ಬೆಂಗಳೂರು: ಬೇಡಿಕೆ ಹಿನ್ನೆಲೆ ತಿರುವನಂತಪುರ – ಮಂಗಳೂರು – ತಿರುವನಂತಪುರ ಮಾರ್ಗದಲ್ಲಿ 20 ಬೋಗಿಯ ವಂದೇ ಭಾರತ್ ರೈಲು ಓಡಿಸಲು ನಿರ್ಧರಿಸಲಾಗಿದೆ.
ಮಂಗಳೂರು-ತಿರುವನಂತಪುರ ವಂದೇ ಭಾರತ್ ರೈಲು ಸದಾ ತುಂಬಿದ್ದು, ಹೊಸ ರೈಲಿನಲ್ಲಿ ಹೆಚ್ಚಿನ ಸ್ಥಳಾವಕಾಶ ಇದೆ.
1200 ಕ್ಕೂ ಹೆಚ್ಚು ಸೀಟ್‌ಗಳಿವೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಯಾಣಿಕರ ಬೇಡಿಕೆ ಹಿನ್ನೆಲೆ ಎಂಟು ಬೋಗಿಗಳಿರುವ ವಂದೇ ಭಾರತ್ ರೈಲಿನ ಬದಲಿಗೆ 20 ಬೋಗಿಗಳಿರುವ ವಂದೇ ಭಾರತ್ ರೈಲು ಬರಲಿದೆ. ತಿರುವನಂತಪುರ – ಮಂಗಳೂರು – ತಿರುವನಂತಪುರ (20631/20632) ಮಾರ್ಗದಲ್ಲಿ ಈ ನೂತನ 20 ಬೋಗಿಗಳ ರೈಲು ಓಡಲಿದೆ.ಪ್ರಸ್ತುತ ರೈಲ್ವೆಯ ಅಂಕಿ ಅಂಶ ಪ್ರಕಾರ, ಭಾರತದಲ್ಲಿ ಪ್ರಯಾಣಿಕರ ಆಕ್ಯುಪೆನ್ಸಿ ಶೇಕಡಾ 200 ರ ಹತ್ತಿರವಿರುವ ರೈಲು ಇದಾಗಿದೆ.
100 ಸೀಟ್‌ಗಳಿರುವ ರೈಲಿಗೆ ಹತ್ತಿ ಇಳಿದು 200 ಪ್ರಯಾಣಿಕರು ಸೀಟು ಉಪಯೋಗಿಸುತ್ತಾರೆ ಎಂದು ಅಂಕಿ ಅಂಶಗಳು ಹೇಳುತ್ತಿವೆ.
ಮಂಗಳೂರು-ತಿರುವನಂತಪುರ ರೈಲಿನ (20631) 474 ಸೀಟು ಯಾವಾಗಲೂ ಪ್ರಯಾಣಿಕರಿಂದ ತುಂಬಿರುತ್ತದೆ. ಹೀಗಾಗಿಯೇ ಹೆಚ್ಚು ಸಾಮರ್ಥ್ಯದ ರೈಲನ್ನು ಈ ಮಾರ್ಗಕ್ಕೆ ನಿಯೋಜಿಸಲಾಗುತ್ತಿದೆ.
20 ರೇಕ್ ಆದರೆ, 1,246 ಸೀಟಿಗೂ ಹೆಚ್ಚು ಇರಲಿದೆ. ಈ ವಂದೇ ಭಾರತ್ ರೈಲುಗಳನ್ನೂ ಇತ್ತೀಚೆಗಷ್ಟೇ ರೈಲ್ವೆ ಇಲಾಖೆ ಹೊರ ತಂದಿದೆ. ಹೊಸದಾಗಿ ಚೆನ್ನೈ ಇಂಟಗ್ರಲ್ ಕೋಚ್ ಫ್ಯಾಕ್ಟರಿಯಿಂದ ಬಂದ ಎರಡು ವಂದೇ ಭಾರತ್‌ಗಳನ್ನು ದಕ್ಷಿಣ ರೈಲ್ವೆಗೆ ಹಸ್ತಾಂತರಿಸಲಾಗಿದೆ.
