Tumkur News:
ತುಮಕೂರಿನಲ್ಲಿ ಜೈನ ಸಮುದಾಯದ ಅದ್ಧೂರಿ ಶೋಭಾಯಾತ್ರೆಗೆ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು ಚಾಲನೆ ನೀಡಿದರು.ನಗರದ ಮಹಾವೀರ ಭವನದ ಬಳಿಯಿಂದ ಹೊರಟ ಶೋಭಾಯಾತ್ರೆಯಲ್ಲಿ ಅಭಿನವ ಶ್ರೀಗಳನ್ನು ಪಲ್ಲಕ್ಕಿಯಲ್ಲಿ ಹೊತ್ತು ಸಾಗಲಾಯಿತು. ಅವರೊಂದಿಗೆ ಮಹಿಳೆಯರು ಪೂರ್ಣ ಕುಂಭ ಕಳಸ ಹೊತ್ತು ಸಾಗಿದರೆ, ವಾದ್ಯ ವೃಂದ ಹಾಗೂ ಜೈನ ಸಮುದಾಯದವರು ಶೋಭಾಯಾತ್ರೆಯಲ್ಲಿ ಪಾಲ್ಕೊಂಡು ಪುನೀತರಾದರು.
ಶ್ರವಣಬೆಳಗೊಳದ ದಿಗಂಬರ ಜೈನ ಮಠದ ಪೀಠಾಧ್ಯಕ್ಷ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಇದೇ ಮೊದಲ ಬಾರಿ ತುಮಕೂರು ನಗರಕ್ಕೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಶೋಭಾಯಾತ್ರೆಗೆ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು ಚಾಲನೆ ನೀಡಿದರು. ಶೋಭಯಾತ್ರೆಯು ಎಂ.ಜಿ. ರಸ್ತೆ, ಗುಂಚಿ ಚೌಕ, ಚರ್ಚ್ ಸರ್ಕಲ್, ಮಂಡಿಪೇಟೆ ಸರ್ಕಲ್ ಮಾಗವಾಗಿ ಪಾರ್ಶ್ವನಾಥ ದಿಗಂಬರ ಜಿನಮಂದಿರ ತಲುಪಿತು.
ಜಿನಮಂದಿರದಲ್ಲಿ ಶ್ರೀ ಪಾರ್ಶ್ವನಾಥ ಸ್ವಾಮಿಗೆ ಪಂಚಾಮೃತ ಅಭಿಷೇಕ ಮತ್ತು ವಿಶೇಷ ಪೂಜಾದಿಗಳನ್ನು ಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ನೆರವೇರಿಸಲಾಯಿತು. ಶೋಭಾಯಾತ್ರೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರ ಬಸ್ತಿ ಮಠದ ಶ್ರೀ ಲಕ್ಷ್ಮಿಸೇನ ಭಟ್ಟಾರಕ ಸ್ವಾಮೀಜಿ, ಗುಜರಾತ್ ರಾಜ್ಯದ ಗಿರಿನಾರ್ ಕ್ಷೇತ್ರವು ನೇಮಿನಾಥ ಸ್ವಾಮಿಯ ಮೋಕ್ಷ ಸ್ಥಳವಾಗಿದ್ದು, ಅಲ್ಲಿ ಜೈನ ಧರ್ಮದವರಿಗೆ ಪೂಜೆಗೆ ಅವಕಾಶ ಕಲ್ಪಿಸಿಕೊಡಬೇಕು.
ಕಳೆದುಹೋದ ಶ್ರದ್ಧಾ ಕೇಂದ್ರವನ್ನು ಮರಳಿ ಜೈನ ಧರ್ಮದವರಿಗೆ ದೊರಕಿಸಿಕೊಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇವೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.ತುಮಕೂರು ನಗರದ ಜೈನ ಭವನದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದ ಸ್ವಾಮೀಜಿ, ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಚೀತಾಗಳ ಸಂತತಿ ಉಳಿಸಿ ಬೆಳೆಸಲು ಆಫ್ರಿಕಾದಿಂದ ತಂದದ್ದನ್ನು ಸ್ವಾಗತಿಸುತ್ತೇವೆ. ಆದರೆ, ದೇಶದಲ್ಲಿ ಜೈನ ಧರ್ಮ ಅಳಿವಿನ ಅಂಚಿನಲ್ಲಿದ್ದು, ಅದನ್ನು ಉಳಿಸಿ ಬೆಳೆಸಲು ಜೈನ ಧರ್ಮಕ್ಕೆ ಏಕೆ ಅನುದಾನ ಮೀಸಲಿಡುವಲ್ಲಿ ಮುಂದಾಗುತ್ತಿಲ್ಲ? ಯಾಕೆ ವಿಫಲರಾಗುತ್ತಿದ್ದೀರಿ ಎಂದು ಪ್ರಶ್ನಿಸಿದರು.
