spot_img
spot_img

ಅಂಗನವಾಡಿ ಕಾರ್ಯಕರ್ತರಿಗೆ ಸವಲತ್ತುಗಳು ಬೇಕು : ಹೈಕೋರ್ಟ್ ನಿರ್ದೇಶನ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಸರಕಾರಿ ನೌಕರರಿಗೆ ಕೊಡುವ ಕನಿಷ್ಟ ವೇತನವನ್ನು ಅಂಗನವಾಡಿ ಕಾರ್ಯಕರ್ತರಿಗೂ ಕೊಡಬೇಕು ಎಂದು ಗುಜರಾತ್ ಹೈಕೋರ್ಟ್ ನಿರ್ದೇಶನ ನೀಡಿದ ಬೆಳವಣಿಗೆಗಳ ನಂತರ ದೇಶದ ಅಂಗನವಾಡಿ ನೌಕರರ ವಲಯದಲ್ಲಿ ತೀವ್ರ ಸಂಚಲನ ಸೃಷ್ಟಿಯಾಗಿದೆ.

ಗುಜರಾತ್ ರಾಜ್ಯದಲ್ಲಿ ಅಂಗನವಾಡಿ ಕಾರ‍್ಯಕರ್ತರ ಹಿತರಕ್ಷಣೆಗಾಗಿರುವ ‘ಆದರ್ಶ್ ಗುಜರಾತಿ ಅಂಗನವಾಡಿ ಯೂನಿಯನ್’ ಮತ್ತು ಇತರೆ 1983ರಿಂದ 2010ರ ಅವಧಿಯಲ್ಲಿ ಸೇವೆಗೆ ಸೇರಿದ 313 ಜನ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು, ರಾಜ್ಯ ಸರಕಾರ ತನ್ನ ನೌಕರರಿಗೆ ಕೊಡುತ್ತಿರುವ ಕನಿಷ್ಟ ವೇತನವನ್ನು ತಮಗೂ ನೀಡುವಂತೆ ಗುಜರಾತ್ ಸರಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ೨೦೧೫ರ ಮೇ ೪ರಂದು ಗುಜರಾತ್ ಹೈಕೋರ್ಟ್‌ನಲ್ಲಿ ಮೊಕದ್ದಮೆ ಯನ್ನು ದಾಖಲು ಮಾಡಿದ್ದರು.

ಸದರಿ ಪ್ರಕರಣದಲ್ಲಿ ಗುಜರಾತ್ ಸರಕಾರ, ಗುಜರಾತ್‌ನ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕೇಂದ್ರ ಸರಕಾರಗಳನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿತ್ತು.

ಒಂಬತ್ತೂವರೆ ವರ್ಷಗಳ ಸುದೀರ್ಘ ವಿಚಾರಣೆಯ ನಂತರ ಗುಜರಾತ್ ಹೈಕೋರ್ಟಿನ ನ್ಯಾಯಮೂರ್ತಿ ನಿಖಿಲ್ ಕರಿಯಲ್ ಅವರು, ಕೇಂದ್ರ ಸರಕಾರ ಮತ್ತು ಗುಜರಾತ್ ಸರಕಾರಕ್ಕೆ 122 ಪುಟಗಳ ಸುದೀರ್ಘ ತೀರ್ಪಿನಲ್ಲಿ ನಾಲ್ಕು ಪ್ರಮುಖವಾದ ನಿರ್ದೇಶನಗಳನ್ನು ನೀಡುತ್ತಾರೆ.

ಅವುಗಳೇನೆಂದರೆ. ಅಂಗನವಾಡಿ ಕಾರ‍್ಯಕರ್ತೆಯರು ಮತ್ತು ಸಹಾಯಕಿಯರನ್ನು ಸರಕಾರಿ ನೌಕರರನ್ನಾಗಿ ಪರಿಗಣಿಸಬೇಕು. ಅವರನ್ನೆಲ್ಲ ಸರಕಾರಿ ಸೇವೆಯಲ್ಲಿ ಸೇರಿಸಿಕೊಂಡು ಸರಕಾರಿ ನೌಕರರಿಗೆ ಈಗ ಕೊಡುತ್ತಿರುವ ಸವಲತ್ತುಗಳನ್ನೆಲ್ಲ ಕೊಡಬೇಕು. ಇದಕ್ಕಾಗಿ ಕೇಂದ್ರ ಮತ್ತು ಗುಜರಾತ್ ಸರಕಾರ ಜಂಟಿ ನೀತಿಯನ್ನು ರೂಪಿಸಬೇಕು.

