ಬೆಂಗಳೂರು : ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಡಾ. ಎಚ್.ಸಿ.ಮಹದೇವಪ್ಪ ಅವರು ಹಿಂದೂ ಧರ್ಮವನ್ನು ತೊರೆಯುವುದಾಗಿ ತಮ್ಮ ಟ್ವಿಟ್ಟರ್ (ಎಕ್ಸ್) ಖಾತೆಯ ಮೂಲಕ ಮಾಹಿತಿ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರಮಾಪ್ತ ಸಚಿವರಲ್ಲಿ ಒಬ್ಬರಾದ ಇವರು ನಾಡಹಬ್ಬ ದಸರಾದ ಉಸ್ತುವಾರಿಯನ್ನು ವಹಿಸಿಕೊಂಡಿದ್ದ ಮಹದೇವಪ್ಪ, ದಸರಾ ಮುಗಿದ ಎರಡು ದಿನಗಳ ನಂತರ ಬೌದ್ದ ಧರ್ಮವನ್ನು ಸ್ವೀಕರಿಸುವುದಾಗಿ ಘೋಷಿಸಿ, ಅಚ್ಚರಿಯುಂಟು ಮಾಡಿದ್ದರು. ಹಿಂದೂ ಧರ್ಮವನ್ನು ತೊರೆಯಲು ಅವರು ಕಾರಣವನ್ನೂ ಸಹ ನೀಡಿದ್ದಾರೆ. ಹಿಂದೂ ಧರ್ಮದಲ್ಲಿನ ಮೇಲುಕೀಳು, ಜಾತೀಯತೆಯ ಬಗ್ಗೆ ಹಿಂದೆಯೂ ಮಹದೇವಪ್ಪ ಹಲವು ಬಾರಿ ಅಸಮಾಧಾನವನ್ನು ವ್ಯಕ್ತ ಪಡಿಸಿದ್ದುಂಟು. ಸೋಮವಾರ (ಅ 14), ಧರ್ಮ ಚಕ್ರ ಪರಿವರ್ತನಾ ದಿನದ ಅಂಗವಾಗಿ ಶುಭಾಶಯವನ್ನು ಕೋರುತ್ತಾ, ಸಾಮಾಜಿಕ ಜಾಲತಾಣದಲ್ಲಿ ಹಿಂದೂ ಧರ್ಮದ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ.
” ನಾನು ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಬೋಧಿಸುವ ಧರ್ಮವನ್ನು ಇಷ್ಟಪಡುತ್ತೇನೆ, ಏಕೆಂದರೆ ವ್ಯಕ್ತಿಯ ಬೆಳವಣಿಗೆಗೆ ಕರುಣೆ, ಸಮಾನತೆ ಮತ್ತು ಸ್ವಾತಂತ್ರ್ಯ ಅತ್ಯಂತ ಮುಖ್ಯ. ಆದರೆ ನನ್ನ ಅನುಭವದಲ್ಲಿ ಜಾತಿ ಶ್ರೇಷ್ಠತೆಯ ರೋಗದಿಂದ ಬಳಲುತ್ತಿರುವ ಹಿಂದೂ ಧರ್ಮವು ಸುಧಾರಣೆ ಆಗುವ ಯಾವ ಲಕ್ಷಣವೂ ನನಗೆ ಕಾಣುತ್ತಿಲ್ಲ”. ಮತ್ತು ಹೀಗಾಗಿ ನಾನು ಸಮಾನತೆ ಮತ್ತು ಶಾಂತಿಯ ರೂಪಕವಾದ ಬೌದ್ಧ ಧರ್ಮವನ್ನು ಸ್ವೀಕರಿಸುತ್ತೇನೆ ಮತ್ತು ಮುಂದೆ ಎಲ್ಲರೂ ಭಾರತದ ಮೂಲ ಧರ್ಮವಾಗಿದ್ದ ಬೌದ್ಧ ಧರ್ಮದ ಪ್ರಚಾರ ಮಾಡಬೇಕೆಂದು ಬಯಸುತ್ತೇನೆ” ಎಂದು ಸಚಿವ ಮಹದೇವಪ್ಪ ಅವರು ಈ ರೀತಿಯಾಗಿ ಟ್ವೀಟ್ ಮಾಡಿದ್ದಾರೆ.
