ಬೆಂಗಳೂರು: ಸಾರ್ವಜನಿಕ ಸಾರಿಗೆಯನ್ನು ಬಳಸುವತ್ತ ಜನರ ಒಲವು ಹೆಚ್ಚಾಗಿದೆ. ಆದರೆ ಎಲ್ಲಾ ಕಡೆಗಳಲ್ಲೂ ಮೆಟ್ರೋ ಸೇವೆ ಲಭ್ಯವಿಲ್ಲದ ಕಾರಣ ಸ್ವಂತ ವಾಹನ ಅಥವಾ ಇನ್ಯಾವುದೇ ವಾಹನಗಳನ್ನು ಜನರು ಆಶ್ರಯಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಬದಲವರ್ಧನೆ ಬಗ್ಗೆ ಸರ್ಕಾರ ಚಿಂತನೆ ನಡೆಸಬೇಕಾಗಿದೆ.
ನಗರಗಳಲ್ಲಿ ದಿನನಿತ್ಯ ಹೆಚ್ಚಾಗುತ್ತಿರುವ ವಾಹನಗಳ ಸಂಖ್ಯೆಯಿಂದ ಸಂಚಾರ ದಟ್ಟಣೆ ಮಾತ್ರವಲ್ಲದೆ, ವಾಯು ಮಾಲಿನ್ಯವೂ ವಿಪರೀತವಾಗುತ್ತಿದೆ.
2013-14 ರಲ್ಲಿ 1.63 ಕೋಟಿ ವಾಹನಗಳನ್ನು ಹೊಂದಿದ್ದ ರಾಜ್ಯದಲ್ಲಿ ಇದೀಗ ಅಂದರೆ, 2024 ರ ಅಕ್ಟೋಬರ್ ಅಂತ್ಯದ ವೇಳೆಗೆ ಇದರ ಪ್ರಮಾಣ 3.27 ಕೋಟಿಗೆ ಏರಿದೆ ಎಂಬುವುದು ನಿಜಕ್ಕೂ ಅಚ್ಚರಿಯ ಬೆಳವಣಿಗೆ.
ಬೆಂಗಳೂರು ನಗರದಲ್ಲಿ ಮೆಟ್ರೋ ದೊಡ್ಡ ಪ್ರಮಾಣದ ಅನುಕೂಲವನ್ನೇ ಸೃಷ್ಟಿಸಿದೆ. ದಿನದಿಂದ ದಿನಕ್ಕೆ ಮೆಟ್ರೋವನ್ನು ಆಶ್ರಯಿಸುವವರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ.
ಸೂಕ್ತ ಬಸ್ ಸೌಲಭ್ಯವೂ ಇಲ್ಲದೆ ಇದ್ದಾಗ ಜನರು ಅನಿವಾರ್ಯವಾಗಿ ಖಾಸಗಿ ವಾಹನಗಳನ್ನೇ ಅವಲಂಬಿತರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಬೆಳೆಯುತ್ತಿರುವ ನಗರಗಳಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಆದ್ಯತೆ ಕೊಡಬೇಕಾಗಿದೆ.
“ಬೆಂಗಳೂರು ನಗರದಲ್ಲಿ ಜನಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿದೆ. ಹಾಗಾಗಿ ಇಂತಹ ನಗರಗಳಲ್ಲಿ ಸಾರ್ವಜನಿಕ ಸಾರಿಗೆ ಉಪಯೋಗ ಮಾಡುವುದು ಅತ್ಯಗತ್ಯವಾಗಿದೆ. ಪ್ರಪಂಚದ ದೊಡ್ಡ ದೊಡ್ಡ ನಗರಗಳಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಪ್ರಾಮುಖ್ಯತೆ ಕೊಡಲಾಗಿದೆ. ಆದರೆ ನಮ್ಮಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಪ್ರಾಮುಖ್ಯತೆ ನೀಡಲಾಗುತ್ತಿಲ್ಲ. ಇದರಿಂದ ಸಾರಿಗೆ ದಟ್ಟಣೆ ಹೆಚ್ಚಾಗಲು ಕಾರಣವಾಗುತ್ತಿದೆ” ಎಂದು ನಿವೃತ್ತ ಐಪಿಎಸ್ ಅಧಿಕಾರಿ ಹಾಗೂ ಬಿಜೆಪಿಯ ಮುಖಂಡ ಭಾಸ್ಕರ್ ರಾವ್ ಹಂಚಿಕೊಂಡಿದ್ದಾರೆ.
