ತಮಿಳುನಾಡು: ಶ್ರೀಲಂಕಾ ನೌಕಾಪಡೆಯು 18 ತಮಿಳುನಾಡಿನಲ್ಲಿ ಭಾರತೀಯ ಮೀನುಗಾರರನ್ನು ಬಂಧಿಸಿದೆ. ಕಡಲ ಗಡಿ ರೇಖೆ (ಐಎಂಬಿಎಲ್) ದಾಟಿ ಒಳಗೆ ಬಂದಿದ್ಧಾರೆ ಎಂದು ಆರೋಪಿಸಿ ನೆಡುಂಥೀವು ಬಳಿ ಮೀನುಗಾರಿಕೆ ನಡೆಸುತ್ತಿದ್ದ ತಮಿಳುನಾಡಿನ 18 ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಮಂಗಳವಾರ ಬಂಧಿಸಿದೆ. ಈ ಮೀನುಗಾರರು ಶ್ರೀಲಂಕಾದ ಜಲಪ್ರದೇಶವನ್ನು ಪ್ರವೇಶಿಸಿ ಅಕ್ರಮ ಮೀನುಗಾರಿಕೆ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂದು ಶ್ರೀಲಂಕಾದ ಅಧಿಕಾರಿಗಳು ಆರೋಪಿಸಿದ್ದಾರೆ ಎಂದು ತಮಿಳುನಾಡು ಕರಾವಳಿ ಪೊಲೀಸರು ಹೇಳಿದ್ದಾರೆ.
ಎರಡು ಮೀನುಗಾರಿಕಾ ದೋಣಿಗಳಲ್ಲಿದ್ದ ಬಂಧಿತ ಮೀನುಗಾರರನ್ನು ಹೆಚ್ಚಿನ ತನಿಖೆಗಾಗಿ ಕಂಗೆಸನ್ ನೌಕಾ ನೆಲೆಗೆ ಕರೆದೊಯ್ಯಲಾಗಿದೆ. ಶ್ರೀಲಂಕಾ ನೌಕಾಪಡೆಯು ಪದೇ ಪದೆ ಭಾರತೀಯ ಮೀನುಗಾರರನ್ನು ಬಂಧಿಸುತ್ತಿರುವುದು ಮೀನುಗಾರರ ಸಮುದಾಯದಲ್ಲಿ ಆತಂಕ ಮೂಡಿಸಿದೆ. ಇಂಥ ಘಟನೆಗಳನ್ನು ತಡೆಗಟ್ಟಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳಬೇಕು ಎಂದು ಮೀನುಗಾರರು ಒತ್ತಾಯಿಸಿದ್ದಾರೆ.
ಇತ್ತೀಚೆಗೆ ಶ್ರೀಲಂಕಾಕ್ಕೆ ಭೇಟಿ ನೀಡಿದ್ದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಈ ಬಂಧನಗಳ ವಿಷಯ ಪ್ರಸ್ತಾಪಿಸಿ, ಭವಿಷ್ಯದಲ್ಲಿ ಮತ್ತಷ್ಟು ಭಾರತೀಯರ ಬಂಧನವಾಗದಂತೆ ಮತ್ತು ದೋಣಿ ವಶಪಡಿಸಿಕೊಳ್ಳದಂತೆ ಕ್ರಮ ತೆಗೆದುಕೊಳ್ಳುವಂತೆ ಶ್ರೀಲಂಕಾ ಸರ್ಕಾರಕ್ಕೆ ಒತ್ತಾಯಿಸಿದ್ದರು.
ಜೂನ್ 16 ರಿಂದ ಈವರೆಗೆ ಶ್ರೀಲಂಕಾ ನೌಕಾಪಡೆಯು ತಮಿಳುನಾಡಿನ 425 ಮೀನುಗಾರರನ್ನು ಬಂಧಿಸಿದೆ ಮತ್ತು 58 ದೋಣಿಗಳನ್ನು ವಶಪಡಿಸಿಕೊಂಡಿದೆ ಎಂದು ವರದಿಯಾಗಿದೆ. ಈ ಮೀನುಗಾರರ ಪೈಕಿ ಅನೇಕರು ಶ್ರೀಲಂಕಾದ ಜೈಲುಗಳಲ್ಲಿ ಬಂಧನದಲ್ಲಿದ್ದಾರೆ.