ಕೋರ್ಟಿನಲ್ಲಿ ಪ್ರಕರಣ ದಾಖಲಿಸಿದ ಅರ್ಜಿದಾರ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಕ್ರಮವಾಗಿ ಗುಜರಾತ್ ನಾಗರಿಕ ಸೇವಾ ನಿಯಮಗಳ ಪ್ರಕಾರ ಗ್ರುಪ್-3 ಹಾಗೂ ಗ್ರುಪ್- 4ರ ಹುದ್ದೆಗಳಿಗೆ ನೀಡುವ ವೇತನವನ್ನು 2012ರಿಂದಲೇ ಪೂರ್ವಾನ್ವಯವಾಗಿ ನೀಡಬೇಕು.

ಸದರಿ ತೀರ್ಪನ್ನು ಗುಜರಾತ್ ಹೈಕೋರ್ಟಿನ ವೆಬ್‌ಸೈಟ್‌ನಲ್ಲಿ ಅಳವಡಿಸಿದ ದಿನದಿಂದ 6 ತಿಂಗಳ ಒಳಗಾಗಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರನ್ನು ನಾಗರಿಕ ಸೇವೆಗೆ ಸೇರಿಸಿಕೊಳ್ಳುವ ಕುರಿತಾದ ನೀತಿ ನಿಯಮಾವಳಿಗಳನ್ನು ರಚಿಸಬೇಕು.

ಇದು ಲಿಂಗ ತಾರತಮ್ಯದ ಅತಿ ದೊಡ್ಡ ಪ್ರಕರಣವಾಗಿದೆ. ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳು ಮಹಿಳೆಯ ರಿಗಾಗಿಯೇ ಸೃಷ್ಟಿ ಮಾಡಿದಂಥ ಹುದ್ದೆಗಳಾಗಿವೆ. ಅದರಲ್ಲಿಯೂ ಬಹುಸಂಖ್ಯಾತ ಮಹಿಳೆಯರು ಅತಿ ಹಿಂದುಳಿದ ಗ್ರಾಮೀಣ ಪ್ರದೇಶದ ಹಿನ್ನೆಲೆ ಉಳ್ಳವರೇ ಆಗಿದ್ದಾರೆ.

ಈ ನಾಲ್ಕು ಅತ್ಯಂತ ಪ್ರಮುಖವಾದ ನಿರ್ದೇಶನಗಳನ್ನು ನೀಡುವ ಮುನ್ನ ಗುಜರಾತ್ ಹೈಕೋಟಿರ್ನ ನ್ಯಾಯಪೀಠವು, ಅಂಗನವಾಡಿ ಕಾರ್ಯ ಕರ್ತೆಯರು ಮತ್ತು ಸಹಾಯಕಿಯರನ್ನು ಯಾಕೆ ಸರಕಾರಿ ನೌಕರರು ಎಂದು ಪರಿಗಣಿಸಬೇಕು ಎನ್ನುವ ಬಗ್ಗೆ ಹತ್ತು ಹಲವು ಉದಾಹರಣೆಗಳ ಸಮೇತ ವಿವರಗಣೆಗಳನ್ನು ನೀಡುತ್ತಾ ಹೋಗುತ್ತದೆ.