“ಭವಿಷ್ಯದ ನಿಟ್ಟಿನಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಹೆಚ್ಚಿನ ಆದ್ಯತೆಯನ್ನು ಸರ್ಕಾರ ನೀಡಬೇಕಾಗಿದೆ. ಮಹಿಳೆಯರಿಗೆ ಉಚಿತ ಬಸ್ ವ್ಯವಸ್ಥೆ ನೀಡುತ್ತಿರುವ ರೀತಿಯಲ್ಲಿ ಪ್ರತಿಯೊಬ್ಬರಿಗೂ ಒಂದು ನಿರ್ದಿಷ್ಟ ದರ ನಿಗದಿ ಮಾಡಬೇಕಿದೆ. ಟಿಕೆಟ್ ಬದಲಾಗಿ ಕಾರ್ಡ್ ಬಳಕೆ ಮಾಡಿದರೆ ಮೆಟ್ರೋ, ಬಸ್, ಸಬ್ ಅರ್ಬನ್ ರೈಲು ಹೀಗೆ ಬಳಕೆ ಮಾಡಲು ಅವಕಾಶ ಕಲ್ಪಿಸಬೇಕು” ಎಂದು ತಿಳಿಸಿದ್ದಾರೆ.
ಸ್ವತಃ ವಾಹನಗಳಲ್ಲಿ ಬಂದು ಒಂದು ಕಡೆಯಲ್ಲಿ ಪಾರ್ಕ್ ಮಾಡಿ ಮುಂದಿನ ಸಂಚಾರಕ್ಕೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಜನರು ಅವಲಂಬಿಸುತ್ತಾರೆ. ಆದರೆ ನಮ್ಮಲ್ಲಿ ಮೆಟ್ರೋ ಸ್ಟೇಷನ್ ಇದ್ದರೂ ಪಾರ್ಕಿಂಗ್ ವ್ಯವಸ್ಥೆಗಳು ಇಲ್ಲ. ಬಹುಮಹಡಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು.
ಪಾರ್ಕಿಂಗ್ ಶುಲ್ಕ ಕಡಿಮೆ ಮಾಡಿದ್ದಲ್ಲಿ ಜನರಿಗೆ ಇದರ ಸದುಪಯೋಗ ಪಡೆದುಕೊಳ್ಳಲು ಸಾಧ್ಯವಾಗಲಿದೆ. ಅದೇ ರೀತಿಯಲ್ಲಿ ಮೆಟ್ರೋ ಫೀಡರ್ ವ್ಯವಸ್ಥೆಗಳನ್ನು ಹೆಚ್ಚಳ ಮಾಡಿದರೆ ಸಾಕಷ್ಟು ಅನುಕೂಲಕಾರಿಯಾಗಲಿದೆ.
ಬಸ್ ವ್ಯವಸ್ಥೆ ಉತ್ತಮವಾಗಿದ್ದರೆ ವೈಯಕ್ತಿಕವಾಗಿ ವಾಹನಗಳನ್ನು ಬಳಕೆ ಮಾಡುವವರ ಸಂಖ್ಯೆ ಕಡಿಮೆಯಾಗಲಿದೆ ಎಂಬುವುದು ಭಾಸ್ಕರ್ ರಾವ್ ಅವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
*ಬೆಂಗಳೂರು ನಗರದಲ್ಲಿ ಬಸ್‌ಗಳ ಸಂಖ್ಯೆಯನ್ನು ಹೆಚ್ಚಳ ಮಾಡಬೇಕಿದೆ.
*ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರಯಾಣ ದರವನ್ನು ದುಬಾರಿ ಮಾಡಬಾರದು.
*ಪ್ರಯಾಣಿಕರಿಗೆ ಅನುಕೂಲ ಆಗುವ ರೀತಿಯಲ್ಲಿ ಅಲ್ಲಲ್ಲಿ ಬಸ್ ನಿಲುಗಡೆಗೆ ಅವಕಾಶ ಕಲ್ಪಿಸಬೇಕಾಗಿದೆ.
*ಬಸ್ ಸೇರಿದಂತೆ ಸಾರ್ವಜನಿಕ ಸಾರಿಗೆ ಕಡೆ ಜನರನ್ನು ಆಕರ್ಷಣೆ ಮಾಡಬೇಕಾಗಿದೆ.
*ಖಾಸಗಿ ವಾಹನಗಳನ್ನು ಹೆಚ್ಚಾಗಿ ಅವಲಂಬಿಸದ ರೀತಿಯಲ್ಲಿ ಪಾರ್ಕಿಂಗ್ ಶುಲ್ಕ ಕಡಿಮೆ ಮಾಡಬೇಕು.
*ಪಾದಾಚಾರಿ ಮಾರ್ಗಗಳ ವ್ಯವಸ್ಥೆಯೂ ಅಗತ್ಯವಾಗಿರುವುದರಿಂದ ಅದಕ್ಕೂ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ.
*ಸೈಕಲ್ ಗಳ ಬಳಕೆಗೂ ಒತ್ತು ನೀಡುವುದರ ಜೊತೆಗೆ ಪಾತ್ ಗಳನ್ನು ಅಭಿವೃದ್ದಿಪಡಿಸಬೇಕಾಗಿದೆ.
ಈ ರೀತಿಯಾಗಿ ಅಂಶಗಳನ್ನು ಹೊಂದಿರುತ್ತದೆ.