ಹುಬ್ಬಳ್ಳಿ: ಉತ್ತರ ಕರ್ನಾಟಕದ ಆರಾಧ್ಯ ದೈವ ಶ್ರೀ ಸಿದ್ಧಾರೂಢಸ್ವಾಮಿ ಮಠದಲ್ಲಿ ಕಾರ್ತಿಕ ಮಾಸದ ನಿಮಿತ್ತ ಭಾನುವಾರ ಲಕ್ಷದೀಪೋತ್ಸವ ಅದ್ಧೂರಿಯಾಗಿ ನೆರವೇರಿತು.
ಸಂಜೆ ಶ್ರೀಮಠದ ಆವರಣದಲ್ಲಿ ನೂರಾರು ಜನರು ಆಕಾಶಬುಟ್ಟಿ ಹಾರಿಸಿ ಸಂಭ್ರಮಿಸಿದರೆ, ಆಕರ್ಷಕ ಸಿಡಿಮದ್ದುಗಳು ಭಕ್ತರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು.
ಕಾರ್ತಿಕೋತ್ಸವದ ಹಿನ್ನೆಲೆಯಲ್ಲಿ ಸಿದ್ದಾರೂಢಸ್ವಾಮಿಗೆ ವಿಶೇಷ ಪೂಜೆ, ಅಭಿಷೇಕ ನೆರವೇರಿತು. ಶ್ರೀಮಠಕ್ಕೆ ಆಗಮಿಸಿದ್ದ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿಸಲಾಯಿತು.
ಶ್ರೀಮಠದ ಪ್ರಾಂಗಣದಲ್ಲಿ ಹಚ್ಚಲಾಗಿದ್ದ ಬಗೆಬಗೆಯ ದೀಪಗಳ ಬೆಳಕಿನಿಂದ ಆವರಣವೆಲ್ಲ ಝಗಮಗಿಸುತ್ತಿತ್ತು. ಭಕ್ತರಿಂದ ಶ್ರೀ ಸಿದ್ದಾರೂಢ ಮಹಾರಾಜ ಕೀ ಜೈ ಎಂಬ ಘೋಷವಾಕ್ಯಗಳು ಮೊಳಗಿದವು. ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ಶ್ರೀಮಠದ ಪ್ರಾಂಗಣದಲ್ಲಿ ದೀಪ ಹಚ್ಚುವ ಮೂಲಕ ಮೆರುಗು ತಂದರು. ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಧಾರವಾಡ, ಹಾವೇರಿ, ಗದಗ, ಕೊಪ್ಪಳ, ವಿಜಯಪುರ, ಬಾಗಲಕೋಟೆ, ಕಲಬುರಗಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.