ಕೊಚ್ಚಿ(ಕೇರಳ): ಕೇರಳದ ಕ್ಯಾಥೋಲಿಕ್ ಪಾದ್ರಿ ಜಾರ್ಜ್ ಜೇಕಬ್ ಕೂವಕಾಡ್ ಅವರು ಕಾರ್ಡಿನಲ್ ಆಗಿ ನೇಮಕವಾಗಿದ್ದಾರೆ. ಪೋಪ್ ಫ್ರಾನ್ಸಿಸ್ ಅವರು ಜೇಕಬ್‌ಗೆ ಕಾರ್ಡಿನಲ್ ಪದವಿ ಪ್ರದಾನ ಮಾಡಿದರು.
ಸಮಾಜಸೇವೆಗೆ ತಮ್ಮ ಜೀವನ ಮುಡಿಪಾಗಿಟ್ಟ ಕೇರಳದ ಪಾದ್ರಿ ಜಾರ್ಜ್ ಜೇಕಬ್ ಕೂವಕಾಡ್ ಅವರ ಜೊತೆಗೆ 20 ಮಂದಿ ಕಾರ್ಡಿನಲ್ಗಳಾಗಿ ಮುಂಬಡ್ತಿ ಪಡೆದರು. ಭಾರತದಿಂದ ಜೇಕಬ್ ಈ ಉನ್ನತ ಗೌರವಕ್ಕೆ ಪಾತ್ರರಾಗಿದ್ದಾರೆ.
ಈ ಸಮಾರಂಭಕ್ಕೆ ಸಾಕ್ಷಿಯಾಗಲು ಸರ್ಕಾರವು ಕೇಂದ್ರ ಸಚಿವ ಜಾರ್ಜ್ ಕುರಿಯನ್ ನೇತೃತ್ವದ ನಿಯೋಗವನ್ನು ಕಳುಹಿಸಿತ್ತು. ಸಮಾರಂಭಕ್ಕೂ ಮೊದಲು ಭಾರತೀಯ ನಿಯೋಗವು ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿ ಮಾಡಿತು.
ಬಿಷಪ್ ನಂತರದ ಪ್ರಮುಖ ಗೌರವವಾದ ಕಾರ್ಡಿನಲ್ ಪದವಿಗೆ ಭಾರತೀಯ ಕ್ಯಾಥೋಲಿಕ್ ಪಾದ್ರಿ ಜಾರ್ಜ್ ಜೇಕಬ್ ಕೂವಕಾಡ್ ನೇಮಕವಾಗಿದ್ದಾರೆ. ಪೋಪ್ ಫ್ರಾನ್ಸಿಸ್ ಅವರು ವ್ಯಾಟಿಕನ್‌ನಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಜೇಕಬ್‌ಗೆ ಕಾರ್ಡಿನಲ್ ಪದವಿ ಪ್ರದಾನ ಮಾಡಿದರು.
51 ವರ್ಷದ ಜಾರ್ಜ್ ಜೇಕಬ್ ಕೂವಕಾಡ್ ಅವರು ಕೇರಳದಲ್ಲಿ ಹುಟ್ಟಿ ಬೆಳೆದವರು. ಪ್ರಮುಖ ಕ್ರಿಶ್ಚಿಯನ್ ಸಮುದಾಯವಾದ ಚಂಗನಾಚೆರಿಯ ಸಿರೋ ಮಲಬಾರ್ ಆರ್ಚ್ಡಯಾಸಿಸ್ಗೆ ಸೇರಿದವರು. 2004ರಲ್ಲಿ ಪಾದ್ರಿಯಾಗಿ ನೇಮಕಗೊಂಡು ಕ್ಯಾನನ್ ಕಾನೂನಿನಲ್ಲಿ ಡಾಕ್ಟರೇಟ್ ಪಡೆದಿದ್ದಾರೆ.
ಕಾರ್ಡಿನಲ್ ಆಗಿ ಪದೋನ್ನತಿ ಪಡೆದ ಕೂವಕಾಡ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಭಾರತಕ್ಕೆ ಇದು ಹೆಮ್ಮೆಯ ಸಂಗತಿ. ಜೀಸಸ್ ಕ್ರಿಸ್ತರ ಕಟ್ಟಾ ಅನುಯಾಯಿಯಾಗಿ ಮಾನವೀಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಮುಂದಿನ ಎಲ್ಲ ಕಾರ್ಯಗಳು ನೆರವೇರಲಿ ಎಂದು ಶುಭ ಕೋರಿದ್ದಾರೆ.
2020ರಲ್ಲಿ ಹೋಲಿ ಸೀ ಸೆಕ್ರೆಟರಿಯೇಟ್ ಆಫ್ ಸ್ಟೇಟ್‌ನಲ್ಲಿ ಹುದ್ದೆಯಲ್ಲಿದ್ದಾಗ ಪೋಪ್ ಫ್ರಾನ್ಸಿಸ್ ಅವರ ವಿದೇಶ ಪ್ರವಾಸಗಳನ್ನು ಆಯೋಜಿಸುವ ಜವಾಬ್ದಾರಿ ಹೊಂದಿದ್ದರು. ಅಕ್ಟೋಬರ್ 25ರಂದು ಪೋಪ್ ಅವರು ಕೂವಕಾಡ್ ಅವರನ್ನು ಆರ್ಚ್ಬಿಷಪ್ ಆಗಿ ನೇಮಿಸಿದ್ದರು.
ಕಾರ್ಡಿನಲ್ಗಳಾಗಿ ಆಯ್ಕೆಯಾದ ಭಾರತದ ಜೇಕಬ್ ಸೇರಿದಂತೆ 21 ಮಂದಿ ಪೋಪ್ ಫ್ರಾನ್ಸಿಸ್ ಅವರಿಂದ ದೀಕ್ಷೆ ಪಡೆದರು. ಜೊತೆಗೆ ಅವರಿಂದ ಕಾರ್ಡಿನಲ್ಗಳು ಧರಿಸುವ ಸಮವಸ್ತ್ರ, ಉಂಗುರ ಮತ್ತು ಟೊಪ್ಪಿಯನ್ನು ಪಡೆದರು. ಪ್ರಾರ್ಥನೆಯ ಬಳಿಕ ಪ್ರಮಾಣಪತ್ರ ನೀಡಲಾಯಿತು.