ನವದೆಹಲಿ: ಕಾರ್ಪೊರೇಟ್ ತೆರಿಗೆ ಮತ್ತು ವೈಯಕ್ತಿಕ ಆದಾಯ ತೆರಿಗೆ ಒಳಗೊಂಡ ಭಾರತದ ನಿವ್ವಳ ನೇರ ತೆರಿಗೆ ಆದಾಯ ಸಂಗ್ರಹವು ಪ್ರಸಕ್ತ ಹಣಕಾಸು ವರ್ಷದಲ್ಲಿ ಏಪ್ರಿಲ್ 1 ರಿಂದ ನವೆಂಬರ್ 10 ರವರೆಗೆ ಶೇಕಡಾ 15.4 ರಷ್ಟು ಏರಿಕೆಯಾಗಿ 12.1 ಲಕ್ಷ ಕೋಟಿ ರೂ.ಗೆ ತಲುಪಿದೆ ಎಂದು ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಬಿಡುಗಡೆ ಮಾಡಿದ ಇತ್ತೀಚಿನ ಅಂಕಿ – ಅಂಶಗಳು ತಿಳಿಸಿವೆ.
ಒಟ್ಟಾರೆಯಾಗಿ, ನೇರ ತೆರಿಗೆಗಳು ಈ ಅವಧಿಯಲ್ಲಿ ಒಟ್ಟು ಆಧಾರದ ಮೇಲೆ ಶೇಕಡಾ 21 ಕ್ಕಿಂತ ಹೆಚ್ಚು ಏರಿಕೆಯಾಗಿ 15 ಲಕ್ಷ ಕೋಟಿ ರೂ.ಗೆ ತಲುಪಿದೆ. ಸರ್ಕಾರವು 2.9 ಲಕ್ಷ ಕೋಟಿ ರೂ.ಗಳ ತೆರಿಗೆ ಮರುಪಾವತಿಯನ್ನು (ಟ್ಯಾಕ್ಸ್ ರಿಫಂಡ್) ನೀಡಿದೆ. ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇಕಡಾ 53 ರಷ್ಟು ಹೆಚ್ಚಾಗಿದೆ.
ನಿವ್ವಳ ಕಾರ್ಪೊರೇಟ್ ತೆರಿಗೆ ಸಂಗ್ರಹವು 5.10 ಲಕ್ಷ ಕೋಟಿ ರೂ.ಗಳಾಗಿದ್ದು, 6.62 ಲಕ್ಷ ಕೋಟಿ ರೂ.ಗಳಷ್ಟು ಕಾರ್ಪೊರೇಟ್ ಅಲ್ಲದ ವ್ಯಕ್ತಿಗಳು, ಎಚ್ ಯುಎಫ್ ಗಳು ಮತ್ತು ಸಂಸ್ಥೆಗಳು ಪಾವತಿಸಿದ ತೆರಿಗೆ ಸಂಗ್ರಹವಾಗಿದೆ.
ಇಕ್ವಲೈಸೇಶನ್ ಲೆವಿ ಮತ್ತು ಉಡುಗೊರೆ ತೆರಿಗೆ ಸೇರಿದಂತೆ ಇತರ ತೆರಿಗೆಗಳಿಂದ ಒಟ್ಟು 35,923 ಕೋಟಿ ರೂ.ಗಳನ್ನು ಸಂಗ್ರಹಿಸಲಾಗಿದೆ. 2024-25ರಲ್ಲಿ ನೇರ ತೆರಿಗೆಗಳಿಂದ 22.12 ಲಕ್ಷ ಕೋಟಿ ರೂ.ಗಳನ್ನು ಸಂಗ್ರಹಿಸುವ ಗುರಿಯನ್ನು ಸರ್ಕಾರ ನಿಗದಿಪಡಿಸಿದೆ. ಇದು ಹಿಂದಿನ ಹಣಕಾಸು ವರ್ಷದ ಇದೇ ಅಂಕಿ ಅಂಶಕ್ಕಿಂತ ಶೇಕಡಾ 13 ರಷ್ಟು ಹೆಚ್ಚಳವಾಗಿದೆ.
ತೆರಿಗೆ ಸಂಗ್ರಹದಲ್ಲಿ ಎರಡಂಕಿ ಏರಿಕೆಯು ದೃಢವಾದ ಆರ್ಥಿಕ ಬೆಳವಣಿಗೆಯಿಂದ ಪ್ರೇರಿತವಾದ ದೇಶದ ಬಲವಾದ ಹಣಕಾಸಿನ ಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. 2023-24ರಲ್ಲಿ ನಿವ್ವಳ ನೇರ ತೆರಿಗೆ ಸಂಗ್ರಹವು ಕೇಂದ್ರ ಬಜೆಟ್ ಅಂದಾಜುಗಳನ್ನು 1.35 ಲಕ್ಷ ಕೋಟಿ ರೂ. ಅಥವಾ ಶೇಕಡಾ 7.4 ರಷ್ಟು ಮೀರಿದೆ.
2023-24ರ ಕೇಂದ್ರ ಬಜೆಟ್ ನಲ್ಲಿ ನೇರ ತೆರಿಗೆ ಸಂಗ್ರಹದ ಗುರಿಯನ್ನು 18.23 ಲಕ್ಷ ಕೋಟಿ ರೂ.ಗೆ ನಿಗದಿಪಡಿಸಲಾಗಿತ್ತು ಮತ್ತು ನಂತರ ಪರಿಷ್ಕೃತ ಅಂದಾಜುಗಳಲ್ಲಿ (ಆರ್ ಇ) ಇದನ್ನು 19.45 ಲಕ್ಷ ಕೋಟಿ ರೂ.ಗೆ ಹೆಚ್ಚಿಸಲಾಯಿತು. ತಾತ್ಕಾಲಿಕ ನೇರ ತೆರಿಗೆ ಸಂಗ್ರಹ (ಮರುಪಾವತಿಯ ನಿವ್ವಳ)ವು ಬಿಇ ಗಿಂತ ಶೇಕಡಾ 7.40 ರಷ್ಟು ಮತ್ತು ಆರ್ಇ ಗಿಂತ ಶೇಕಡಾ 0.67 ರಷ್ಟು ಹೆಚ್ಚಾಗಿದೆ ಎಂದು ಸಿಬಿಡಿಟಿ ತಿಳಿಸಿದೆ. ತೆರಿಗೆ ಸಂಗ್ರಹದಲ್ಲಿನ ಹೆಚ್ಚಳವು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ಮತ್ತು ಬಡವರ ಕಲ್ಯಾಣ ಯೋಜನೆಗಳನ್ನು ಜಾರಿ ಮಾಡಲು, ದೊಡ್ಡ ಮೂಲಸೌಕರ್ಯ ಯೋಜನೆಗಳಲ್ಲಿ ಹೂಡಿಕೆ ಮಾಡಲು ಸರ್ಕಾರದ ಬೊಕ್ಕಸಕ್ಕೆ ಅಗತ್ಯ ಹಣಕಾಸು ಒದಗಿಸುತ್ತದೆ.