ಬೆಂಗಳೂರು : ಉಪಚುನಾವಣೆಯ ಬಹಿರಂಗ ಪ್ರಚಾರ ಮುಗಿದ ಬೆನ್ನಲ್ಲೇ, ನೇರವಾಗಿ ಅದೂ ಸಾರ್ವಜನಿಕ ಕಾರ್ಯಕ್ರಮದಲ್ಲಿ ಬಿಜೆಪಿಯು, ಸರ್ಕಾರವನ್ನು ಪತನಗೊಳಿಸಲು ಪ್ರಯತ್ನಿಸುತ್ತಿದೆ. ನಮ್ಮ 50 ಶಾಸಕರಿಗೆ ತಲಾ 50 ಕೋಟಿ ರೂಪಾಯಿಯ ಆಮಿಷವನ್ನು ಒಡ್ಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ, ಬಿಜೆಪಿ ಟ್ವೀಟ್ ಮಾಡಿ, ಮುಖ್ಯಮಂತ್ರಿಗಳ ಕಾಲೆಳೆದಿದೆ.
ಉಪಚುನಾವಣೆಯ ಬಹಿರಂಗ ಪ್ರಚಾರ ಮುಗಿದ ಬೆನ್ನಲ್ಲೇ, ಖುದ್ದು ಮುಖ್ಯಮಂತ್ರಿಗಳೇ ಗಂಭೀರ ಆರೋಪವನ್ನು ಮಾಡಿದ್ದರು. ಸರ್ಕಾರ ಪತನಗೊಳಿಸಲು ಬಿಜೆಪಿಯು, 50 ಕಾಂಗ್ರೆಸ್ ಶಾಸಕರಿಗೆ ತಲಾ 50 ಕೋಟಿಯ ಆಮಿಷವನ್ನು ನೀಡಿದೆ ಎಂದು ಹೇಳಿದ್ದರು.
ಉಪ ಚುನಾವಣೆಯ ಪ್ರಚಾರದ ವೇಳೆ ಈ ಬಗ್ಗೆ ಏನೂ ಚಕಾರವೆತ್ತದ ಕಾಂಗ್ರೆಸ್, ಬಹಿರಂಗ ಪ್ರಚಾರ ಮುಗಿದ ಬೆನ್ನಲ್ಲೇ ಈ ವಿಚಾರವನ್ನು ಕೈಗೆತ್ತಿಕೊಂಡಿತ್ತು. ಈ ಬಗ್ಗೆ, ಸಿದ್ದರಾಮಯ್ಯನವರ ಹೇಳಿಕೆಗೆ ಡಿಸಿಎಂ ಡಿ.ಕೆ.ಶಿವಕುಮಾರ್, ಸಂತೋಷ್ ಲಾಡ್, ಡಾ.ಪರಮೇಶ್ವರ್ ಆದಿಯಾಗಿ ಹೆಚ್ಚಿನ ಸಚಿವರು ತಲೆದೂಗಿದ್ದರು.
ಬಿಜೆಪಿ ಕೂಡಾ ಈ ವಿಚಾರದ ನಿಜಾಂಶವನ್ನು ಬಯಲುಗೊಳಿಸುವಂತೆ ಮುಖ್ಯಮಂತ್ರಿಗಳಿಗೆ ಸವಾಲು ಹಾಕಿತ್ತು.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯವರೂ, ಮುಖ್ಯಮಂತ್ರಿಗಳ ಹೇಳಿಕೆ ಹಾಸ್ಯಾಸ್ಪದ ಎಂದು ಲೇವಡಿ ಮಾಡಿದ್ದರು.
ಕಾಂಗ್ರೆಸ್ ನಾಯಕರಿಂದ ಹೆಚ್ಚಿನ ಪ್ರತಿಕ್ರಿಯೆ ಇದಾದ ನಂತರ ಬರದ ಹಿನ್ನಲೆಯಲ್ಲಿ, ಬಿಜೆಪಿ ಸಾಲುಸಾಲು ಟ್ವೀಟ್ ಮಾಡಿ, ಸ್ಪಷ್ಟನೆಯನ್ನು ಕೇಳುತ್ತಿದೆ. ಇನ್ನೊಂದು ಕಡೆ, ಕಾಂಗ್ರೆಸ್ ನಾಯಕರನ್ನು ಲೇವಡಿ ಮಾಡುವ ಪೋಸ್ಟ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿದೆ.