ಜೈನ ಧರ್ಮದ ಶ್ರೀ ನೇಮಿನಾಥ ತೀರ್ಥಂಕರರು ಮೋಕ್ಷಕ್ಕೆ ಹೋಗಿರುವ ಸ್ಥಳವಾಗಿರುವ ಗಿರಿನಾರ್ ಪರ್ವತದಲ್ಲಿ ಪೂಜಾ ವಿಧಿವಿಧಾನಕ್ಕೆ ವಿರೋಧಿಸಲಾಗುತ್ತಿದೆ. ಅಲ್ಲಿಗೆ ಹೋಗುವ ಜೈನರ ಮೇಲೆ ಹಲ್ಲೆ ನಡೆಸಲಾಗುತ್ತಿದ್ದು, ಕೇಂದ್ರ ಸರ್ಕಾರ ಮಧ್ಯೆ ಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕೆಂದು ಅವರು ಎಂದು ಒತ್ತಾಯಿಸಿದರು.ಸಾನಿಧ್ಯ ವಹಿಸಿದ್ದ ಅಭಿನವ ಚಾರುಕೀರ್ತಿ ಸ್ವಾಮೀಜಿ ಮಾತನಾಡಿ, ಶ್ರಾವಕರ ಮೂಲ ಕರ್ತವ್ಯ ಸ್ವಾಧ್ಯಾಯ. ಇದೊಂದು ರೀತಿ ತಪಸ್ಸು ಇದ್ದಂತೆ.
ಆತ್ಮಶುದ್ಧಿಗೆ ಸ್ವಾಧ್ಯಾಯ ಮಾಡಬೇಕಿದೆ. ಲಕ್ಷ್ಮೀಸೇನಾ ಭಟ್ಟಾರಕ ಸ್ವಾಮೀಜಿ ಜಿಲ್ಲೆಯ ಜೈನ ಸಮುದಾಯಕ್ಕೆ ಧಾರ್ಮಿಕ ಸಂಸ್ಕಾರ ನೀಡಿದ್ದಾರೆ. ಅವರಷ್ಟೇ ಅಲ್ಲದೇ ರಾಮಚಂದ್ರರು ಸಹ ಸಂಸ್ಕಾರವನ್ನು ಪಸರಿಸಿದ್ದಾರೆ. ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರ ತ್ರಿವಿಧ ದಾಸೋಹ ಪರಿಕಲ್ಪನೆ ಹಾಗೂ ಅವರ ಪುಣ್ಯ ಸೇವೆಯಿಂದ ಜಿಲ್ಲೆ ಸುಸಂಸ್ಕೃತವಾಗಿದೆ ಎಂದರು.ಜೈನ ಧರ್ಮ ದೇಶಕ್ಕೆ ಅಪಾರ ಕೊಡುಗೆ ನೀಡಿದೆ.
ಅತಿ ಪ್ರಾಚೀನ ಇತಿಹಾಸ ಹೊಂದಿದ ಜೈನ ಧರ್ಮ, ಕೇವಲ ಧಾರ್ಮಿಕ ಅಲ್ಲದೆ ಸಾಮಾಜಿಕ ಇತಿಹಾಸ ಕೂಡ ಹೊಂದಿದೆ. ಇಷ್ಟೊಂದು ಕೊಡುಗೆ ನೀಡಿರುವ ಜೈನ ಧರ್ಮಕ್ಕೆ ಸರ್ಕಾರ ನೆರವು ನೀಡಬೇಕು. ಅತಿ ಅಲ್ಪ ಸಂಖ್ಯಾತರಾಗಿರುವ ಜೈನರಿಗೆ ನ್ಯಾಯ ಒದಗಿಸಿಕೊಡಬೇಕು. ನಿತ್ಯ ಸಾವಿರಾರು ಜೈನರು ದರ್ಶನಕ್ಕೆ ತೆರಳುತ್ತಿದ್ದು, ಅವರೆಲ್ಲರಿಗೂ ರಕ್ಷಣೆ ನೀಡಬೇಕಿದೆ ಎಂದು ಒತ್ತಾಯಿಸಿದರು.
ಇದೆ ವೇಳೆ 90 ವರ್ಷ ಮೇಲ್ಪಟ್ಟ ಹಿರಿಯ ಶ್ರಾವಕರನ್ನು ಗೌರವಿಸಲಾಯಿತು. ಜಿತೆಗೆ ಸ್ವಾಮೀಜಿಧ್ವಯರಿಗೆ ಪಾದಪೂಜೆ ಕೂಡ ಮಾಡಲಾಯಿತು.ಅತಿಥಿಯಾಗಿ ಭಾಗವಹಿಸಿದ್ದ ಶಾಸಕ ಜ್ಯೋತಿ ಗಣೇಶ್ ಮತ್ತು ಸಂಚಾರಿ ಠಾಣೆ ಇನ್ಸ್ಪೆಕ್ಟರ್ ಗುರುನಾಥ್ ಮಾತನಾಡಿ, ಸಮಾಜದಲ್ಲಿ ಶಾಂತಿ ಕಾಪಾಡಲು ಜೈನ ಧರ್ಮದ ಆಚಾರ ವಿಚಾರಗಳು ಮಾದರಿಯಾಗಿವೆ. ಅದನ್ನು ನಾವೆಲ್ಲರೂ ಪಾಲಿಸಬೇಕಿದೆ ಎಂದು ಹೇಳಿದರು.