ಈ ಚರ್ಚೆಗಳ ಹೊರತಾಗಿಯೂ ಮೀನುಗಾರರ ಬಂಧನ ಘಟನೆಗಳು ಮುಂದುವರೆದಿವೆ. ಇದನ್ನು ವಿರೊಧಿಸಿ ತಮಿಳುನಾಡಿನ ಮೀನುಗಾರರ ಸಂಘಗಳು ಕರಾವಳಿ ಜಿಲ್ಲೆಗಳಲ್ಲಿ ದೊಡ್ಡ ಪ್ರಮಾಣದ ಪ್ರತಿಭಟನೆಗಳನ್ನು ನಡೆಸಲು ಸಿದ್ಧವಾಗಿವೆ. ಬಂಧನಗಳನ್ನು ವಿರೋಧಿಸಿ ಮೀನುಗಾರರ ಸಂಘಗಳು ವ್ಯಾಪಕ ಪ್ರತಿಭಟನೆಗಳನ್ನು ಆಯೋಜಿಸಲಿವೆ ಎಂದು ತಮಿಳುನಾಡು ಮೀನಾವರ್ ಪೆರವೈನ ಪ್ರಧಾನ ಕಾರ್ಯದರ್ಶಿ ಎ. ತಾಜುದ್ದಿನ್ ಐಎಎನ್ಎಸ್ಗೆ ತಿಳಿಸಿದ್ದಾರೆ.
“ನಮ್ಮ ಮೀನುಗಾರರ ಜೀವನೋಪಾಯವು ಅಪಾಯದಲ್ಲಿದೆ. ಮೀನುಗಾರಿಕೆ ಮತ್ತು ಸಂಬಂಧಿತ ಚಟುವಟಿಕೆಗಳನ್ನು ಅವಲಂಬಿಸಿರುವ ಸಾವಿರಾರು ಕುಟುಂಬಗಳು ತೀವ್ರ ಸಂಕಷ್ಟಕ್ಕೀಡಾಗಿವೆ. ಮೀನುಗಾರರು ಮತ್ತು ಅವರ ಕುಟುಂಬದವರು ಸಮುದ್ರಕ್ಕೆ ಇಳಿಯಬೇಕಾದರೆ ಭಯ ಪಡುವಂಥ ಸನ್ನಿವೇಶ ಸೃಷ್ಟಿಯಾಗಿದೆ” ಎಂದು ಅವರು ಹೇಳಿದರು.
ರಾಮನಾಥಪುರಂನ ಮೀನುಗಾರ ಮುಖಂಡ ಕೆ.ಎಂ.ಪೆರಿಯಸಾಮಿ ಮಾತನಾಡಿ, ಈ ಬಂಧನಗಳಿಂದ ಮೀನುಗಾರರು ಮತ್ತು ಅವರ ಕುಟುಂಬಗಳ ಮೇಲೆ ಆಗುತ್ತಿರುವ ಭಾವನಾತ್ಮಕ ಮತ್ತು ಆರ್ಥಿಕ ನಷ್ಟದ ಬಗ್ಗೆ ಆತಂಕ ವ್ಯಕ್ತಪಡಿಸಿದರು. “ಶ್ರೀಲಂಕಾ ನೌಕಾಪಡೆಯು ಸಮುದ್ರದ ಮಧ್ಯದಲ್ಲಿ ನಿರಂತರವಾಗಿ ಮೀನುಗಾರರನ್ನು ಬಂಧಿಸುತ್ತಿರುವುದರಿಂದ ಮತ್ತು ಅವರ ಮೇಲೆ ದಾಳಿ ನಡೆಸುತ್ತಿರುವುದರಿಂದ ಕುಟುಂಬಗಳು ತೀವ್ರ ಸಂಕಷ್ಟದಲ್ಲಿವೆ” ಎಂದು ಅವರು ಹೇಳಿದರು.
WhatsApp Group
Join Now
Telegram Group
Join Now
Instagram Account
Follow Now
Facebook Page
Follow Now