ಕೊಚ್ಚಿ(ಕೇರಳ): ಡಿಸೆಂಬರ್ 5ರಂದು ನಟ ದಿಲೀಪ್ ಶಬರಿಮಲೆ ದೇಗುಲ ದರ್ಶನ ಮಾಡಿದ್ದರು. ಈ ವೇಳೆ ಅವರಿಗೆ ವಿಶೇಷ ವಿಐಪಿ ದರ್ಶನ ಸೌಲಭ್ಯ ನೀಡಲಾಗಿತ್ತು ಎಂಬ ವರದಿಯ ಆಧಾರದ ಮೇಲೆ ಕೇರಳ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ದೇಗುಲದಲ್ಲಿ ದೇವರ ದರ್ಶನದ ಸಾಲಿನಲ್ಲಿ ಕಾದು ನಿಂತಿದ್ದ ಸಾವಿರಾರು ಭಕ್ತರನ್ನು ಹಲವು ಗಂಟೆಗಳ ಕಾಲ ತಡೆದು, ಮಲಯಾಳಂನ ವಿವಾದಿತ ನಟ ದಿಲೀಪ್ ಅವರಿಗೆ ವಿಶೇಷ ದರ್ಶನ ಕಲ್ಪಿಸಿದ ಪೊಲೀಸರು ಹಾಗೂ ಟ್ರಾವಂಕೂರ್ ದೇವಸ್ವಂ ಬೋರ್ಡ್ (ಟಿಡಿಬಿ) ನಡೆಗೆ ಕೇರಳ ಹೈಕೋರ್ಟ್ ಗರಂ ಆಗಿದೆ.
ಅನೇಕರು ದರ್ಶನ ಪಡೆಯಲು ಸಾಧ್ಯವಾಗದೇ ಹಾಗೆಯೇ ತೆರಳಿದ್ದಾರೆ. ಅವರಿಗೆ ಅಷ್ಟು ಹೊತ್ತು ಗರ್ಭಗುಡಿ ಎದುರು ನಿಲ್ಲಲು ಅವಕಾಶ ಹೇಗೆ ನೀಡಲಾಯಿತು ಎಂದು ಕೋರ್ಟ್ ಪ್ರಶ್ನಿಸಿತು.
ನ್ಯಾ.ಅನಿಲ್ ಕೆ.ನರೇಂದ್ರನ್ ಮತ್ತು ನ್ಯಾ.ಮುರಳಿ ಕೃಷ್ಣ ಎಸ್ ಅವರಿದ್ದ ಪೀಠ ಈ ಕುರಿತು ಪ್ರಶ್ನಿಸಿದೆ. ನಟನಿಗೆ ಯಾವ ಆಧಾರದ ಮೇಲೆ ಈ ಸೌಲಭ್ಯವನ್ನು ಕಲ್ಪಿಸಲಾಯಿತು?, ಈ ಕುರಿತ ಸಿಸಿಟಿವಿ ದೃಶ್ಯಗಳನ್ನು ಶನಿವಾರ ನ್ಯಾಯಾಲಯಕ್ಕೆ ಒಪ್ಪಿಸಬೇಕು ಎಂದು ಪೊಲೀಸರಿಗೆ ಸೂಚಿಸಿದೆ.
ನ್ಯಾಯಾಲಯದ ಆದೇಶದಂತೆ ಸಾಂವಿಧಾನಿಕ ಅಧಿಕಾರ ಹೊಂದಿರುವವರು ಮಾತ್ರ ಈ ರೀತಿಯ ವಿಶೇಷ ಸೌಲಭ್ಯ ಪಡೆಯಬಹುದು. ಆದರೆ, (ಡಿಸೆಂಬರ್ 5) ನಟನಿಗೆ ನೀಡಿದ ಅತಿಥ್ಯ ನಿಯಮದ ಸಂಪೂರ್ಣ ಉಲ್ಲಂಘನೆ ಎಂದು ಕೋರ್ಟ್ ಚಾಟಿ ಬೀಸಿದೆ.