ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (ಎಫ್‌ಎಒ) ಜಾಗತಿಕ ಆಹಾರ ಬೆಲೆ ಸೂಚ್ಯಂಕವನ್ನು ಪ್ರಕಟಿಸಲಾಗಿದೆ .
ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (ಎಫ್‌ಎಒ) ಬಿಡುಗಡೆ ಮಾಡಿರುವ ಜಾಗತಿಕ ಆಹಾರ ಬೆಲೆ ಸೂಚ್ಯಂಕವು ಆತಂಕಕಾರಿ ಅಂಶವನ್ನು ಬಹಿರಂಗಪಡಿಸಿದೆ. ಕಳೆದ 18 ತಿಂಗಳಿನಲ್ಲಿಯೇ ಆಹಾರ ಬೆಲೆಯು ಅಕ್ಟೋಬರ್‌ನಲ್ಲಿ ಗರಿಷ್ಠ ಮಟ್ಟಕ್ಕೆ ತಲುಪಿದೆ.
45 ದೇಶಗಳಿಗೆ ಹಸಿವು ನೀಗಿಸಲು ಬಾಹ್ಯ ನೆರವು ಅಗತ್ಯವಾಗಿದೆ. ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಅಡುಗೆ ಎಣ್ಣೆ ಬೆಲೆಯಲ್ಲಿ ಭಾರಿ ಏರಿಕೆ ಉಂಟಾಗಿರುವುದರಿಂದ ಆಹಾರ ಬೆಲೆಯೂ ಗಣನೀಯವಾಗಿ ಏರಿಕೆ ಕಂಡಿದೆ ಎಂದು ಎಫ್‌ಎಒ ತಿಳಿಸಿದೆ.
ಸೆಪ್ಟೆಂಬರ್‌ನಲ್ಲಿ ಈ ಸೂಚ್ಯಂಕವು 124.9 ಅಂಶಗಳಿತ್ತು. ಅದು ಅಕ್ಟೋಬರ್‌ನಲ್ಲಿ 127.4 ಅಂಶಕ್ಕೆ ಏರಿಕೆಯಾಗಿದೆ. ಸೂಚ್ಯಂಕವು 2023ರ ಏಪ್ರಿಲ್‌ನಲ್ಲಿ ಒಮ್ಮೆ ಆಹಾರ ಬೆಲೆ ಗರಿಷ್ಠ ಮಟ್ಟ ತಲುಪಿತ್ತು. ಆ ಬಳಿಕ ಅಂದರೆ 18 ತಿಂಗಳ ಸೂಚ್ಯಂಕ ಗರಿಷ್ಠ ಮಟ್ಟ ತಲುಪಿದೆ ಎಂದು ತಿಳಿಸಿದೆ.
ಅಡುಗೆ ಎಣ್ಣೆ ಬೆಲೆ ಶೇ. 7ರಷ್ಟು ಏರಿಕೆಯಾಗಿದೆ. ತಾಳೆ ಉತ್ಪಾದನೆಯಲ್ಲಿನ ಕುಸಿತ ಈ ಬೆಲೆ ಏರಿಕೆಗೆ ಕಾರಣ ಎಂದು ಅಂದಾಜಿಸಲಾಗಿದೆ. ಮಾಂಸದ ಬೆಲೆಯೂ ಗಣನೀಯವಾಗಿ ಏರಿಕೆಯಾಗಿದೆ.
ಅಕ್ಟೋಬರ್ ತಿಂಗಳಿನಲ್ಲಿ ಧಾನ್ಯಗಳು, ಸಕ್ಕರೆ, ಮಾಂಸ, ಡೈರಿ ಮತ್ತು ತೈಲಗಳ ಬೆಲೆ ಶೇ. 2ರಷ್ಟು ಏರಿಕೆಯಾಗಿದೆ ಎಂದು ವರದಿ ನೀಡಿದೆ.
ಆಫ್ರಿಕಾದ 33 ದೇಶಗಳು, ಏಷ್ಯಾದ ಒಂಬತ್ತು, ಲ್ಯಾಟಿನ್ ಅಮೆರಿಕ ಮತ್ತು ಕೆರಿಬಿಯನ್‌ನ ಎರಡು ಮತ್ತು ಯುರೋಪ್‌ನ ಒಂದು ದೇಶದಲ್ಲಿನ ಪರಿಸ್ಥಿತಿಯನ್ನು ಸಮಗ್ರವಾಗಿ ವಿವರಿಸಲಾಗಿದೆ. ಸಂಘರ್ಷ, ಅಭದ್ರತೆಯು ಆಹಾರ ಸುರಕ್ಷತೆಗೆ ಕಂಟಕವಾಗಿದೆ.
ಗಾಜಾ ಪಟ್ಟಿ, ಹೈಟಿ, ಮಾಲಿ, ಮತ್ತು ಸೂಡಾನ್‌ಗಳಲ್ಲಿ ಆಹಾರದ ಅಭಾವ ತೀವ್ರವಾಗಿದೆ. ಕಡಿಮೆ ಆದಾಯ ಹಾಗೂ ಆಹಾರದ ಕೊರತೆ ಇರುವ 44 ದೇಶಗಳಲ್ಲಿ ಏಕದಳ ಧಾನ್ಯಗಳ ಪ್ರಮಾಣ ಕಳೆದ ಐದು ವರ್ಷಗಳ ಸರಾಸರಿ ಪ್ರಮಾಣಕ್ಕಿಂತಲೂ ಹೆಚ್ಚಿದೆ ಎಂದು ಅಂದಾಜು ಮಾಡಲಾಗಿದೆ.
ಆಫ್ರಿಕಾದ ಕೆಲ ಭಾಗಗಳಲ್ಲಿ ಕಡಿಮೆ ಇಳುವರಿ ಇದೆ. ಕೆಲವೆಡೆ ಹೆಚ್ಚಿದೆ. ಹೀಗಾಗಿ ಆಮದು ಪ್ರಮಾಣದಲ್ಲಿ ಶೇ. 8ರಷ್ಟು ಏರುವ ನಿರೀಕ್ಷೆ ಇದೆ. ಪೂರ್ವ ಮತ್ತು ದಕ್ಷಿಣ ಆಫ್ರಿಕಾ ವಲಯದಲ್ಲಿನ ಆಹಾರದ ಬೇಡಿಕೆಯನ್ನು ಆಮದಿನಿಂದ ತುಂಬಿಕೊಳ್ಳಬೇಕಾಗಿದೆ ಎಂದು ವರದಿ ಹೇಳಿದೆ.