ಪ್ರಯಾಗ್‌ರಾಜ್: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮುಂದಿನ ವರ್ಷ (2025) ಜನವರಿಯಲ್ಲಿ ನಡೆಯಲಿರುವ ಮಹಾಕುಂಭ ಮೇಳದಲ್ಲಿ ಪಾಲ್ಗೊಳ್ಳುವ ಸಾಧು ಸಂತರು ಆಧಾರ್ ಕಾರ್ಡ್ ಇಲ್ಲವೇ ಮತದಾರರ ಗುರುತಿನ ಚೀಟಿ ತೋರಿಸುವುದು ಕಡ್ಡಾಯವಾಗಲಿದೆ. ಐಡಿ ಗುರುತು ತೋರಿಸುವುದನ್ನು ಕಡ್ಡಾಯಗೊಳಿಸಿ ‘ಅಖಿಲ ಭಾರತೀಯ ಅಖಾಡ ಪರಿಷತ್’ ನಿರ್ಣಯ ಕೈಗೊಂಡಿದೆ. ನಕಲಿ ಹಾಗೂ ಸ್ವಯಂ ಘೋಷಿತ ದೇವ ಮಾನವರ ಪ್ರವೇಶ ನಿರ್ಬಂಧಿಸುವುದು ಇದರ ಹಿಂದಿನ ಉದ್ದೇಶವಾಗಿದೆ. ಅಲ್ಲದೇ ಸಾಧು -ಸಂತರ ವಿವರಗಳನ್ನು ಜಿಲ್ಲಾಡಳಿತಕ್ಕೆ ಸಲ್ಲಿಸುವಂತೆ 13 ಅಖಾಡಗಳಿಗೆ ‘ ಅಖಿಲ ಭಾರತೀಯ ಅಖಾಡ ಪರಿಷತ್ ‘ ಸೂಚನೆ ನೀಡಿದೆ.
ಕುಂಭ ಮೇಳದಲ್ಲಿ ಸನಾತನಿಗಳಲ್ಲದವರಿಗೆ ಆಹಾರ ಮಳಿಗೆಗಳನ್ನು ಹಾಕಲು ಅವಕಾಶ ನೀಡಬಾರದು ಹಾಗೂ ಉರ್ದು ಶಬ್ದಗಳನ್ನು ಬಳಸಬಾರದು ಎಂದೂ ಅಖಾಡ ಪರಿಷತ್ ನಿರ್ಣಯ ಕೈಗೊಂಡಿದೆ.
‘ಶಾಹಿ ಸ್ನಾನ’ ಪದವನ್ನು ‘ ರಾಜ್ಸಿ ಸ್ನಾನ ‘ ಎಂದು ಬದಲಿಸುವುದು ಸೇರಿದಂತೆ ಹಲವು ನಿರ್ಧಾರಗಳನ್ನು ಒಳಗೊಂಡ ಪ್ರಸ್ತಾವವನ್ನು ಅಂತಿಮ ಒಪ್ಪಿಗೆಗಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಕಳುಹಿಸಲಾಗಿದೆ ಎಂಬ ಅಖಾಡ ಪರಿಷತ್ ಅಧ್ಯಕ್ಷ ರವೀಂದ್ರ ಪುರಿ ಹೇಳಿದ್ದಾರೆ.
ಪ್ರಯಾಗ್‌ರಾಜ್‌ನಲ್ಲಿ ಕುಂಭ ಮೇಳವು 2025 ರ ಜನವರಿ 13 ರಂದು ಶುರುವಾಗಿ ಫೆಬ್ರವರಿ 26 ರವರೆಗೆ ನಡೆಯಲಿದೆ. ಒಂದು ತಿಂಗಳಿಗೂ ಹೆಚ್ಚಿನ ಅವಧಿಯಲ್ಲಿ 40 ಕೋಟಿ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ.