ವಯನಾಡ್(ಕೇರಳ): ಮತಪ್ರಚಾರ ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕ್ಷೇತ್ರದ ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ ಮಂಗಳವಾರ ವಯನಾಡ್‌ನ ಅತೀ ಉದ್ದದ ಜಿಪ್‌ಲೈನ್ ಸಾಹಸದಲ್ಲಿ ಭಾಗಿಯಾದರು.
“ಭೂ ಕುಸಿತದಂತಹ ಸವಾಲಿನ ನಡುವೆಯೂ ವಯನಾಡ್ ಅದ್ಭುತ ಪ್ರವಾಸಿ ಆಕರ್ಷಣೆ ಹೊಂದಿದೆ” ಎಂದು ರಾಹುಲ್ ತಿಳಿಸಿದ್ದಾರೆ.
“ಇಲ್ಲಿನ ಸ್ಪೂರ್ತಿದಾಯಕ ಸ್ಥಳೀಯ ಜನರೊಂದಿಗೆ ಸಂಪರ್ಕ ಸಾಧಿಸುವ ಅವಕಾಶ ನನಗೆ ಸಿಕ್ಕಿತು. ನೈಸರ್ಗಿಕ ವಿಪತ್ತಿನಂತಹ ಸವಾಲಿನ ಹೊರತಾಗಿಯೂ ಅವರು ದೃಢವಾಗಿ ನಿಂತಿದ್ದಾರೆ. ಇಲ್ಲಿನ ಪರಿಸರ ಬಹಳ ಸುಂದರವಾಗಿದೆ. ದಕ್ಷಿಣ ಭಾರತದ ಅತೀ ದೊಡ್ಡ ಡ್ರಾಪ್ ಟವರ್ ಮತ್ತು ರೋಮಾಂಚನಕಾರಿ ಜಿಪ್‌ಲೈನ್ ಸೇರಿದಂತೆ ಹಲವು ಪ್ರವಾಸಿ ಅದ್ಬುತಗಳು ಇಲ್ಲಿವೆ” ಎಂದು ಹೇಳಿದರು.
ನಿರಂತರ ಮಳೆಯಿಂದಾಗಿ ಜುಲೈ 30ರಂದು ಸಂಭವಿಸಿದ ಸರಣಿ ಭೂಕುಸಿತದಿಂದ ನೂರಾರು ಜನರು ಸಾವನ್ನಪ್ಪಿದ್ದರು. ವಯನಾಡ್ ಜಿಲ್ಲೆಯ ವೈತಿರಿ ತಾಲೂಕಿನ ಮೆಪ್ಪಾಡಿ ಪಂಚಾಯತ್‌ನ ಪುಂಜಿರಿಮಟ್ಟಂ, ಮುಂಡಕ್ಕೈ, ಚೂರಲ್ಮಲಾ ಮತ್ತು ವೆಳ್ಳರಿಮಲ ಗ್ರಾಮಗಳಲ್ಲಿ ಭೂಕುಸಿತ ಸಂಭವಿಸಿತ್ತು.
2024ರ ಸಾರ್ವತ್ರಿಕ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಗೆದ್ದ ರಾಹುಲ್ ಗಾಂಧಿ, ರಾಯ್ ಬರೇಲಿ ಕ್ಷೇತ್ರವನ್ನು ಉಳಿಸಿಕೊಂಡು ವಯನಾಡ್ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದರು. ಹಾಗಾಗಿ, ಅವರಿಂದ ತೆರವಾದ ಸ್ಥಾನದಲ್ಲಿ ಇದೀಗ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಇದೇ ಮೊದಲ ಬಾರಿ ಚುನಾವಣೆಗೆ ಸ್ಪರ್ಧಿಸಿದ್ದಾರೆ.
‘ವಯನಾಡಿನಲ್ಲಿ ನನ್ನ ಐದು ವರ್ಷಗಳು ನನ್ನ ರಾಜಕೀಯ ಮತ್ತು ನನ್ನ ಕೆಲಸದ ಬಗ್ಗೆ ನಾನು ಯೋಚಿಸುವ ವಿಧಾನವನ್ನು ಸಂಪೂರ್ಣವಾಗಿ ಬದಲಾಯಿಸಿತು. ಇಲ್ಲಿಗೆ ಬಂದಾಗ ನಾನು ಜನರೊಂದಿಗೆ ಸಂಪೂರ್ಣವಾಗಿ ವಿಭಿನ್ನ ರೀತಿಯ ಸಂಬಂಧವನ್ನು ಹೊಂದಿದ್ದೇನೆ ಎಂದು ನಾನು ಕಂಡುಕೊಂಡೆ. ಸಾಮಾನ್ಯವಾಗಿ ರಾಜಕಾರಣಿಗಳಾದ ನಮಗೆ ರಾಜಕೀಯ ಸಂಬಂಧವಿದೆ.
ಇದು ವಹಿವಾಟಿನ ಸಂಬಂಧದಂತೆ. ನೀವು ನಮಗಾಗಿ ಇದನ್ನು ಮಾಡಬೇಕು, ನಾವು ನಿಮಗಾಗಿ ಇದನ್ನು ಮಾಡುತ್ತೇವೆ. ಆದರೆ ವಯನಾಡಿನಲ್ಲಿ ಆ ರೀತಿಯ ಸಂಬಂಧವಿಲ್ಲ. ಮತ್ತು ನಾನು ಒಂದು ವಿಷಯವನ್ನು ಅರಿತುಕೊಂಡೆ ನಾನು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್ ಜೋಡೋ ಯಾತ್ರೆಗೆ ಹೋದಾಗ, ಆ ಯಾತ್ರೆಯ ಮುಖ್ಯ ಉದ್ದೇಶವೆಂದರೆ ಪ್ರೀತಿ ಮತ್ತು ವಾತ್ಸಲ್ಯವನ್ನು ರಾಜಕೀಯ ಸಾಧನವಾಗಿ ಬಳಸುವುದಾಗಿತ್ತು.
ನಿಮ್ಮ ಮುಂದೆ ನಿಂತಿರುವ ವ್ಯಕ್ತಿಯು ನಿಮ್ಮನ್ನು ನಿಂದಿಸಿದರೂ, ದ್ವೇಷಿಸಿದರೂ ಮತ್ತು ನಿಮ್ಮನ್ನು ನೋಯಿಸಲು ಬಯಸಿದರೂ ಸಹ, ನೀವು ಅದೇ ರೀತಿ ಪ್ರತಿಕ್ರಿಯಿಸುವುದಿಲ್ಲ. ವಯನಾಡಿನ ಜನರಿಂದ ನಾನು ಕಲಿತದ್ದು ಅದನ್ನೇ…” ಎಂದು ರಾಹುಲ್ ಹೇಳಿದರು.