ಗೌರಿ – ಗಣೇಶ ಹಬ್ಬದ ಪ್ರಯುಕ್ತ ಕೆಎಸ್ಆರ್ಟಿಸಿ (KSRTC) ಕರ್ನಾಟಕದ ವಿವಿಧ ಸ್ಥಳಗಳಿಗೆ ಹಾಗೂ ನೆರೆ ರಾಜ್ಯಗಳಿಗೆ ಹೆಚ್ಚುವರಿ 1500 ಬಸ್ಗಳನ್ನು ನಿಯೋಜಿಸಿದೆ. ಯಾವೆಲ್ಲ ಊರಿಗಳಿಗೆ ವಿಶೇಷ ಬಸ್ ಅನುಕೂಲತೆ ಇದೆ? ಟಿಕೆಟ್ ಬುಕಿಂಗ್ ಹೇಗೆ? ಮುಂಗಡ ಕಾಯ್ದಿರಿಸುವಿಕೆಗೆ ರಿಯಾಯಿತಿ ಇದೆಯೇ? ಮುಂತಾದ ವಿವರ ಇಲ್ಲಿದೆ.
ಗೌರಿ ಮತ್ತು ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತು ಹೆಚ್ಚಿದ ಬೇಡಿಕೆಗೆ ಅನುಗುಣವಾಗಿ ಹೆಚ್ಚುವರಿ ಬಸ್ಗಳನ್ನು ಘೋಷಿಸಿದೆ. ಬೆಂಗಳೂರಿನಿಂದ ಸಾಮಾನ್ಯ ವೇಳಾಪಟ್ಟಿಯನ್ನು ಹೊರತುಪಡಿಸಿ ಅನೇಕ ಸ್ಥಳಗಳಿಗೆ ಹೆಚ್ಚುವರಿ 1,500 ವಿಶೇಷ ಬಸ್ಗಳನ್ನು ಕೆಎಸ್ಆರ್ಟಿಸಿ ಘೋಷಿಸಿದೆ.
ಎಲ್ಲಿಗೆಲ್ಲ ಈ KSRTC ವಿಶೇಷ ಬಸ್?
ಕೆಎಸ್ಆರ್ಟಿಸಿ ವಿಶೇಷ ಬಸ್ಗಳು ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಿಂದ ಹಲವು ಪ್ರಮುಖ ಸ್ಥಳಗಳಿಗೆ ಸಂಚರಿಸಲಿವೆ. ತಿರುಪತಿ, ವಿಜಯವಾಡ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಧರ್ಮಸ್ಥಳ, ಕುಕ್ಕೆಸುಬ್ರಹ್ಮಣ್ಯ, ಶಿವಮೊಗ್ಗ, ವಿಜಯಪುರ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ, ಬೀದರ್, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಮತ್ತು ಹೈದರಾಬಾದ್ ಸೇರಿದಂತೆ ಇತರೆ ಕಡೆಗಳಿಗೆ ಕೆಎಸ್ಆರ್ಟಿಸಿ ವಿಶೇಷ ಬಸ್ಗಳು ಸಂಚರಿಸಲಿದೆ.
ಮೈಸೂರು ರಸ್ತೆ ಉಪಗ್ರಹ ಬಸ್ ನಿಲ್ದಾಣದಿಂದ ವಿಶೇಷ ಬಸ್ಗಳು ಪಿರಿಯಾಪಟ್ಟಣ, ವಿರಾಜಪೇಟೆ, ಮೈಸೂರು, ಹುಣಸೂರು, ಕುಶಾಲನಗರ ಮತ್ತು ಮಡಿಕೇರಿ ಸೇರಿದಂತೆ ಪ್ರಮುಖ ಸ್ಥಳಗಳಿಗೆ ತೆರಳಲಿವೆ ಎಂದು ಕೆಎಸ್ಆರ್ಟಿಸಿ ತಿಳಿಸಿದೆ.
ಇದನ್ನೂ ಓದಿ :ಚಾಮುಂಡೇಶ್ವರಿ ದೇವಸ್ಥಾನ ನಮ್ಮ ಆಸ್ತಿ; ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಮೋದಾದೇವಿ
KSRTC ವಿಶೇಷ ಬಸ್ಗಳಿಗೆ ಟಿಕೆಟ್ ಬುಕಿಂಗ್ ಹೇಗೆ?