ಇಡೀ ರಾಜ್ಯದಾದ್ಯಂತ ಮಹಿಳೆಯರನ್ನೇ ನೇಮಕಾತಿ ಮಾಡಿಕೊಳ್ಳಬೇಕಾದ ಹುದ್ದೆಗಳ ನೇಮಕಾತಿಯಲ್ಲಿ ಆ ಹುದ್ದೆಗಳನ್ನು ಸರಕಾರದ ಶಾಸನಬದ್ಧ ಹುದ್ದೆಗಳು ಎಂದು ಪರಿಗಣಿಸದೇ ಇರುವುದು ಮತ್ತು ಅವರಿಗೆ ಗೌರವಧನದ ಹೆಸರಿನಲ್ಲಿ ಅತ್ಯಲ್ಪ ಮೊತ್ತವನ್ನು ಕೊಡುವುದು ಲಿಂಗ ತಾರತಮ್ಯದ ಸ್ಪಷ್ಟ ನಿದರ್ಶನವಾಗಿದೆ. ಇದು ಸಂವಿಧಾನದ 16 (2)ನೇ ಕಲಮಿನ ಉಲ್ಲಂಘನೆಯಾಗಿದೆ.

ಸದರಿ ಕಲಮು ಉದ್ಯೋಗಾವಕಾಶಗಳ ವಿಚಾರದಲ್ಲಿ ಸರಕಾರ ಲಿಂಗ ತಾರತಮ್ಯ ಮಾಡಬಾರದು ಎಂದು ಸಷ್ಟವಾಗಿ ಹೇಳಿದೆ. ಆದರೂ ಸರಕಾರಗಳು ಇಲ್ಲಿ ಮಹಿಳೆಯರನ್ನೇ ನೇಮಕಾತಿ ಮಾಡಿಕೊಳ್ಳಬೇಕಾದ ಹುದ್ದೆಗಳನ್ನು ಮಹಿಳೆಯರಿಗೆ ನೀಡುವ ಸಂದರ್ಭದಲ್ಲಿ ತಾನೇ ರೂಪಿಸಿಕೊಂಡ ನಾಗರಿಕ ಸೇವಾ ನಿಯಮಗಳನ್ನು ಅನುಸರಿಸಕೊಳ್ಳದಿರುವುದು ಪ್ರಶ್ನಾರ್ಥಕವಾಗಿಯೇ ಉಳಿಯುತ್ತದೆ ಎಂದು ಹೇಳಿದ ನ್ಯಾಯಪೀಠವು ಸರಕಾರಗಳೇ ಇಂಥ ಉಲ್ಲಂಘನೆಗಳನ್ನು ಮಾಡಬಾರದು ಎಂದೂ ತಿಳಿಸಿತು.

ಸರಕಾರದ ಬೇರೆ ಇಲಾಖೆಗಳಲ್ಲಿನ ನೌಕರರು ಮಾಡುತ್ತಿರುವ ಕರ್ತವ್ಯ ನಿರ್ವಹಣೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಮಾಡುತ್ತಿರುವ ಕರ್ತವ್ಯಗಳು ಒಂದೇ ಆಗಿವೆ. ಅಷ್ಟೇ ಅಲ್ಲ ನೇಮಕಾತಿ ಸಂದರ್ಭದಲ್ಲಿ ಕಾರ್ಯಕರ್ತೆಯರಿಗಾಗಿ ಪ್ರಕಟ ಮಾಡಿದ ಅಧಿಸೂಚನೆಗಳಲ್ಲಿನ ಷರತ್ತು ಮತ್ತು ಅರ್ಹತೆಗಳು ಸರಕಾರದಲ್ಲಿ ಗ್ರುಪ್- 3 ಮತ್ತು ಗ್ರುಪ್- 4ರ ಸೇವೆ ಮಾಡುತ್ತಿರುವ ನೌಕರರ ಮಾದರಿಯಲ್ಲಿಯೇ ಇವೆ.

ಸರಕಾರ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು ತಾರತಮ್ಯ ಧೋರಣೆಯಿಂದ ಕಾಣುತ್ತಿದೆ. ಗುಜರಾತ್ ಸರಕಾರ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಕ್ರಮವಾಗಿ ಕೊಡುತ್ತಿರುವ 10 ಸಾವಿರ ರು. ಹಾಗೂ 5 ಸಾವಿರ ರು. ಗಳ ಗೌರವಧನ ಅತ್ಯಲ್ಪವಾದದ್ದಾಗಿದೆ. ಇದು ಸರಿಯಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.

