ಹಿರೇಕೋಗಲೂರು (ದಾವಣಗೆರೆ): ಈ ಬಾರಿ ಉತ್ತಮ ಮಳೆಯಿಂದಾಗಿ ಭತ್ತದ ಬೆಳೆ ಕೂಡ ಚೆನ್ನಾಗಿ ಬಂದಿದೆ. ಆದರೆ ಅಕಾಲಿಕ ಮಳೆಯು ಸಸಿಗಳು ನಡು ಬಾಗಿ ಬೀಳುವಂತೆ ಮಾಡಿದೆ. ಹೀಗಾಗಿ ಅದರ ಕಟಾವು ವೆಚ್ಚ ಇನ್ನಷ್ಟು ದುಬಾರಿಯಾಗಿದೆ. ಅತ್ತ ಭತ್ತದ ದರ ಕೂಡ ರೈತರ ಪಾಲಿಗೆ ಆಶಾದಾಯಕವಾಗಿಲ್ಲ.
ಕಳೆದ ಬಾರಿ ಭೀಕರ ಬರಗಾಲದಿಂದ ತತ್ತರಿಸಿ ಹೋಗಿದ್ದ ರೈತರಿಗೆ ಈ ಬಾರಿಯ ಉತ್ತಮ ಮಳೆ ಭತ್ತದ ಇಳುವರಿಯನ್ನು ಹೆಚ್ಚಿಸಿದೆ. ಆದರೆ ಮಳೆ ಇನ್ನಿತರೆ ಕಾರಣಕ್ಕೆ ಕೊಯ್ಲು ದುಬಾರಿ ಆಗುತ್ತಿದೆ. ಈಗಿರುವ ಭತ್ತದ ಬೆಳೆಯಿಂದ ನಷ್ಟ ಆಗಲಿದ್ದು ಸರಕಾರ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಖರೀದಿ ಕೇಂದ್ರ ತೆರೆದು ಭತ್ತ ಖರೀದಿಸಬೇಕು ಎಂದು ರೈತರು ಒತ್ತಾಯಿಸುತ್ತಿದ್ದಾರೆ.
ಚನ್ನಗಿರಿ ತಾಲೂಕಿನ ವೆಂಕಟೇಶ್ವರ ಕ್ಯಾಂಪು, ತ್ಯಾವಣಿಗೆ, ದೊಡ್ಡಘಟ್ಟ, ಬೆಳಲಗೆರೆ ಸೇರಿದಂತೆ ಸುತ್ತಲಿನ ಪ್ರದೇಶದ ಭದ್ರಾ ಅಚ್ಚುಕಟ್ಟು ಪ್ರದೇಶಗಳಲ್ಲಿ ಬೆಳೆದಿರುವ ಭತ್ತದ ಬೆಳೆ ಕಟಾವು ವಾರದಿಂದ ಬಿರುಸಿನಿಂದ ಸಾಗುತ್ತಿದೆ. ಆದರೆ ದರದಲ್ಲಿ ವ್ಯತ್ಯಾಸ ಆಗುತ್ತಿರುವುದರಿಂದ ಶ್ರಮಕ್ಕೆ ತಕ್ಕಂತೆ ಬೆಲೆ ಸಿಗುವುದಿಲ್ಲ, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾದರೆ ಹೇಗೆ ಎಂದು ರೈತರು ಚಿಂತಿತರಾಗಿದ್ದಾರೆ.
