ಶಿವಮೊಗ್ಗ: 1980ರ ದಶಕದಲ್ಲಿ ಭೂ ರಹಿತ ರೈತರ ಅನುಕೂಲಕ್ಕಾಗಿ ಕಾಯ್ದೆ ಜಾರಿಗೆ ತಂದ ಬಳಿಕ ಲಕ್ಷಾಂತರ ಅತಿ ಸಣ್ಣ ಹಾಗೂ ಸಣ್ಣ ರೈತರು ಸರಜಾರಿ ಭೂಮಿಯಲ್ಲಿ ಸಾಗುವಳಿ ಮಾಡಿದ್ದಾರೆ. ಅವರ ಕೃಷಿಗೆ ಅಡ್ಡಿ ಬಾರದಂತೆ ಅವರ ಜಮೀನಿಗೆ ಮಾನ್ಯತೆ ನೀಡುವ ಪ್ರಯತ್ನಗಳು ಈವರೆಗೂ ಪೂರ್ಣಗೊಂಡಿಲ್ಲ.
ಜೀವನೋಪಾಯಕ್ಕಾಗಿ ಸರಕಾರಿ ಭೂಮಿ ಸಾಗುವಳಿ ಮಾಡಿದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಸರಕಾರ ಹಕ್ಕುಪತ್ರ ನೀಡುವ ಸಲುವಾಗಿ ಭೂ ಸುಧಾರಣೆ ಕಾಯಿದೆ ಜಾರಿಗೊಳಿಸಿದರೂ ಹತ್ತಾರು ತಾಂತ್ರಿಕ ಸಮಸ್ಯೆಗಳು ರೈತರನ್ನು ಭೂ ಒಡೆತನದಿಂದ ವಂಚಿತರನ್ನಾಗಿ ಮಾಡಿದೆ.
ರಾಜ್ಯ ಸರಕಾರವು ಅಧಿಕಾರಿಗಳಿಗೆ ಗಡುವುಗಳ ಮೇಲೆ ಗಡುವು ನೀಡುತ್ತಲೇ ಇದ್ದರೂ ಬಗರ್ ಹುಕುಂ ಸಮಿತಿಗಳು ರೈತರಿಗೆ ನ್ಯಾಯ ಕೊಡಿಸುವಲ್ಲಿ ಸೋತಿವೆ. ಸಾಗುವಳಿ ಹಕ್ಕುಪತ್ರಕ್ಕಾಗಿ ಸಲ್ಲಿಸಿದ ಎಲ್ಲ ಅರ್ಜಿಗಳನ್ನು ಡಿಸೆಂಬರ್ ಅಂತ್ಯದೊಳಗೆ ವಿಲೇ ಮಾಡಬೇಕೆಂಬ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರ ಕಟ್ಟಾಜ್ಞೆ ಕೇವಲ ಮಾತಿನಲ್ಲೇ ಉಳಿಯುವ ಸಾಧ್ಯತೆ ಇದೆ. ಸರಕಾರದ ಮಟ್ಟದಲ್ಲೇ ಬಹಳಷ್ಟು ತೊಡಕುಗಳಿರುವುದರಿಂದ ಹಲವು ದಶಕಗಳಾದರೂ ಲಕ್ಷಾಂತರ ಅರ್ಜಿಗಳು ಬಾಕಿ ಇವೆ.
1980ರ ದಶಕದ ಪೂರ್ವದಲ್ಲಿ ಭೂ ರಹಿತ ರೈತರಿಗೆ ಜೀವನೋಪಾಯಕ್ಕೆ 2 ಎಕರೆ ದರಖಾಸು ಮಂಜೂರು ಮಾಡುವ ಕಾನೂನು ಮಾಡಲಾಗಿತ್ತು. ಇದಾದ ಬಳಿಕವೂ ರೈತರು ತಮಗೆ ಅನುಕೂಲವಾದ ಕಡೆ ಹೊಟ್ಟೆಪಾಡಿಗಾಗಿ ಅದು ಯಾವ ಭೂಮಿ ಎಂಬುದರ ಪರಿವೇ ಇಲ್ಲದೆ ಸಾಗುವಳಿ ಮಾಡಲಾರಂಭಿಸಿದರು.
