ಹೊಸದಿಲ್ಲಿ: ಭಾರತ ಅಭಿವೃದ್ಧಿ ಹೊಂದಬೇಕು ಎಂದರೆ ಇಂದಿನ ಯುವ ಜನತೆ ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು. ಭಾರತವು ಅಭಿವೃದ್ಧಿ ಹೊಂದಿದ ದೇಶಗಳ ಸಾಲಿನಲ್ಲಿ ನಿಲ್ಲಲು ಸಾಧ್ಯ ಎಂಬ ತಮ್ಮ ವಿವಾದಾತ್ಮಕ ಹೇಳಿಕೆಯನ್ನು ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಸಮರ್ಥಿಸಿಕೊಂಡಿದ್ದಾರೆ. ತಾವು ಸತ್ತರೂ ಅಭಿಪ್ರಾಯ ಬದಲಾಗುವುದಿಲ್ಲ ಎಂದು ಹೇಳಿದ್ದಾರೆ.
ಭಾರತದ ಆರ್ಥಿಕ ಪ್ರಗತಿಗೆ ಕಠಿಣ ಶ್ರಮ ಹಾಗೂ ಸಮರ್ಪಣೆಯ ಸಂಸ್ಕೃತಿಯ ಅಗತ್ಯವಿದೆ ಎಂಬ ತಮ್ಮ ನಂಬಿಕೆಗೆ ಬದ್ಧರಾಗಿರುವುದಾಗಿ ಅವರು ಪ್ರತಿಪಾದಿಸಿದ್ದಾರೆ.
ಸಿಎನ್‌ಬಿಸಿ ಗ್ಲೋಬಲ್ ಲೀಡರ್‌ಶಿಪ್ ಶೃಂಗದಲ್ಲಿ ಮಾತನಾಡಿದ ನಾರಾಯಣ ಮೂರ್ತಿ, ಉದ್ಯೋಗದ ಅವಧಿ ವಿಸ್ತರಣೆ ಕುರಿತಾದ ತಮ್ಮ ಅಭಿಪ್ರಾಯವನ್ನು ಸಮರ್ಥಿಸಿಕೊಂಡರು.
“ಕ್ಷಮೆ ಇರಲಿ, ನಾನು ನನ್ನ ಅಭಿಪ್ರಾಯವನ್ನು ಬದಲಿಸಿಲ್ಲ. ಇದನ್ನು ನನ್ನ ಸಮಾಧಿಯವರೆಗೂ ನಾನು ಕೊಂಡೊಯ್ಯುತ್ತೇನೆ” ಎಂದು ಶೃಂಗಸಭೆಯಲ್ಲಿ ಅವರು ಶೆರೀನ್ ಭಾನ್ ಜತೆ ಸಂವಾದದ ವೇಳೆ, ವಾರದಲ್ಲಿ ಆರು ದಿನ ಕೆಲಸದ ಕುರಿತಾದ ಅಭಿಪ್ರಾಯವನ್ನು ಸಮರ್ಥಿಸಿಕೊಂಡರು.
ಭಾರತದ ಅಭಿವೃದ್ಧಿಯು ತ್ಯಾಗ ಹಾಗೂ ಪ್ರಯತ್ನದ ಮೇಲೆ ಅವಲಂಬಿತವಾಗಿದೆಯೇ ವಿನಾ, ಸುಖದಾಯಕ ಮತ್ತು ಆರಾಮದಾಯಕ ಜೀವನದ ಮೇಲೆ ಅಲ್ಲ. ಪ್ರಬಲ ದುಡಿಮೆ ಬದ್ಧತೆ ಇಲ್ಲದೆ ಜಾಗತಿಕ ಸ್ಪರ್ಧೆಗಳ ಜತೆ ಹೋರಾಡಲು ದೇಶ ಪರದಾಡಬೇಕಾಗುತ್ತದೆ ಎಂದರು.
“ಪ್ರಧಾನಿ ಮೋದಿ ಅಷ್ಟು ಕಷ್ಟಪಟ್ಟು ಕೆಲಸ ಮಾಡುತ್ತಿರುವಾಗ, ನಮ್ಮ ಸುತ್ತಲೂ ನಡೆಯುತ್ತಿರುವುದಕ್ಕೆ ನಮ್ಮ ಮೆಚ್ಚುಗೆ ತೋರಿಸಲು ಇರುವ ಏಕೈಕ ಮಾರ್ಗವೆಂದರೆ ಅಷ್ಟೇ ಶ್ರಮವಹಿಸಿ ದುಡಿಯುವುದು” ಎಂದು ತಿಳಿಸಿದರು.
ಕಠಿಣ ಪರಿಶ್ರಮಪಡುವುದು ವೈಯಕ್ತಿಕ ಆಯ್ಕೆ ಮಾತ್ರವಲ್ಲ; ಅದು ಭಾರತದಲ್ಲಿ ಬಹುತೇಕ ಸಹಾಯಧನವೂ ಸಿಗುವ ಸಾಕಷ್ಟು ಶಿಕ್ಷಣ ಪಡೆಯುವ ಅದೃಷ್ಟ ಪಡೆದವರ ಜವಾಬ್ದಾರಿ ಕೂಡ ಎಂದರು. ಕಾರ್ಯ ಬದ್ಧತೆಯು ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗ ಮತ್ತು ಅವಕಾಶಗಳನ್ನು ಪಡೆದವರ ಕರ್ತವ್ಯ ಕೂಡ ಎಂದು ಉಲ್ಲೇಖಿಸಿದರು.
ವಾರಕ್ಕೆ 70 ಗಂಟೆ ಕೆಲಸ ಮಾಡಲು ಯುವಕರು ಸಿದ್ಧರಾಗಿರಬೇಕು ಎಂಬ ನಾರಾಯಣ ಮೂರ್ತಿ ಅವರ ಹೇಳಿಕೆ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಅನೇಕ ಕೈಗಾರಿಕೋದ್ಯಮಿಗಳು ಇದನ್ನು ಬೆಂಬಲಿಸಿದ್ದರು. ಆದರೆ, ಲಕ್ಷಾಂತರ ಮಂದಿ ಉದ್ಯೋಗಿಗಳು, ರಾಜಕಾರಣಿಗಳು ಮುಂತಾದವರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
ಕಷ್ಟಪಟ್ಟು ಕೆಲಸ ಮಾಡುವುದು ರಾಷ್ಟ್ರೀಯ ಪ್ರಗತಿ ಸಾಧಿಸಲು ಬಹಳ ಅವಶ್ಯಕ ಎಂದ ಅವರು, ದಣಿವರಿಯದ ಪರಿಶ್ರಮದ ಬದ್ಧತೆಗಾಗಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಉದಾಹರಣೆಯನ್ನು ನೀಡಿದರು.
ಕೆಲಸದ ನೀತಿಗಳು ಮತ್ತು ಉತ್ಪಾದಕತೆ ಕುರಿತಾಗಿ ಹಿಂದಿನಿಂದಲೂ ಮಾತನಾಡುತ್ತಿರುವ ಅವರು, 1986ರಲ್ಲಿ, ವಾರದ ಆರು ದಿನದ ಕೆಲಸದ ಅವಧಿಯಿಂದ ಐದು ದಿನಕ್ಕೆ ಇಳಿಸಿದ ಭಾರತ ಸರ್ಕಾರದ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಇದು ತಾವು ಎಂದಿಗೂ ಒಪ್ಪದ ಬದಲಾವಣೆ ಎಂದು ಹೇಳಿದರು.