ಈಗಾಗಲೇ 16 ಬೋಗಿಗಳಿರುವ ತಿರುವನಂತಪುರ-ಕಾಸರಗೋಡು ವಂದೇ ಭಾರತ್ (20634) ರೈಲಿನಲ್ಲಿಯೂ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ. ಈ ಹೊಸ ವಂದೇ ಭಾರತ್ ರೈಲಿನಲ್ಲಿ ನೀಲಿ ಹಾಗೂ ಬಿಳಿ ಬಣ್ಣವನ್ನು ಹೊರತುಪಡಿಸಲಾಗಿದೆ.
ಪ್ರಸ್ತುತ ಕೇಸರಿ, ಕಪ್ಪು ಎಂಬವುಗಳ ಸಂಕೀರ್ಣವಾದ ಬಣ್ಣ ಇದರದ್ದಾಗಿದೆ. ಬಿಳಿ ಬಣ್ಣದಲ್ಲಿರುವ ಹಲವು ರೈಲುಗಳಲ್ಲಿ ಹಳದಿ ಬಣ್ಣವನ್ನೂ ಬಳಸಲಾಗಿತ್ತು. ಈ ಸಂಬಂಧ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಐಸಿಎಫ್ ರೈಲ್ವೆಯ ಅನುಮತಿಯೊಂದಿಗೆ ಬಣ್ಣ ಬದಲಿಸಿದೆ.
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಕಲ್ಲು ತೂರಾಟ ಮತ್ತು ರೈಲು ಹಳಿಗಳ ಮೇಲೆ ಕಲ್ಲುಎಸೆದು ವಿಧ್ವಂಸಕ ಕೃತ್ಯಕ್ಕೆ ಪ್ರಯತ್ನಿಸಿದ ಪ್ರಕರಣಗಳ ಆರೋಪಿಗಳನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಆರ್‌ಪಿಎಫ್ ಸಿಐಎಂ ಅಕ್ಬರ್ ಅಲಿ ನೇತೃತ್ವದ ಆರ್‌ಪಿಎಫ್ ತಂಡ, ಆರ್‌ಪಿಎಫ್ ಟ್ರೈನ್ ಇಂಟೆಲಿಜೆನ್ಸ್ ಟೀಮ್ ಮತ್ತು ಕಾಸರಗೋಡು ನಗರ ಠಾಣೆ ಎಸ್‌ಐ ದಿನೇಶ್ ಬಾಬು ಅವರನ್ನೊಳಗೊಂಡ ತಂಡ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಪೂಚ್ಚಾಕ್ಕಾಡ್ ಎಂಬಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಕಲ್ಲುತೂರಿದ ಈ ಪ್ರಕರಣದಲ್ಲಿ 17 ವರ್ಷದ ಅಪ್ರಾಪ್ತನನ್ನು ರೈಲ್ವೆ ಆರ್‌ಪಿಎಫ್ ತಂಡ ಬಂಧಿಸಿದೆ. ಮಂಗಳವಾರ ಬೆಳಗ್ಗೆ ಕಳನಾಡ್ ರೈಲು ಹಳಿಗಳ ಮೇಲೆ ಕಲ್ಲುಇರಿಸಿದ ಘಟನೆಯಲ್ಲಿ ಪತ್ತನಂತಿಟ್ಟ ಮೂಲದ ಅಖಿಲ್ ಜಾನ್ ಮ್ಯಾಥ್ಯೂ (21) ಎಂಬಾತನನ್ನು ಬಂಧಿಸಲಾಗಿದೆ.
ಈತ ಅಮೃತಸರ – ಕೊಚ್ಚುವೇಲಿ ಎಕ್ಸ್‌ಪ್ರೆಸ್ ರೈಲು ಹಳಿ ಮೇಲೆ ಜಲ್ಲಿಕಲ್ಲುಇರಿಸಿದ್ದ. ಲೋಕೋ ಪೈಲೆಟ್ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ರೈಲ್ವೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಆರ್‌ಪಿಎಫ್ ಸಿಐಎಂ ಅಕ್ಬರ್ ಅಲಿ ತಿಳಿಸಿದ್ದಾರೆ.