ಇಂತಹ ರೈತರಿಗೆ ಭೂಮಿ ಹಕ್ಕುದಾರಿಕೆ ನೀಡುವ ಸಲುವಾಗಿಯೇ ಕರ್ನಾಟಕ ಭೂ ಕಂದಾಯ ಕಾಯಿದೆ 1964 ಅನ್ವಯ 1991ರಲ್ಲಿ ನಮೂನೆ 50, 1999ರಲ್ಲಿ ನಮೂನೆ 53, 2018ರಲ್ಲಿ ನಮೂನೆ 57ರಲ್ಲಿ ಅರ್ಜಿ ಸ್ವೀಕರಿಸಲಾಯಿತು. ನಮೂನೆ 57ರ ಅಡಿ ಅರ್ಜಿ ಸ್ವೀಕರಿಸುವ ಅವಧಿಯನ್ನು ಸರಕಾರ 2023ನೇ ಏಪ್ರಿಲ್‌ವರೆಗೆ ವಿಸ್ತರಿಸಿತ್ತು.
ಸಚಿವರ ಕಟ್ಟುನಿಟ್ಟಿನ ಕ್ರಮದ ಬಳಿಕವೂ ರಾಜ್ಯದಲ್ಲಿ 9,95,854 ಅರ್ಜಿಗಳು ಬಾಕಿ ಇವೆ. ಇಷ್ಟೊಂದು ಸಂಖ್ಯೆಯ ಅರ್ಜಿ ಬಾಕಿಗೆ ಕಾರಣವೂ ಇದೆ. ಭೂ ಸುಧಾರಣೆ ಕಾಯಿದೆಯಲ್ಲಿ ಕಂದಾಯ ಇಲಾಖೆ ವ್ಯಾಪ್ತಿಯ ಭೂಮಿಗೆ ಹಕ್ಕುಪತ್ರ ನೀಡಬಹುದೇ ಹೊರತು ಅರಣ್ಯಭೂಮಿ, ಸೊಪ್ಪಿನಬೆಟ್ಟ, ಕಾನು, ಕುಮ್ಕಿ ಮತ್ತು ಇತರೆ ಅರಣ್ಯಭೂಮಿ ಮಂಜೂರು ಮಾಡಲು ಅವಕಾಶವಿಲ್ಲ. ಆದರೆ, ರೈತರು ಸಲ್ಲಿಸಿರುವ ಅರ್ಜಿಗಳಲ್ಲಿ ಶೇ.50ಕ್ಕಿಂತ ಹೆಚ್ಚು ಇಂತಹ ಭೂಮಿಗಳ ಸಾಗುವಳಿಯೇ ಅಧಿಕವಾಗಿದ್ದು ಆ ಎಲ್ಲ ಅರ್ಜಿಗಳು ತಿರಸ್ಕೃತಗೊಂಡಲ್ಲಿ ನಿಯಮಾನುಸಾರ ಸಾಗುವಳಿಯಿಂದ ಬಿಡಿಸಬೇಕಾಗುತ್ತದೆ.
ಇಂತಹವರಲ್ಲಿ ಬದುಕಿಗಾಗಿ ಸಾಗುವಳಿ ಮಾಡಿದ ಬಡ ಸಣ್ಣ ಮತ್ತು ಅತಿಸಣ್ಣ ರೈತರೆ ಅಧಿಕ ಸಂಖ್ಯೆಯಲ್ಲಿದ್ದಾರೆ. ಹಾಗೇನಾದರೂ ಆದಲ್ಲಿ ಮಲೆನಾಡು ಮತ್ತು ಅರೆಮಲೆನಾಡಿನ ಲಕ್ಷಾಂತರ ಕುಟುಂಬಗಳು ಭೂಮಿಯನ್ನು ಕಳೆದುಕೊಳ್ಳುತ್ತವೆ.
ಕಾಯಿದೆ ಪ್ರಕಾರ 2015ಕ್ಕೂ 15 ವರ್ಷದ ಹಿಂದಿನ ಬಗರ್ ಹುಕುಂ ಸಾಗುವಳಿಗೆ ಮಾತ್ರ ಹಕ್ಕು ಪತ್ರ ನೀಡಲು ಅವಕಾಶವಿದೆ. ಅದಕ್ಕಾಗಿ ಇಸ್ರೋ ಹಾಗೂ ರಾಜ್ಯ ದೂರ ಸಂವೇದಿ ಅನ್ವಯಕ ಕೇಂದ್ರದ ಉಪಗ್ರಹ ಆಧಾರಿತ ಆ್ಯಪ್ ಮಾಡಲಾಗಿದ್ದು ಎಷ್ಟು ವರ್ಷದಿಂದ ಸಾಗುವಳಿ ಮಾಡಲಾಗುತ್ತಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಲಾಗುತ್ತದೆ. ಇಷ್ಟಾಗಿಯೂ ಭೂ ಒಡೆತನ ನೀಡಲು ನೂರೆಂಟು ತೊಡಕುಗಳಿವೆ.
