ಅಸ್ಸಾಂ: ಐಎಎಸ್ ಆಕಾಂಕ್ಷಿಯೊಬ್ಬರು ಜಿಲ್ಲಾಧಿಕಾರಿ ಆಗುವ ಕನಸು ಹೊತ್ತಿದ್ದು, ಆ ಹುದ್ದೆಗೆ ಆಯ್ಕೆಯಾಗುವ ಮೊದಲೇ ಅವರು ಅಧಿಕಾರ ಅನುಭವಿಸಿದ್ದಾರೆ.
ಐಎಎಸ್ (ಭಾರತೀಯ ಆಡಳಿತ ಸೇವೆ) ಅಧಿಕಾರಿಯಾಗಬೇಕೆಂಬ ಕನಸು ಹೊತ್ತಿರುವ ಆಕಾಂಕ್ಷಿಯೊಬ್ಬರ ಮಹತ್ತರ ಕೋರಿಕೆಯನ್ನು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಈಡೇರಿಸಿದ್ದಾರೆ. ಜಿಲ್ಲಾಧಿಕಾರಿಗಳ ಕಾರ್ಯವೈಖರಿ ಹೇಗಿರುತ್ತದೆ ಎಂದು ಖುದ್ದಾಗಿ ತಿಳಿಯುವ ಬಯಕೆ ಹೊಂದಿದ್ದ ವ್ಯಕ್ತಿಗೆ ‘ಒಂದು ದಿನದ ಜಿಲ್ಲಾಧಿಕಾರಿ’ಯಾಗಿ ಕಾರ್ಯನಿರ್ವಹಣೆ ಮಾಡಲು ಅವಕಾಶ ನೀಡಿದ್ದಾರೆ.
ಖಾಸಗಿ ಶಾಲಾ ಶಿಕ್ಷಕರಾಗಿರುವ ಮೃಣ್ಮೊಯ್ ಕಲಿತಾ ಎಂಬವರು ಐಎಎಸ್ ಆಕಾಂಕ್ಷಿಯಾಗಿದ್ದಾರೆ. ಸದ್ಯ ಅವರು ಫುಲೋಗುರಿಯಲ್ಲಿರುವ ಅಸ್ಸಾಮಿ ಮಾಧ್ಯಮದ ಜಾತಿಯ ವಿದ್ಯಾಲಯದಲ್ಲಿ ವಿಜ್ಞಾನ ಬೋಧಕರಾಗಿದ್ದಾರೆ. ತಾವು ಒಂದು ದಿನದ ಮಟ್ಟಿಗೆ ಜಿಲ್ಲಾಧಿಕಾರಿಯಾಗಿ, ಆ ಹುದ್ದೆಯ ಹೊಣೆ ನಿಭಾಯಿಸುವ ಬಯಕೆ ಹೊಂದಿದ್ದಾಗಿ ಸಿಎಂಗೆ ಪತ್ರ ಬರೆದಿದ್ದರು.
ಜಿಲ್ಲಾಧಿಕಾರಿಗಳು ಸಾರ್ವಜನಿಕರೊಂದಿಗೆ ಹೇಗೆ ಸಂವಹನ ನಡೆಸುತ್ತಾರೆ. ಅವರ ದುಃಖ ದುಮ್ಮಾನಗಳನ್ನು ಹೇಗೆ ಆಲಿಸುತ್ತಾರೆ ಎಂಬುದನ್ನೂ ಅಣಕು ಸಂವಹನ ಮೂಲಕ ಅರಿತುಕೊಂಡಿದ್ದಾರೆ. ಇಲಾಖಾ ಪರಿಶೀಲನೆ ನಡೆಸುವ ಮೂಲಕ ಜಿಲ್ಲಾಧಿಕಾರಿ ಪಾತ್ರ ಏನು ಎಂಬ ಅನುಭವವನ್ನು ಪಡೆದುಕೊಂಡಿದ್ದಾರೆ.
ಇದನ್ನು ಮನ್ನಿಸಿರುವ ಸಿಎಂ ಶರ್ಮಾ ಅವರು, ಮೃಣೋಯ್ ಅವರಿಗೆ ದಿನದ ಮಟ್ಟಿಗೆ ಡಿಸಿಯಾಗಿ ಕಾರ್ಯಭಾರ ಮಾಡುವ ಅವಕಾಶ ನೀಡಿದ್ದಾರೆ. ಅದರಂತೆ, ಡಿಸೆಂಬರ್ 6ರಂದು ಡಿಸಿ ಕಚೇರಿಯ ಭೂಸ್ವಾಧೀನ, ಆಹಾರ ಮತ್ತು ನಾಗರಿಕ ಸರಬರಾಜು, ಕಂದಾಯ ಮತ್ತು ಅಬಕಾರಿ ಸೇರಿದಂತೆ ಅನೇಕ ಇಲಾಖೆಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಅಲ್ಲಿಯ ಕೆಲಸವನ್ನು ಅವಲೋಕಿಸಿದ್ದಾರೆ ಎಂದು ತಿಳಿಸಿದರು.