ಹೊಸದಿಲ್ಲಿ: ಓಲಾ ಎಲೆಕ್ಟ್ರಿಕ್ ತನಿಖೆ ನಡೆಸುವಂತೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರವು ಆದೇಶಿಸಿದೆ ಎಂದು ಉನ್ನತ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
ಸಿಸಿಪಿಎ ಈ ಬಗ್ಗೆ ತನಿಖೆ ನಡೆಸುವಂತೆ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್)ನ ಮಹಾನಿರ್ದೇಶಕರಿಗೆ ಸೂಚಿಸಿದೆ. ನವೆಂಬರ್ 6 ರಂದು ಈ ಕುರಿತು ಆದೇಶ ಹೊರಡಿಸಲಾಗಿದ್ದು, 15 ದಿನಗಳಲ್ಲಿ ತನಿಖಾ ವರದಿಯನ್ನು ಸಲ್ಲಿಸುವಂತೆ ತಿಳಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಓಲಾ ಎಲೆಕ್ಟ್ರಿಕ್ ವಾಹನಗಳ ದುರವಸ್ಥೆ ಕುರಿತು ರಾಷ್ಟ್ರೀಯ ಗ್ರಾಹಕ ಸಹಾಯವಾಣಿಯಲ್ಲಿ ಕಳೆದ ವರ್ಷ ಸೆಪ್ಟೆಂಬರ್ನಿಂದ ಈ ವರ್ಷ ಆಗಸ್ಟ್ ತನಕ 10,644 ದೂರುಗಳು ದಾಖಲಾಗಿದ್ದವು. ಇದಾದ ಬೆನ್ನಲ್ಲೇ ಈ ತನಿಖೆಗೆ ಆದೇಶ ನೀಡಲಾಗಿದೆ.
ರಾಷ್ಟ್ರೀಯ ಗ್ರಾಹಕ ಸಹಾಯವಾ ಕಾಲ್ ಏಜೆಂಟ್ಗಳು 287 ಗ್ರಾಹಕರಿಗೆ ಕರೆ ಮಾಡಿದ್ದರು. ಇದರಲ್ಲಿ 130 ಗ್ರಾಹಕರೊಡನೆ ಸಂಪರ್ಕ ಸಾಧ್ಯವಾಗಿತ್ತು. ಇದರಲ್ಲಿ 103 ಗ್ರಾಹಕರು ಅಂದರೆ ಶೇ. 79.2ರಷ್ಟು ಜನ ಕಂಪನಿಯ ಪ್ರತಿಕ್ರಿಯೆ ಬಗ್ಗೆ ಅತೃಪ್ತಿ ವ್ಯಕ್ತಡಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ‘ಲೈವ್ ಮಿಂಟ್’ ವರದಿ ಮಾಡಿದೆ.
ಓಲಾ ಎಲೆಕ್ಟ್ರಿಕ್ ಷೇರುಗಳು ಗುರುವಾರವೂ ಇಳಿಕೆ ಕಂಡಿದ್ದು 0.83 ರೂ. ಅಥವಾ ಶೇ. 1.17ರಷ್ಟು ಕುಸಿತ ಕಂಡು 70.12 ರೂ. ತಲುಪಿವೆ. ಒಂದು ಹಂತದಲ್ಲಿ 157.40 ರೂ. ತಲುಪಿದ್ದ ಷೇರು ಇದೀಗ ಸತತ ಇಳಿಕೆ ಕಾಣುತ್ತಲೇ ಇದೆ.
ದೂರುಗಳನ್ನು ಪರಿಹರಿಸಿದ ನಂತರವೂ ಸಮಸ್ಯೆಗಳು ಮುಂದುವರಿದಿವೆ ಎಂದು ಅನೇಕ ಗ್ರಾಹಕರು ದೂರಿದ್ದಾರೆ. ಕೆಲವು ಪ್ರಕರಣಗಳಲ್ಲಂತೂ ಸಮಸ್ಯೆ ತೃಪ್ತಿಕರವಾಗಿ ಪರಿಹಾರವಾಗದೇ ಇದ್ದರೂ ದೂರನ್ನು ಕೊನೆಗೊಳಿಸಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.
ಇದು ಓಲಾದ ಪ್ರತಿಕ್ರಿಯೆಯ ಬಗೆಗಿನ ಮಾದರಿ ಪರೀಕ್ಷೆ ಅಷ್ಟೆ. ಒಂದೊಮ್ಮೆ ಓಲಾ ಹೇಳಿದಂತೆ ಶೇ. 99ರಷ್ಟು ಗ್ರಾಹಕರು ತೃಪ್ತರಾಗಿದ್ದರೆ, ಅದು ಪರಿಶೀಲನೆ ವೇಳೆಯೂ ಕಾಣಿಸಿಕೊಳ್ಳಬೇಕಿತ್ತು.
ಗ್ರಾಹಕರು ಸಂತೃಪ್ತರಾಗಿದ್ದಾರೆ ಎಂದು ಓಲಾ ಉತ್ತರ ನೀಡಿತ್ತು. ಆದರೆ ಶೇ. 79ಕ್ಕಿಂತಲೂ ಹೆಚ್ಚು ಗ್ರಾಹಕರು ಕಂಪನಿಯ ಪ್ರತಿಕ್ರಿಯೆ ಕುರಿತು ಕಿಡಿಕಾರಿದ್ದರು.