ತೊಡಕುಗಳು
ಕರ್ನಾಟಕ ಏಕೀಕರಣಕ್ಕೂ ಮೊದಲು ವಿವಿಧ ಪ್ರಾಂತ್ಯದಲ್ಲಿದ್ದ ಭೂ ದಾಖಲೆ, ಕೆಲವು ಕಾಯಿದೆಗಳು ಇನ್ನೂ ಬದಲಾಗಿಲ್ಲ, ರೈತರು ಸಾಗುವಳಿ ಮಾಡುತ್ತಿರುವ ಭೂಮಿ ಕಂದಾಯ ಅಥವಾ ಅರಣ್ಯ ಇಲಾಖೆಯದ್ದೋ ಎಂಬುದು ಅಧಿಕಾರಿಗಳಿಗೂ ಗೊತ್ತಿಲ್ಲ, ಜಂಟಿ ಸರ್ವೆಯಾಗದ ಹೊರತು ಸಾಗುವಳಿ ಭೂ ಒಡೆತನ ಕೊಡಲು ಬರುವುದಿಲ್ಲ, ಜಂಟಿ ಸರ್ವೆಗೆ ರಾಜ್ಯದಲ್ಲಿ ಸರ್ವೆಯರ್‌ಗಳಲ್ಲದೆ ಕಂದಾಯ ಇಲಾಖೆಯಲ್ಲೂಸಿಬ್ಬಂದಿ ಕೊರತೆ ಇದೆ , ರಾಜ್ಯದಲ್ಲಿ ಮಂಜೂರಾದ 4020 ಹುದ್ದೆಗಳಿದ್ದು ಇದರಲ್ಲಿ ಸುಮಾರು 1 ಸಾವಿರ ಹುದ್ದೆಗಳು ಖಾಲಿ ಇವೆ , ಕೆಲ ತಾಲೂಕುಗಳಲ್ಲಿ 10 ಸರ್ವೆಯರ್‌ಗಳಿದ್ದರೆ ಕೆಲ ತಾಲೂಕುಗಳಲ್ಲಿ 5 ಸಹ ಇಲ್ಲ, ಪ್ರತಿ ತಾಲೂಕಿನಲ್ಲಿ ಸಾವಿರಾರು, ಕೆಲ ತಾಲೂಕುಗಳಲ್ಲಿ ಲಕ್ಷಾಂತರ ಅರ್ಜಿಗಳು ಸರ್ವೆಗೆ ಬಾಕಿ ಇವೆ.
ಪರಿಹಾರಗಳು
ಕೇಂದ್ರ ಸರಕಾರ 2023ರಲ್ಲಿತಿದ್ದುಪಡಿ ತಂದ 1980ರ ಅರಣ್ಯ ಸಂರಕ್ಷಣಾ ಕಾಯಿದೆಯನ್ನು ರಾಜ್ಯದಲ್ಲೂಅನುಷ್ಠಾನಗೊಳಿಸಿದರೆ ರೈತರಿಗೆ ಸೊಪ್ಪಿನಬೆಟ್ಟ, ಕಾನು, ಕುಮ್ಕಿ, ಬಾನೆಗಳ ಭೂ ಒಡೆತನ ನೀಡಬಹುದು.
ಲಕ್ಷಾಂತರ ಹೆಕ್ಟೇರ್ ರೆವಿನ್ಯೂ ಕಾನು ಹೆಸರಿನ ಕಂದಾಯ ಭೂಮಿಯನ್ನು ರೈತರು ಸಾಗುವಳಿ ಮಾಡುತ್ತಿರುವ ಅರಣ್ಯ ಭೂಮಿಗೆ ಬದಲಾಗಿ ನೀಡಿ ನ್ಯಾಯ ಒದಗಿಸಬಹುದು.
ಪ್ರತಿ ಜಿಲ್ಲೆಯಲ್ಲೂ ಐಎಎಸ್ ಅಧಿಕಾರಿ ನೇತೃತ್ವದ ಕಾರ್ಯಪಡೆ ಅಥವಾ ಸಚಿವರಿಗೆ ಜವಾಬ್ದಾರಿ ವಹಿಸಿ ಕಾಲಮಿತಿಯೊಳಗೆ ಬಗೆಹರಿಸಲು ಸೂಚಿಸಬಹುದು.
ಪ್ರತಿ ಜಿಲ್ಲೆಗೂ ಹೊರ ಗುತ್ತಿಗೆ ಆಧಾರದಲ್ಲಿ 25 ಸರ್ವೆಯರ್‌ಗಳನ್ನು ನೇಮಿಸಿಕೊಂಡು ಸಮರೋಪಾದಿಯಲ್ಲಿ ಸರ್ವೆ ಮಾಡಿಸಬೇಕು.