ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಅನುಮೋದನೆಯಂತೆ ರಾಜ್ಯ ಸರಕಾರಿ ನೌಕರರ ತುಟ್ಟಿ ಭತ್ಯೆಯನ್ನು ಶೇ 2.25ರಷ್ಟು ಏರಿಸಲಾಗಿದೆ.
ರಾಜ್ಯ ಸರಕಾರಿ ನೌಕರರ ತುಟ್ಟಿ ಭತ್ಯೆಯನ್ನು ಶೇಕಡಾ 2.25ರಷ್ಟು ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿದೆ. ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಅನುಮೋದನೆಯ ಮೇರೆಗೆ ತುಟ್ಟಿಭತ್ಯೆ ಏರಿಕೆ ಮಾಡಲಾಗಿದೆ.
7ನೇ ವೇತನ ಆಯೋಗ ಜಾರಿಯಾದ ಬಳಿಕ ರಾಜ್ಯ ಸರಕಾರಿ ನೌಕರರ ತುಟ್ಟಿ ಭತ್ಯೆಯನ್ನು ಮೂಲವೇತನದ ಶೇ 8.50ರಷ್ಟು ನಿಗದಿಪಡಿಸಲಾಗಿತ್ತು. ಸರಕಾರ ಈಗ ಶೇ 2.25ರಷ್ಟು ಏರಿಕೆ ಮಾಡಿದ್ದರಿಂದ ಸರಕಾರಿ ಸಿಬ್ಬಂದಿಯ ಡಿಎ ಶೇ 10.75ಕ್ಕೆ ಹೆಚ್ಚಳವಾದಂತಾಗಿದೆ.
2024ರ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ನೀಡಲಾಗುತ್ತಿರುವ ತುಟ್ಟಿ ಭತ್ಯೆಯ ದರಗಳನ್ನು 1ನೇ ಜುಲೈ 2024ರಿಂದ ಜಾರಿಗೆ ಬರುವಂತೆ ಪ್ರಸ್ತುತ ಮೂಲ ವೇತನದ ಶೇ 8.50ರಿಂದ ಶೇ 10.75ಕ್ಕೆ ಪರಿಷ್ಕರಿಸಿ ಹೆಚ್ಚಿಸಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸಾಮಾನ್ಯವಾಗಿ, ಕೇಂದ್ರ ಸರಕಾರ ತನ್ನ ಸಿಬ್ಬಂದಿಗೆ ಡಿಎ ಹೆಚ್ಚಳ ಮಾಡಿದ ಪ್ರಮಾಣದಲ್ಲಿಯೇ ರಾಜ್ಯ ಸರಕಾರವು ತುಟ್ಟಿ ಭತ್ಯೆ ಹೆಚ್ಚಳ ಮಾಡುತ್ತಿತ್ತು. ಆದರೆ ಆಗಸ್ಟ್ ಒಂದರಿಂದ ಜಾರಿಗೆ ಬರುವಂತೆ ಏಳನೇ ವೇತನ ಆಯೋಗದ ವರದಿ ಅನುಷ್ಟಾನಕ್ಕೆ ತಂದು ಸರಕಾರಿ ನೌಕರರ ವೇತನ ಹೆಚ್ಚಳ ಮಾಡಿದ್ದರಿಂದ ಡಿಎ ಪರಿಷ್ಕರಣೆಯಲ್ಲಿ ಕೇಂದ್ರ ಸರಕಾರಕ್ಕಿಂತ ಸ್ವಲ್ಪ ಕಡಿಮೆ ಹೆಚ್ಚಳ ಮಾಡಲಾಗಿದೆ.
ಕೇಂದ್ರ ಸರಕಾರ ಶೇ 3ರಷ್ಟು ಡಿಎ ಏರಿಕೆ ಮಾಡಿದ್ದರೆ, ರಾಜ್ಯ ಸರಕಾರ ಶೇ 2.25ರಷ್ಟು ಹೆಚ್ಚಿಸಿದೆ.
ತುಟ್ಟಿ ಭತ್ಯೆ ಹೆಚ್ಚಳವು ಎಲ್ಲಾ ರಾಜ್ಯ ಸರಕಾರಿ ನೌಕರರು, ನಿಗಮ ಮಂಡಳಿ ಸಿಬ್ಬಂದಿ, ಪಂಚಾಯತ್ ಇಲಾಖೆ ನೌಕರರು, ಅನುದಾನಿತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿ ಮತ್ತು ನಿವೃತ್ತಿ ನೌಕರರಿಗೆ ಅನ್ವಯವಾಗಲಿದೆ.