ಕೇಂದ್ರ ಮತ್ತು ರಾಜ್ಯ ಸರಕಾರದ ಖಾಯಮ್ ಹುದ್ದೆಗಳಿಗೆ ನೇಮಕಗೊಂಡ ನೌಕರರಿಗೆ ನಿಡಿರುವ ದರ್ಜೆವಾರು ಸ್ಥಾನಮಾನಗಳನ್ನು ಅಂಗನಾಡಿ ಕಾರ‍್ಯಕರ್ತೆಯರು ಹಾಗೂ ಸಹಾಯಕಿಯರಿಗೆ ನೀಡಬೇಕು.

ಸರಕಾರದಲ್ಲಿನ ಮೂರನೇ ಗ್ರುಪ್ ನೌಕರರು ಮಾಡುತ್ತಿರುವ ಕೆಲಸಗಳನ್ನು ಕಾರ್ಯಕರ್ತೆಯರು ಮಾಡುತ್ತಿದ್ದಾರೆ. ಸಹಾಯಕಿಯರು ನಾಲ್ಕನೇ ದರ್ಜೆ ನೌಕರರ ಕರ್ತವ್ಯಗಳನ್ನು ನಿಭಾಯಿಸುತ್ತಿದ್ದಾರೆ ಎಂಬುದು ತನಗೆ ಮನವರಿಕೆಯಾಗಿದೆ ಎಂದು ನ್ಯಾಯಪೀಠ ಹೇಳಿತು.

ಕೇಂದ್ರ ಮತ್ತು ಗುಜರಾತ್ ಸರಕಾರವು, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲದೇ ಅಗತ್ಯವೆನಿಸುವ ಇತರೆ ಇಲಾಖೆಗಳ ಜಂಟಿ ಸಹ ಭಾಗಿತ್ವದಲ್ಲಿ ಅಂಗನವಾಡಿ ಕಾರ‍್ಯಕರ್ತೆಯರು ಮತ್ತು ಸಹಾಯಕಿಯರಿಗೆ ಕೊಡುವ ವೇತನ ಮತ್ತಿತರ ಸವಲತ್ತುಗಳನ್ನು ನಿರ್ಧರಿಸಲು ಸಮಿತಿ ರಚಿಸಬೇಕು.

ಗುಜರಾತ್ ರಾಜ್ಯದಲ್ಲಿನ ಅಂಗನವಾಡಿಗಳ ಎಲ್ಲ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸೇವೆಯನ್ನು ನಿರ್ದಿಷ್ಟ ಅವಧಿಯೊಳಗೆ ಖಾಯಮ್‌ ಗೊಳಿಸುವ ಕುರಿತು ನೀತಿ ನಿಯಮಾವಳಿಗಳನ್ನು ರೂಪಿಸಬೇಕು.

ಈ ನಿಟ್ಟಿನಲ್ಲಿ ಕೇಂದ್ರ ಮತ್ತು ಗುಜರಾತ್ ಸರಕಾರಗಳು ಸೂಕ್ತ ನೀತಿ ನಿಯಮಾವಳಿಗಳನ್ನು ರೂಪಿಸುವಾಗ, ಗುಜರಾತ್ ನಾಗರೀಕ ಸೇವೆಗಳ ನಿಯಮಾವಳಿಗಳು- 1967ರ ಪ್ರಕಾರ ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಸಹಾಯಕಿಯರಿಗೆ ಹುದ್ದೆಗಳನ್ನು ಖಚಿತಪಡಿಸ ಬೇಕು.

ಹೀಗೆ ನಾಗರಿಕ ಸೇವೆಗಳಿಗೆ ಸೇರ್ಪಡೆಯಾಗುವ ಅಂಗನವಾಡಿ ಕಾರ್ಯಕರ್ತರಿಗೆ ಯಾವ ವರ್ಷದಿಂದ ಖಾಯಮಾತಿಯ ವೇತನವನ್ನು ನೀಡಬೇಕು ಎಂಬುದನ್ನು ಸರಕಾರಗಳೇ ನಿರ್ಧರಿಸಬೇಕು ಎಂದೂ ತಿಳಿಸಲಾಗಿದೆ.