ವಿಶೇಷ ಹಾಗೂ ಹೆಚ್ಚುವರಿ ಬಸ್ಗಳ ಪ್ರಯಾಣದ ವೇಳೆ ಹಾಗೂ ದರದ ಬಗ್ಗೆ ಕೆಎಸ್ಆರ್ಟಿಸಿ ಮೊಬೈಲ್ ಆ್ಯಪ್ ಹಾಗೂ https://www.ksrtc.in/ ವೆಬ್ಸೈಟ್ ಮೂಲಕ ಸಂಸ್ಥೆ ಮಾಹಿತಿ ನೀಡಲಿದೆ. ಇವುಗಳ ಮೂಲಕವೇ ಟಿಕೆಟ್ ಕಾಯ್ದಿರಿಸಬಹುದಾಗಿದೆ. ಕರ್ನಾಟಕದಾದ್ಯಂತ ಬಸ್ ನಿಲ್ದಾಣಗಳಲ್ಲಿನ ಹಾಗೂ ನೆರೆ ರಾಜ್ಯಗಳ ಕೆಎಸ್ಆರ್ಟಿಸಿ ಕೌಂಟರ್ಗಳ ಮೂಲಕವೂ ಟಿಕೆಟ್ ಕಾಯ್ದಿರಿಸಬಹುದಾಗಿದೆ.
ಒಬ್ಬ ವ್ಯಕ್ತಿಯು ಒಂದು ಬುಕಿಂಗ್ಗೆ 4 ಅಥವಾ 5 ಮಂದಿಗೆ ಟಿಕೆಟ್ ಕಾಯ್ದಿರಿಸಿದರೆ ಶೇ 5ರ ರಿಯಾಯಿತಿ ನೀಡುವುದಾಗಿಯೂ ಕೆಎಸ್ಆರ್ಟಿಸಿ ಘೋಷಿಸಿದೆ. ಹಿಂತಿರುಗುವ ಟಿಕೆಟ್ ಕೂಡ ಒಟ್ಟಿಗೇ ಕಾಯ್ದಿರಿಸಿದರೆ ಶೇ 10ರ ರಿಯಾಯಿತಿ ದೊರೆಯಲಿದೆ.
ಗೌರಿ – ಗಣೇಶ ಹಬ್ಬದ ಪ್ರಯುಕ್ತ ಬೆಂಗಳೂರಿನಿಂದ ರಾಜ್ಯದ ವಿವಿಧ ಸ್ಥಳಗಳಿಗೆ ಮತ್ತು ಹೊರ ರಾಜ್ಯಗಳಿಗೆ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ 1500 ಹೆಚ್ಚುವರಿ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಿದೆ.
ಸೆಪ್ಟೆಂಬರ್ 06 ರಂದು ಸ್ವರ್ಣಗೌರಿ ವ್ರತ, ಸೆಪ್ಟಂಬರ್ 07 ರಂದು ಗಣೇಶ ಚತುರ್ಥಿ ಹಾಗೂ 08 ರಂದು ವಾರಾಂತ್ಯದ ದಿನ ಭಾನುವಾರವಾದ್ದರಿಂದ ಕರ್ನಾಟಕ ರಸ್ತೆ ಸಾರಿಗೆ ನಿಗಮವು, ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಸೆಪ್ಟಂಬರ್ 05 ರಿಂದ 07 ರವರೆಗೆ ಬೆಂಗಳೂರಿನಿಂದ ರಾಜ್ಯದ ವಿವಿಧ ಸ್ಥಳಗಳಿಗೆ 1500 ಹೆಚ್ಚುವರಿ ವಾಹನಗಳ ವಿಶೇಷ ಸಾರಿಗೆ ವ್ಯವಸ್ಥೆ ಮಾಡಿರುತ್ತದೆ. ನಂತರ ರಾಜ್ಯದ ಮತ್ತು ಅಂತಾರಾಜ್ಯದ ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ಸೆಪ್ಟೆಂಬರ್ 08 ರಂದು ವಿಶೇಷ ವಾಹನಗಳನ್ನು ಕಾರ್ಯಾಚರಣೆ ಮಾಡಲಾಗುವುದು ಎಂದು (ksrtc) ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದೆ.
