ಅಯೋಧ್ಯೆ, ಉತ್ತರಪ್ರದೇಶ: ಸಿಖ್ ಫಾರ್ ಜಸ್ಟೀಸ್ (ಎಸ್ಎಫ್ಜೆ) ಮತ್ತು ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನು ದಾಳಿ ಮಾಡುವ ಬೆದರಿಕೆ ಒಡ್ಡಿದ ಬೆನ್ನಲ್ಲೇ ಅಯೋಧ್ಯೆಯ ರಾಮ ಮಂದಿರ ಆವರಣದಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ.
ನಿಷೇಧಿತ ಸಂಘಟನೆ ಎಸ್ಎಫ್ಜೆ ಇತ್ತೀಚಿಗೆ ಬಿಡುಗಡೆ ಮಾಡಿದ ವಿಡಿಯೋದಲ್ಲಿ ನವೆಂಬರ್ 16 ಮತ್ತು 17ರಂದು ಅಯೋಧ್ಯೆ ರಾಮ ಮಂದಿರದ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಹಾಕಿರುವ ವಿಡಿಯೋವನ್ನು ಹಂಚಿಕೊಂಡಿತು.
ಈ ಬೆನ್ನಲ್ಲೇ ದೇಗುಲದ ಆವರಣ ಸೇರಿದಂತೆ ನಗರದ ಎಲ್ಲೆಡೆ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು, ದೇಗುಲದ ಬಳಿ ಹೆಚ್ಚಿನ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಈ ಕುರಿತು ಮಾತನಾಡಿರುವ ಎಸ್ಪಿ ಬಲರಾಮಚಾರಿ ದುಬೆ, ಎಟಿಎಸ್ ಸಿಬ್ಬಂದಿ ಮತ್ತು ಪೊಲೀಸ್ ಸಿಬ್ಬಂದಿ ಭದ್ರತಾ ಮೇಲ್ವಿಚಾರಣೆ ಪರೀಕ್ಷೆ ನಡೆಸಿದೆ. ಯಾತ್ರಾರ್ಥಿಗಳ ದರ್ಶನ ಮಾರ್ಗದ ಮೇಲೂ ನಿಗಾ ಹೆಚ್ಚಿಸಲಾಗಿದೆ. 24 ಗಂಟೆಗಳೂ ದೇಗುಲದ ಮೇಲ್ವಿಚಾರಣೆ ನಡೆಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಅಯೋಧ್ಯೆ ಸರ್ಕಲ್ ಅಧಿಕಾರಿ ಅಶುತೋಷ್ ತಿವಾರಿ ಮಾತನಾಡಿ, ಬಿಡುಗಡೆಯಾದ ಬೆದರಿಕೆ ದಾಳಿ ವಿಡಿಯೋದ ಸತ್ಯಾಸತ್ಯತೆ ಪರಿಶೀಲಿಸಲಾಗುತ್ತಿದ್ದು, ಎಲ್ಲ ಅಗತ್ಯ ಮುನ್ನೆಚ್ಚರಿಕೆ ನಡೆಸಲಾಗಿದೆ ಎಂದರು.
ಐಜಿ ಪ್ರವೀಣ್ ಕುಮಾರ್ ಮಾತನಾಡಿ, ಇದೀಗ ಪನ್ನುನಿಂದ ವಿಡಿಯೋ ಬೆದರಿಕೆ ಸಂದೇಶ ಬಂದಿದೆ. ಈ ಹಿಂದೆ ಕೂಡ ಇದೇ ರೀತಿಯ ಬೆದರಿಕೆ ಕರೆಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ನಾವು ಭದ್ರತಾ ವ್ಯವಸ್ಥೆಯನ್ನು ಮತ್ತೊಮ್ಮೆ ಪುನರ್ ಪರಿಶೀಲಿಸುತ್ತಿದ್ದೇವೆ ಎಂದರು.
ಆಗಸ್ಟ್ 22ರಂದು ಕೂಡ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಮೊಬೈಲ್ ನಂಬರ್ ಸಹಾಯವಾಣಿಗೆ ವಾಟ್ಸ್ಆ್ಯಪ್ ಮೂಲಕ ಇದೇ ರೀತಿ ಬೆದರಿಕೆ ಸಂದೇಶ ಬಂದಿತ್ತು. ಅದರಲ್ಲಿ ಕೂಡ ಶೀಘ್ರದಲ್ಲೇ ದೇಗುಲವನ್ನು ನಾಶ ಮಾಡಿ, ಮಸೀದಿ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಲಾಗಿತ್ತು. ಈ ಸಂಬಂಧ ಸೆಪ್ಟೆಂಬರ್ 14ರಂದು ಉತ್ತರ ಪ್ರದೇಶ ಎಟಿಎಸ್ ಮೊಹಮ್ಮದ್ ಮಕ್ವಸೂದ್ ಎಂಬ ವ್ಯಕ್ತಿಯನ್ನು ಬಿಹಾರದ ಬಾಗ್ಲಪುರ್ನಲ್ಲಿ ಬಂಧಿಸಿದ್ದರು.
ಇದಕ್ಕೆ ಮುನ್ನ ಮೇ 28ರಂದು ಕೂಡ ಇನ್ಸ್ಟಾಗ್ರಾಂನಲ್ಲಿ ದೇಗುಲಕ್ಕೆ ಬೆದರಿಕೆ ಸಂದೇಶ ಹರಿದಾಡಿದ್ದವು. ಈ ಪ್ರಕರಣ ಸಂಬಂಧ ಕುಶಿನಗರದಲ್ಲಿನ ಬಲೌ ತಕಿಯಾದ 16 ವರ್ಷದ ಬಾಲಕನನ್ನು ಬಂಧಿಸಲಾಗಿತ್ತು. ಈತ ಮಾನಸಿಕ ಸ್ಥಿರತೆ ಹೊಂದಿರಲಿಲ್ಲ ಎಂಬುದು ತನಿಖೆಯಲ್ಲಿ ತಿಳಿದು ಬಂದಿತು.
WhatsApp Group
Join Now
Telegram Group
Join Now
Instagram Account
Follow Now
Facebook Page
Follow Now