ಈ ಬಾರಿ ಉತ್ತಮ ಮಳೆಯಿಂದಾಗಿ ಮುಂಗಾರು ಭತ್ತದ ಇಳುವರಿ ಎಲ್ಲ ಕಡೆ ಚೆನ್ನಾಗಿದೆ. ನಮ್ಮ 7 ಎಕರೆ ಜಮೀನಿನಲ್ಲಿ ಬೆಳೆದ ಭತ್ತ ಕಟಾವಿಗೆ ಬಂದಿದ್ದು, ಸ್ಪೀಡ್ ಮಿಷಿನ್‌ನಿಂದ ಭತ್ತ ಕಟಾವಿಗೆ ಗಂಟೆಗೆ 3 ಸಾವಿರ ಪಡೆಯುತ್ತಾರೆ. ಸ್ಪೀಡ್ ಮಿಷಿನ್‌ನಿಂದ ಬಿದ್ದ ಭತ್ತವನ್ನು ಕಟಾವು ಮಾಡಲು ಸಮಯ ಜಾಸ್ತಿಯಾಗುವುದರಿಂದ ಗಂಟೆಗೆ ಸುಮಾರು 10 ಸಾವಿರಕ್ಕೂ ಅಧಿಕ ಖರ್ಚಾಗುತ್ತದೆ.
ನಡು ಮುರಿದು ಭತ್ತ ನೆಲಕ್ಕೆ ಬೀಳುತ್ತಿರುವುದು ಒಂದೆಡೆಯಾದರೆ, ಭತ್ತದ ದರದಲ್ಲಿ ಏರುಪೇರಾಗುತ್ತಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎನ್ನುತ್ತಾರೆ ವೆಂಕಟೇಶ್ವರ ಕ್ಯಾಂಪಿನ ರೈತ ಮೋಹನ್.
ಭತ್ತವು ನೆಲಕ್ಕೆ ಬಿದ್ದು ಭತ್ತ ಉದುರಿ ಹಾನಿ ಆಗುತ್ತಿರುವುದರಿಂದ ಹಾನಿಗೊಂಡ ಪ್ರದೇಶಗಳಿಗೆ ಅಧಿಕಾರಿಗಳು ಭೇಟಿ ನೀಡಿ ಸೂಕ್ತ ಪರಿಹಾರ ಕಲ್ಪಿಸಿಕೊಡಬೇಕೆಂದು ರೈತರಾದ ಶ್ರೀನಿವಾಸ್, ಸಿ.ಎಚ್.ನಾಗರಾಜ್, ಕೋಲಿ ಪೊಟಿ ವೆಂಕಟಮೋಹನ್, ಶಿವನಾರಾಯಣ, ಶ್ರೀನಿವಾಸ್ ಸರಕಾರವನ್ನು ಒತ್ತಾಯಿಸಿದ್ದಾರೆ.
“ಈ ಬಾರಿ ಭತ್ತದ ಇಳುವರಿ ಹೆಚ್ಚಾಗಿರುವುದರಿಂದ ಸಂತೋಷ ಒಂದೆಡೆಯಾದರೆ, ಭತ್ತದ ದರ ಕುಸಿತದಿಂದ ಕಂಗಾಲಾಗಿದ್ದಾರೆ. ಖರೀದಿದಾರರ ಒಳ ಸಂಚಿನಿಂದ ಧಾರಣೆ ಏರಿಕೆಯಾಗುತ್ತಿಲ್ಲ. ಎಪಿಎಂಸಿಯಲ್ಲಿ ಟೆಂಡರ್ ಪದ್ಧತಿಯಲ್ಲಿ ಭತ್ತ ಖರೀದಿ ನಡೆಯಬೇಕು.
ಕನಿಷ್ಠ ಬೆಂಬಲ ಯೋಜನೆಯಡಿಯಲ್ಲಿ ರಾಜ್ಯ ಸರಕಾರ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಿ, ನಿಗದಿಯಾಗಿರುವ ಕ್ವಿಂಟಾಲ್ ಭತ್ತಕ್ಕೆ 2,320 ದರಕ್ಕೆ, ರಾಜ್ಯ ಸರಕಾರ 600 ರೂ. ಪ್ರೋತ್ಸಾಹ ದರ 2,920 ಬೆಲೆಯಲ್ಲಿ ಖರೀದಿಸಬೇಕು” ಎಂದು ರೈತ ಮುಖಂಡ ಬಿಎಂ ಸತೀಶ್ ಕೊಳೇನಹಳ್ಳಿ ಆಗ್ರಹಿಸಿದ್ದಾರೆ.