ನಿಮ್ಮ ಅವಾಸ್ತವಿಕ ಗ್ಯಾರಂಟಿಗಳು ಮಹಾದೇಪ್ಪರಿಗೂ ತಲುಪುತ್ತಿಲ್ಲ, ಕಾಕಾ ಪಾಟೀಲರಿಗೂ ತಲುಪುತ್ತಿಲ್ಲ. ಅಷ್ಟಕ್ಕೂ ನಿಮ್ಮ ಅವಾಸ್ತವಿಕ ಗ್ಯಾರಂಟಿಗಳ ಅಪ್ರಬುದ್ಧ ಅನುಷ್ಟಾನಕ್ಕೆ ಹಣವನ್ನು ಜನಸಾಮಾನ್ಯರ ತೆರಿಗೆಯಿಂದ ಭರಿಸುತ್ತಿದ್ದಿರೆ ಹೊರತು ಕ್ವೀನ್ಸ್ ರಸ್ತೆಯ ಕೆಪಿಸಿಸಿ ಭವನದ ಇಡುಗಂಟಿನಿಂದಲ್ಲ ಎಂದು ಬಿಜೆಪಿ ಟ್ವೀಟ್ (ಎಕ್ಸ್) ಮಾಡಿದೆ.
ಇನ್ನೊಂದು ಟ್ವೀಟ್ ಅನ್ನು ಮಾಡಿ, ಅದರಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಎಂ.ಬಿ.ಪಾಟೀಲ್ ಮತ್ತು ಸತೀಶ್ ಜಾರಕಿಹೊಳಿ ಅವರ ಫೋಟೋಗಳನ್ನು ಹಾಕಿ, ಎಲ್ಲರ ಫೋಟೋದ ಮೇಲೆ, ನನ್ನನ್ನು ಸಿಎಂ ಆಗಿ ಮುಂದುವರಿಸಿ ಅನ್ನೋ ಶಾಸಕರಿಗೆ 50 ಕೋಟಿ ಎಂದು ಸಿದ್ದರಾಮಯ್ಯ ಹೇಳುವ ರೀತಿಯಲ್ಲಿ ಪೋಸ್ಟ್ ಮಾಡಲಾಗಿದೆ.
“ಕಾಂಗ್ರೆಸ್ ಸರಕಾರ ಪ್ರತಿಯೊಂದಕ್ಕೂ ಎಸ್‌ಐಟಿ ರಚನೆ ಮಾಡಿ ತನಿಖೆ ಮಾಡಿಸುತ್ತಿದ್ದಾರೆ. ಶಾಸಕರ ಖರೀದಿ ವಿಷಯಕ್ಕೂ ಒಂದು ಎಸ್ ಐಟಿ ರಚನೆ ಮಾಡಲಿ. ಸಿಎಂ ಹೇಳಿಕೆ ಹಾಸ್ಯಾಸ್ಪದವಾಗಿದೆ. 50 ಶಾಸಕರಿಗೆ ತಲಾ ₹50 ಕೋಟಿ ಎಂದು ಅಷ್ಟು ನಿಖರವಾಗಿ ಹೇಳುತ್ತಿದ್ದಾರೆ. ಹಾಗಿದ್ದರೆ ಸಿಎಂ ಬಳಿ ಎಲ್ಲಾ ಮಾಹಿತಿ ಇದೆ ಎಂದಾಯಿತು” ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದ್ದರು.
ಒಬ್ಬರಿಗೆ 50 ಕೋಟಿ ಎಂದರೆ 50 ಜನರಿಗೆ 2,500 ಕೋಟಿ ರೂಪಾಯಿ ಆಯಿತು. ಇದು, ಹಣದ ವ್ಯವಹಾರದ ಬಗ್ಗೆ ಮುಖ್ಯಮಂತ್ರಿಗಳು ಆಪಾದನೆಯನ್ನು ಮಾಡಿದ್ದಾರೆ. ಹಾಗಾಗಿ, ಇದು ತನಿಖೆಯಾಗಲೇ ಬೇಕು, ಸರ್ಕಾರ ಈ ವಿಚಾರಕ್ಕೆ ಸಂಬಂಧಿಸಿದಂತೆ, ಇಡಿಗೆ ಮಾಹಿತಿಯನ್ನು ನೀಡಲಿ ಎಂದು ಬಿಜೆಪಿ ನಾಯಕರು, ಸವಾಲು ಎಸೆದಿದ್ದರು.