ಆದರೆ, ಇದೀಗ ಹೈಕೋರ್ಟಿನಲ್ಲಿ ಪ್ರಕರಣ ದಾಖಲಿಸಿರುವ 313 ಅರ್ಜಿದಾರ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಸರಕಾರ ಕ್ರಮವಾಗಿ ಈಗ ಗ್ರುಪ್- 3 ಮತ್ತು ಗ್ರುಪ್- 4ನೇ ದರ್ಜೆ ನೌಕರರಿಗೆ ನೀಡುತ್ತಿರುವ ವೇತನವನ್ನು ೨೦೧೨ರ ಮೇನಿಂದ ಪೂರ್ವಾನ್ವಯವಾಗಿ ಕೊಡಬೇಕು ಎಂದು ನ್ಯಾಯಪೀಠ ಸ್ಪಷ್ಟವಾಗಿ ಹೇಳಿದೆ.

ಇನ್ನುಳಿದಂತೆ ಗುಜರಾತಿನಲ್ಲಿನ ಎಲ್ಲ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಖಾಯಮಾತಿಗಾಗಿ ನೇಮಕಾತಿ ನಿಯಮಗಳನ್ನು ಆರು ತಿಂಗಳ ಒಳಗಾಗಿ ರಚಿಸಬೇಕು ಎಂದು ತೀರ್ಪಿನಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.

2019ರ ಅಕ್ಟೋಬರ್ 19ರಂದು ಗುಜರಾತ್ ಸರಕಾರ ಹೊರಡಿಸಿದ ಸುತ್ತೋಲೆ ಪ್ರಕಾರ ಮೂರನೇ ಗ್ರುಪ್ ನೌಕರರು 14800 ರುಪಾಯಿಗಳ ಸಂಬಳ ಪಡೆಯುತ್ತಿದ್ದಾರೆ. ಇದು ಪ್ರಕರಣ ವಿಚಾರಣೆಯಲ್ಲಿದ್ದಾಗ ನಿಗದಿಯಾದ ಮೊತ್ತವಾಗಿದೆ.

2023ರ ಹೊಸ ಸುತ್ತೋಲೆಯ ಪ್ರಕಾರ ಗುಜರಾತ್‌ನಲ್ಲಿನ ಮೂರನೇ ಗ್ರುಪ್ ನೌಕರರು 26 ಸಾವಿರ ರುಪಾಯಿಗಳ ವೇತನವನ್ನು ಪಡೆಯುತ್ತಿದ್ದಾರೆ. ನಾಲ್ಕನೇ ಗ್ರುಪ್ ನೌಕರರು 21 ಸಾವಿರ ರುಪಾಯಿಗಳ ವೇತನವನ್ನು ಪಡೆಯುತ್ತಿದ್ದಾರೆ.

ದಿನಾಂಕ 02 – 08- 2024ರಂದು ಪ್ರಕಟಗೊಂಡ ಈ ತೀರ್ಪನ್ನು 30- 10- 2024ರಂದು ಗುಜರಾತ್ ಹೈಕೋರ್ಟ್‌ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

ತೀರ್ಪನ ಪ್ರಕಾರ 2025ರ ಏಪ್ರೀಲ್ ಅಂತ್ಯದ ಒಳಗಾಗಿ ಗುಜರಾತ್ ರಾಜ್ಯ ಮತ್ತು ಕೇಂದ್ರ ಸರಕಾರಗಳು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು ಸರಕಾರಿ ಸೇವೆಗೆ ಸೇರ್ಪಡೆ ಮಾಡಿಕೊಳ್ಳುವ ಕುರಿತು ನೀತಿ ನಿಯಮಾವಳಿಗಳನ್ನು ರಚಿಸಲೇಬೇಕಾಗಿದೆ.

ಈ ನಿಟ್ಟಿನಲ್ಲಿ ಕೇಂದ್ರ ಸರಕಾರದ ನಡೆ ಏನಾಗಿರಬಹುದು ಎಂಬುದೇ ಸದ್ಯದ ಕುತೂಹಲ. ಯಾಕೆಂದರೆ ಹಿಂದಿನ ಉದಾಹರಣೆಗಳನ್ನು ಗಮನಿಸಿದರೆ ಅಂಗನವಾಡಿ ಕಾರ್ಯಕರ್ತರಿಗೆ ಸವಲತ್ತುಗಳನ್ನು ನೀಡಬೇಕಾದ ವಿಚಾರದಲ್ಲಿ ಕೇಂದ್ರ ಸರಕಾರವು ಹೆಚ್ಚು ಆಸಕ್ತಿ ವಹಿಸಿಲ್ಲ.

