ರಾಮನಗರ: ರಾಮನಗರದಲ್ಲಿ ಕಾಡಾನೆ ಚಲನವಲನ ನಿಯಂತ್ರಣಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿ ಡ್ರೋನ್ ಕ್ಯಾಮರಾಗಳ ಮೊರೆ ಹೋಗಿದ್ದಾರೆ.
ಕಾಡಾನೆಗಳ ಚಲನವಲನ ವೀಕ್ಷಿಸಲು ಅರಣ್ಯ ಇಲಾಖೆ ಇದೀಗ ಡ್ರೋನ್ ತಂತ್ರಜ್ಞಾನದ ಮೊರೆ ಹೋಗಿದೆ. ಕಾಡಾನೆಗಳ ದಾಳಿಯಿಂದಾಗಿ ಪ್ರತೀ ವರ್ಷ ಸಾವಿರಾರು ಎಕರೆ ಬೆಳೆ ನಾಶವಾಗುತ್ತಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಾ.ಸಿ.ಎನ್.ಮಂಜುನಾಥ್ ಅವರಲ್ಲಿ ಡ್ರೋನ್ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಕಲ್ಪನೆ ಮೂಡಿದೆ.
ಈ ಕುರಿತು ಅವರು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಹಲವು ಖಾಸಗಿ ಸಂಸ್ಥೆಗಳ ಜೊತೆಗೂಡಿ ಚರ್ಚಿಸಿದ್ದಾರೆ. ರಾಮನಗರ ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ತೀವ್ರವಾಗಿದೆ. ವಿಶೇಷವಾಗಿ ಬನ್ನೇರುಘಟ್ಟ, ಕೋಡಿಹಳ್ಳಿ, ಸಾತನೂರು, ಮಾಗಡಿ, ಚನ್ನಪಟ್ಟಣ ಮುಂತಾದ ಅನೇಕ ಪ್ರದೇಶಗಳಲ್ಲಿ ಸಾಕಷ್ಟು ಬೆಳೆ ಹಾನಿಯ ಜೊತೆಗೆ ಆನೆ ದಾಳಿಯಿಂದಾಗಿ ಕೆಲವೆಡೆ ಸಾವೂ ಸಂಭವಿಸಿದೆ.
ಸಿಎಸ್‌ಆರ್ ಅನುದಾನ ಬಳಸಿಕೊಂಡು ಡ್ರೋನ್ ತಂತ್ರಜ್ಞಾನದ ಮೂಲಕ ಕಾಡಾನೆಗಳ ದಾಳಿ ನಿಯಂತ್ರಿಸಲು ಕಾರ್ಯ ರೂಪಿಸಲಾಗಿತ್ತು. ಇದೀಗ ಪ್ರಾಯೋಗಿಕವಾಗಿ ಕೋಡಿಹಳ್ಳಿ ಬಳಿಯ ಬೊಮ್ಮಸಂದ್ರ ವ್ಯಾಪ್ತಿಯಲ್ಲಿ ಸುಮಾರು 25 ಆನೆಗಳ ಹಿಂಡು ಕಾಡಿನಿಂದ ಹೊರಬರುತ್ತಿರುವುದನ್ನು ಡ್ರೋನ್ ಮೂಲಕ ಗುರುತಿಸಿ, ಅವುಗಳನ್ನು ಪುನಃ ಕಾಡಿಗಟ್ಟಲಾಗಿದೆ ಎಂದು ತಿಳಿಸಿದ್ದಾರೆ.