ತನ್ನ 3.5 ಲಕ್ಷ ಅನುಯಾಯಿಗಳೊಂದಿಗೆ ಬೌದ್ಧ ಧರ್ಮ ಸ್ವೀಕರಿಸಿದ ಬಾಬಾ ಸಾಹೇಬರ ಧಮ್ಮ ಚಕ್ರ ಪರಿವರ್ತನಾ ದಿನದಂದು ಎಲ್ಲರಿಗೂ ನನ್ನ ಆತ್ಮೀಯ ಶುಭಾಶಯಗಳು” ಎಂದು ಡಾ.ಮಹದೇವಪ್ಪ ಎಕ್ಸ್ ತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಬುದ್ಧಂಶರಣಂಗಚ್ಛಾಮಿ ಎಂದು ಹ್ಯಾಷ್ ಟ್ಯಾಗ್ ಅನ್ನು ಹಾಕಿದ್ದಾರೆ.
ಕಾಂಗ್ರೆಸ್ ಅಸ್ಪ್ರಶ್ಯತೆಯನ್ನು ನಿವಾರಿಸದಿದ್ದರೆ ತಾನು ಬೌದ್ಧಧರ್ಮ ಸ್ವೀಕರಿಸುತ್ತೇನೆಂದು ಮೊದಲೇ ಅಂಬೇಡ್ಕರ್ ಆಗ್ರಹಿಸಿದ್ದರು. ಕಾಂಗ್ರೆಸ್ ಈಗಿನಂತೆ ಆಗಲೂ ಅದನ್ನು ನಿರ್ಲಕ್ಷಿಸಿತ್ತು. ಅದಕ್ಕೆ ಬೌದ್ಧಮತ ಸ್ವೀಕರಿಸಿದ್ದರು. ಪರಕೀಯ ಧರ್ಮಗಳು ಎಲ್ಲಾ ಕಡೆ ಭ್ರಾತೃತ್ವಕ್ಕಿಂತ ತಮ್ಮ ಧರ್ಮವೇ ಮುಖ್ಯವೆಂಬ ಸಿದ್ಧಾಂತದಲ್ಲಿದೆ ಎಂದಿದ್ದರು” ಎನ್ನುವ ರಿಪ್ಲೈ ಕೂಡಾ ಬಂದಿದೆ.
ಹಿಂದೂ ಧರ್ಮದಲ್ಲಿ ಹುಟ್ಟಿದ್ದರಿಂದಲೇ ನಿಮ್ಮಂತಹ ಜನರಿಗೆ ಮೀಸಲಾತಿ ಫಲ ಸಿಕ್ಕಿದ್ದು ಮತ್ತು ಅದರಿಂದಲೇ ಇವತ್ತು ಮಂತ್ರಿಗಿರಿಯ ಸುಖವನ್ನು ಅನುಭವಿಸುತ್ತಿರುವುದು. ಈಗ ನಿಮ್ಮ ಮಗ ಸಹ ಅದೇ ಕೋಟಾದಲ್ಲಿ ಸಂಸದನಾಗಿದ್ದಾರೆ. ಓಟ್ ಬ್ಯಾಂಕಿಗಾಗಿ ಹಿಂದೂ ಧರ್ಮವನ್ನು ತೆಗಳಬೇಡಿ. ಒಂದಾಗಿ ಬಾಳೋಣ. ಜೈಭೀಮ್” ಎನ್ನುವ ಸಲಹೆ ಕೂಡಾ ಬಂದಿದೆ.