ಮಣಿಬೆನ್ ಭಾರಿಯಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ೨೦೨೨ರ ಏಪ್ರಿಲ್ ನಲ್ಲಿಯೇ ನೀಡಿದ ತೀರ್ಪಿನಲ್ಲಿ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಸರಕಾರದ ಹತ್ತಾರು ಕೆಲಸಗಳನ್ನು ಮಾಡುತ್ತಿದ್ದರೂ ಅವರಿಗೆ ಕೆಲಸದ ಭದ್ರತೆಯಿಲ್ಲ. ಅವರು ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಬೆನ್ನೆಲುಬೇ ಆಗಿದ್ದಾರೆ.

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಂದ ಇನ್ನೂ ಹೆಚ್ಚಿನ ಪ್ರಮಾಣದ ಗುಣಾತ್ಮಕ ಸೇವೆಗಳನ್ನು ಪಡೆಯಬೇಕೆಂದರೆ ಅವರಿಗೆ ಸೇವಾ ಭದ್ರತೆ ಅಂದರೆ, ಅವರ ಸೇವೆಯ ಖಾಯಮಾತಿ ಕುರಿತು ಕೇಂದ್ರ ಮತ್ತು ಎಲ್ಲ ರಾಜ್ಯ ಸರಕಾಗಳು ನೀತಿ ನಿಯಮಾವಳಿಗಳನ್ನು ರಚಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು.

ಅದಕ್ಕೆ ಇದು ಸಕಾಲ ಎಂದು ಹೇಳಿತ್ತು. ಆದರೆ ಇಂದಿನವರೆಗೂ ಕೇಂದ್ರ ಸರಕಾರ ಈ ನಿಟ್ಟಿನಲ್ಲಿ ಯಾವುದೇ ರಾಜ್ಯಗಳೊಂದಿಗೆ ಸಮನ್ವಯತೆಯನ್ನು ಸಾಧಿಸಿ ಚರ್ಚೆಯನ್ನು ನಡೆಸಿಲ್ಲ. ಗುಜರಾತ್ ಹೈಕೋರ್ಟ್ ತೀರ್ಪಿನ ನಂತರದ ಬೆಳವಣಿಗೆಗಳಲ್ಲಿಯಾದರೂ ಕೇಂದ್ರ ಸರಕಾರ ಗುಜರಾತ್ ಸೇರಿದಂತೆ ಎಲ್ಲ ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿರ ಸೇವೆಗಳನ್ನು ನಾಗರಿಕ ಸೇವೆಗಳೆಂದು ಪರಿಗಣಿಸಲು ನೀತಿ ನಿಯಮಾವಳಿಗಳನ್ನು ರಚಿಸಲು ಮುಂದಾಗಬೇಕು.

ಅಂದಾಗ ಮಾತ್ರ ಕರ್ನಾಟಕವೂ ಸೇರಿದಂತೆ ದೇಶದ ಎಲ್ಲ ಅಂಗನವಾಡಿಗಳ ಕಾರ್ಯಕರ್ತರಿಗೆ ಸರಕಾರಿ ಸೇವೆಗಳ ಸ್ಥಾನಮಾನ ಖಚಿತವಾಗುತ್ತದೆ. ಇದರ ಜೊತೆಗೆ ಅಂಗನವಾಡಿ ಕಾರ್ಯಕರ್ತರು ಪದೆ ಪದೇ ಬೀದಿಗಿಳಿದು ಹೋರಾಟ ಮಾಡುವುದು ಕೂಡ ತಪ್ಪುತ್ತದೆ.

ಇದೇ ಸಂದರ್ಭದಲ್ಲಿ ನ್ಯಾಯಮೂತಿ ಕರೇಲಾ ಅವರು, ಸುಪ್ರೀಂ ಕೋರ್ಟಿನಲ್ಲಿ ಇತ್ಯರ್ಥವಾದ ಕರ್ನಾಟಕದ ಅಮೀರಬೀಪ್ರಕರಣ, ಗುಜರಾತಿನ ಮಣಿಬೆನ್ ಭಾರಿಯಾ ಗ್ರ್ಯಾಚ್ಯುಟಿ ಪ್ರಕರಣಗಳನ್ನು ಉಲ್ಲೇಖಿಸುತ್ತಾ ಅಂಗನವಾಡಿ ಕಾರ್ಯಕರ್ತೆಯರಿಗೆ ನ್ಯಾಯಾಲಯ ನೀಡಿರುವ ತೀರ್ಪಿನ ಪ್ರಕಾರ ಕಾಲಮಿತಿಯೊಳಗೆ ವೇತನ ಸೇರಿದಂತೆ ಸರಕಾರದ ಇತರೆ ಸವಲತ್ತುಗಳು ಸಿಗುವಂತಾಗಬೇಕು ಎಂದು ಸಹ ಆದೇಶಿಸಿದ್ದಾರೆ.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

RAVI BASRUR : ‘ಪ್ರತಿಭೆಗಳನ್ನು ಪ್ರೋತ್ಸಾಹಿಸಿ, ನಿಮ್ಮ ಹೆಸರೇಳಿ ಬದುಕೊಳ್ತಾರೆ’

Bagalkote News: ಸಿದ್ದನಕೊಳ್ಳ ಜಾತ್ರಾ ಮಹೋತ್ಸವ ಅಂಗವಾಗಿ ಶ್ರೀ ಸಿದ್ದಶ್ರೀ ರಾಷ್ಟ್ರೀಯ ಉತ್ಸವ ಮತ್ತು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸಮಾರಂಭ ಜರುಗಿತು. ಜ್ಯೋತಿ ಬೆಳಗಿಸುವ ಮೂಲಕ ಶಾಸಕ...

BUS FIRE INCIDENT : ಹೊತ್ತಿ ಉರಿದ ಬಸ್, ತೆಲಂಗಾಣದ ಓರ್ವ ಸಾವು

Mathura (Uttar Pradesh) News: ಉತ್ತರಪ್ರದೇಶದ ಮಥುರಾದಲ್ಲಿ ತೆಲಂಗಾಣದ 50ಕ್ಕೂ ಹೆಚ್ಚು ಜನರಿದ್ದ BUS​ವೊಂದು ಬೆಂಕಿಗಾಹುತಿಯಾಗಿದ್ದು, ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ.ತೆಲಂಗಾಣದ ಜನರಿಂದ ತುಂಬಿದ್ದ ಬಸ್​ವೊಂದು ಮಥುರಾದಲ್ಲಿ...

NEW PRESIDENT FOR KPCC : ಕೆಪಿಸಿಸಿಗೆ ಪೂರ್ಣ ಪ್ರಮಾಣದ ಹೊಸ ಅಧ್ಯಕ್ಷರನ್ನು ಆದಷ್ಟು ಬೇಗ ನೇಮಕ ಮಾಡಲಿ

Bangalore News: ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ನನ್ನನ್ನು ನಾನು NEW PRESIDENT FOR KPCC ಎಂದು ಮಾಡಿ ಎಂದು ಹೇಳಿಲ್ಲ. ನಾವುಗಳೆಲ್ಲ ಸಚಿವರಾದ...

HOMEOWNERS NOTE TO THIEVES : ಸಂಕ್ರಾಂತಿಗೆ ಊರಿಗೆ ಹೋಗುವಾಗ ಜಾಣತನ ಮೆರೆದ ಮನೆ ಮಾಲೀಕ

Hyderabad News: ಈ ರೀತಿಯ ವಿಚಿತ್ರ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುವ ಜೊತೆಗೆ ಮನೆ ಮಾಲೀಕನ ಹಾಸ್ಯ ಮತ್ತು ಬುದ್ದಿವಂತಿಕೆಗೆ ಮೆಚ್ಚುಗೆ ಕೂಡ ವ್ಯಕ್ತವಾಗುತ್ತಿದೆ.ಇಂತಹುದೇ...