ಕೆಂಪೇಗೌಡ ಬಸ್ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆಸುಬ್ರಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್, ತಿರುಪತಿ, ವಿಜಯವಾಡ, ಹೈದರಾಬಾದ್ ಮುಂತಾದ ಸ್ಥಳಗಳಿಗೆ ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತದೆ. ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ, ಮಡಿಕೇರಿ ಮಾರ್ಗದ ಕಡೆ ಕಾರ್ಯಾಚರಣೆ ನಡೆಸಲಿದ್ದು, ತಮಿಳುನಾಡು ಮತ್ತು ಕೇರಳ ಕಡೆಗೆ ಅಂದರೆ ಮಧುರೈ, ಕುಂಭಕೋಣಂ, ಚೆನ್ನೈ, ಕೊಯಮತ್ತೂರ್, ತಿರುಚಿ, ಪಾಲಕ್ಕಾಡ್, ತ್ರಿಶೂರ್, ಎರ್ನಾಕುಲಂ, ಕೋಯಿಕ್ಕೋಡ್, ಕ್ಯಾಲಿಕಟ್ ಮುಂತಾದ ಸ್ಥಳಗಳಿಗೆ ಹೋಗುವ ಪ್ರತಿಷ್ಠಿತ ಸಾರಿಗೆಗಳನ್ನು ಶಾಂತಿನಗರದಲ್ಲಿನ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಿಂದ ಕಾರ್ಯಾಚರಣೆ ಮಾಡಲಾಗುವುದು ಎಂದು ತಿಳಿಸಿದೆ.
ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ಸಾರಿಗೆಗಳಿಗೆ ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸುವ ಅವಕಾಶ ಕಲ್ಪಿಸಲಾಗಿದೆ. ಪ್ರಯಾಣಿಕರು ಬಸ್ ನಿಲ್ದಾಣಗಳಿಗೆ ತೆರಳುವ ಮುನ್ನ ಮುಂಗಡ ಕಾಯ್ದಿರಿಸಲಾಗಿರುವ ಟಿಕೆಟುಗಳ ಮೇಲೆ ನಮೂದಿಸಲಾಗಿರುವ ಬಸ್ ನಿಲ್ದಾಣ/ಪಿಕ್ಅಪ್ ಪಾಯಿಂಟ್ನ ಹೆಸರನ್ನು ಗಮನಿಸುವಂತೆ ಕೋರಿದ್ದು,ಇ – ಟಿಕೆಟ್ ಬುಕಿಂಗ್ನ್ನು www.ksrtc.karnataka.gov.in ವೆಬ್ ಸೈಟ್ ಮುಖಾಂತರ ಮಾಡಬಹುದಾಗಿದೆ.
ಸಾರ್ವಜನಿಕ ಪ್ರಯಾಣಿಕರು ಕರ್ನಾಟಕ ಹಾಗೂ ಅಂತಾರಾಜ್ಯದಲ್ಲಿ ಇರುವ ಬುಕಿಂಗ್ ಕೌಂಟರ್ಗಳ ಮೂಲಕ ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸಬಹುದಾಗಿದೆ. ನಾಲ್ಕು ಅಥವಾ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಟಿಕೆಟ್ ಕಾಯ್ದಿರಿಸಿದಲ್ಲಿ ಶೇ. 5 ರಷ್ಟು ರಿಯಾಯಿತಿ ನೀಡಲಾಗುವುದು ಹಾಗೂ ಹೋಗುವ & ಬರುವ ಪ್ರಯಾಣದ ಟಿಕೆಟ್ನ್ನು ಒಟ್ಟಿಗೆ ಕಾಯ್ದಿರಿಸಿದಾಗ ಬರುವ ಪ್ರಯಾಣ ದರದಲ್ಲಿ ಶೇಕಡಾ 10 ರಷ್ಟು ರಿಯಾಯಿತಿ ನೀಡಲಾಗುವುದು ಎಂದು ತಿಳಿಸಿದೆ.
