಗೆ ಈಗಾಗಲೇ ಮಾರಾಟ ಮಾಡಲಾಗಿದೆ.
ಸಾರ್ವಜನಿಕರು ಸಹ ಇದನ್ನು ಬಳಸಿದರೆ ತಕ್ಕಮಟ್ಟಿಗಾದರೂ ಇಂಧನದ ಮೇಲೆ ಅವಲಂಬನೆ ತಗ್ಗುವುದರ ಜೊತೆಗೆ ಮಾಲಿನ್ಯವನ್ನೂ ಇಳಿಸಬಹುದಾಗಿದೆ ಎಂದು ಸಂಸ್ಥೆಯ ಸಿಬ್ಬಂದಿ ಗುರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.