ನೆರೆ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಗೋವಾ, ಮಹಾರಾಷ್ಟ್ರ ಹಾಗೂ ಪುದುಚೇರಿಯಲ್ಲಿ ಇರುವ ಪ್ರಮುಖ ನಗರಗಳಲ್ಲಿ ನಿಗಮದ ಮುಂಗಡ ಆಸನಗಳನ್ನು ಕಾಯ್ದಿರಿಸುವ ಕೌಂಟರ್ಗಳು ಇದ್ದು, ಇವುಗಳ ಮೂಲಕ ಸಹ ಮುಂಗಡವಾಗಿ ಆಸನಗಳನ್ನು ನಿಗಮದ ಸಾರಿಗೆಗಳಿಗೆ ಕಾಯ್ದಿರಿಸಬಹುದಾಗಿದೆ. ಕಾರ್ಯಾಚರಣೆ ಮಾಡಲಾಗುವ ಹೆಚ್ಚುವರಿ ಸಾರಿಗೆಗಳು, ಅವುಗಳು ಹೊರಡುವ ಸ್ಥಳ ಹಾಗೂ ವೇಳಾ ವಿವರಗಳನ್ನು ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸುವ ಅಂತರ್ಜಾಲ ವ್ಯವಸ್ಥೆಯಲ್ಲಿ ಹಾಗೂ ಕರಾರಸಾ ನಿಗಮದ ವೆಬ್ಸೈಟ್ನಲ್ಲಿ ಸಾರ್ವಜನಿಕ ಮಾಹಿತಿಗಾಗಿ ಒದಗಿಸಲಾಗಿದೆ. ಸದರಿ ಹೆಚ್ಚುವರಿ ಸಾರಿಗೆಗಳಲ್ಲಿ ಸಂಚರಿಸುವ ಪ್ರಯಾಣಿಕರು ಕಾಯ್ದಿರಿಸುವ ಮುಂಗಡ ಚೀಟಿಗಳಲ್ಲೂ ಕೂಡ ವಾಹನ ಹೊರಡುವ ಸ್ಥಳದ ವಿವರ ನಮೂದಿಸಲಾಗಿದೆ. ಅಲ್ಲದೇ, ನಿಗಮದ ಕಾರ್ಯಾಚರಣೆ ವ್ಯಾಪ್ತಿಯಲ್ಲಿನ ಎಲ್ಲ ತಾಲೂಕು/ಜಿಲ್ಲಾ ಬಸ್ ನಿಲ್ದಾಣಗಳಿಂದ ಸಂಚಾರ ಒತ್ತಡಕ್ಕನುಗುಣವಾಗಿ ವಿಶೇಷ ಸಾರಿಗೆಗಳ ಕಾರ್ಯಾಚರಣೆ ಮಾಡಲಾಗುವುದು ಎಂದು ತಿಳಿಸಿದೆ.
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ 220 ಬಸ್: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯಾಪ್ತಿಯ ಹುಬ್ಬಳ್ಳಿ, ಧಾರವಾಡ, ಗದಗ, ಬೆಳಗಾವಿ, ಉತ್ತರ ಕನ್ನಡ, ಹಾವೇರಿ, ಚಿಕ್ಕೋಡಿ ಮತ್ತು ಬಾಗಲಕೋಟೆ ವಿಭಾಗಗಳಿಂದ ಸುಮಾರು 220 ಹೆಚ್ಚುವರಿ ವಿಶೇಷ ಬಸ್ ಸಾರಿಗೆಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ.
ಬೆಂಗಳೂರಿನಿಂದ ರಾಜ್ಯ, ಅಂತರ ರಾಜ್ಯದ ವಿವಿಧ ಸ್ಥಳಗಳಿಗೆ ತೆರಳಲು ಸೆಪ್ಟೆಂಬರ್ 5 ರಂದು ಸಂಜೆ ಹಾಗೂ ಸೆ.6 ರಂದು ಹೆಚ್ಚುವರಿ ವಿಶೇಷ ಸಾರಿಗೆ ಸೌಲಭ್ಯವನ್ನು ಕಲ್ಪಿಸಲಾಗಿದೆ. ಹಬ್ಬ ಮುಗಿದ ಮೇಲೆ ಸೆಪ್ಟೆಂಬರ್ 8 ಹಾಗೂ 9 ರಂದು, ನಂತರದ ದಿನಗಳಂದು ಪ್ರಮುಖ ಸ್ಥಳಗಳಿಂದ ಜನದಟ್ಟಣೆಗೆ ಅನುಗುಣವಾಗಿ ಹೆಚ್ಚುವರಿ ಸಾರಿಗೆಗಳನ್ನು ಕಾರ್ಯಾಚರಣೆಗೊಳಿಸಲಾಗುವುದು. ವಿಶೇಷ ಸಾರಿಗೆಗಳ ಸದುಪಯೋಗ ಪಡಿಸಿಕೊಳ್ಳುವುದರೊಂದಿಗೆ, ಸುಖಕರ ಹಾಗೂ ಸುರಕ್ಷಿತ ಪ್ರಯಾಣಕ್ಕಾಗಿ ಸಂಸ್ಥೆಯ ಬಸ್ಗಳಲ್ಲಿ ಪ್ರಯಾಣಿಸುವಂತೆ ಮತ್ತು ವಿಶೇಷ ಹೆಚ್ಚುವರಿ ಸಾರಿಗೆಗಳ ಸದುಪಯೋಗ ಪಡೆದುಕೊಳ್ಳುವಂತೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಪ್ರಕಟಣೆ ತಿಳಿಸಿದೆ.