ಮೈಸೂರು : ನಾಡಿನ ಅಧಿದೇವತೆ ಚಾಮುಂಡೇಶ್ವರಿಗೆ ಚಿನ್ನದ ರಥ ನಿರ್ಮಿಸುವ ಸಂಬಂಧ ಪರಿಶೀಲಿಸಿ, ಪ್ರಸ್ತಾವನೆ ಸಲ್ಲಿಸುವಂತೆ ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ನಾಡದೇವಿಗೆ ಚಿನ್ನದ ರಥ ನಿರ್ಮಿಸುವಂತೆ ಕೋರಿ ಎಂಎಲ್ಸಿ ದಿನೇಶ್ ಗೂಳಿಗೌಡ ಸಿಎಂಗೆ ಪತ್ರ ಬರೆದಿದ್ದರು.
ಚಾಮುಂಡೇಶ್ವರಿ ದೇವಿ ಕನ್ನಡ ನಾಡಿನ ಅಸ್ಮಿತೆಯಾಗಿದ್ದು, ಕನ್ನಡಿಗರ ಧಾರ್ಮಿಕ ಪ್ರತಿನಿಧಿಯಾಗಿದ್ದಾರೆ.
ಮೈಸೂರಿನ ಚಾಮುಂಡಿ ಬೆಟ್ಟ, ದೇವಸ್ಥಾನ, ದೇವಿಗೆ ಪೌರಾಣಿಕ, ಐತಿಹಾಸಿಕ ಹಿನ್ನೆಲೆ ಇದೆ. ಅದಕ್ಕಾಗಿಯೇ ಮೈಸೂರಿನಲ್ಲಿ ನಡೆಯುವ ದಸರಾವನ್ನು ನಾಡಹಬ್ಬ ಎಂದು ಕರೆಯಲಾಗುತ್ತದೆ.
ಈ ನಾಡದೇವಿಯನ್ನು ಚಿನ್ನದ ರಥದಲ್ಲಿ ಕೂರಿಸಿ ಮೆರೆಸಬೇಕು ಎಂಬುದು ಭಕ್ತಕೋಟಿಯ ಬೇಡಿಕೆಯಾಗಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯನವರನ್ನು ಖುದ್ದಾಗಿ ಭೇಟಿಯಾಗಿ ಬೇಡಿಕೆ ಸಲ್ಲಿಸಿದ್ದು ಕೆಲವು ಸಲಹೆ ನೀಡಲಾಗಿದೆ. ಚಿನ್ನದ ರಥ ನಿರ್ಮಿಸಲು ಬೇಕಿರುವ ಅಂದಾಜು ವೆಚ್ಚದ ಪ್ರಸ್ತಾವನೆಯನ್ನು ಸರ್ಕಾರ ತಯಾರಿಸಬೇಕು.
ಈ ಸಂಬಂಧ ದೇವಸ್ಥಾನದಲ್ಲಿ ಈ ಉದ್ದೇಶಕ್ಕೋಸ್ಕರ ಪ್ರತ್ಯೇಕ ಹುಂಡಿಯೊಂದನ್ನು ಇಟ್ಟು, ಭಕ್ತರಿಗೆ ಅದರಲ್ಲಿ ಹಣ ಹಾಗೂ ಚಿನ್ನವನ್ನು ಹಾಕಲು ಅವಕಾಶ ನೀಡಬೇಕು. ಸಂಗ್ರಹಿತ ಕಾಣಿಕೆ ಹಣಕ್ಕಿಂತ ಹೆಚ್ಚಿಗೆ ಬೇಕಾಗುವ ಹಣವನ್ನು ಸರ್ಕಾರ ಭರಿಸಬೇಕು ಎಂದು ಮನವಿ ನೀಡಿದ್ದೆ ಎಂದು ದಿನೇಶ್ ಗೂಳಿಗೌಡ ತಿಳಿಸಿದ್ದಾರೆ.
1827ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರು ‘ಸಿಂಹ ವಾಹನ’ ರಥವನ್ನು ಮರದಲ್ಲಿ ನಿರ್ಮಿಸಿ ಕೊಡುಗೆ ನೀಡಿದ್ದರು. ‘ಸಿಂಹ ವಾಹನ’ವನ್ನು ರಥೋತ್ಸವ ಸಂದರ್ಭದಲ್ಲಿ ಬಳಸಲಾಗುತ್ತಿದ್ದು, ಅದರಲ್ಲಿ ದೇವಿಯ ಉತ್ಸವ ಮೂರ್ತಿಯನ್ನಿಟ್ಟು ರಥ ಎಳೆಯಲಾಗುತ್ತದೆ.
ಮುಮ್ಮಡಿ ಕೃಷ್ಣರಾಜ ಒಡೆಯರೇ ಮೂಲ ಮೂರ್ತಿಗೆ ಅನುಗುಣವಾಗಿ ಉತ್ಸವ ಮೂರ್ತಿಯನ್ನೂ ತಯಾರಿಸಿ ಶೈವಾಗಮದಲ್ಲಿ ನುರಿತ ದೀಕ್ಷಿತರನ್ನು ಕಂಚಿ ಕ್ಷೇತ್ರದಿಂದ ಕರೆ ತಂದು ಆಗಮೋಕ್ತವಾಗಿ ಪೂಜೆ ಸಲ್ಲಿಸುವಂತೆ ಮಾಡಿದರು ಎನ್ನುತ್ತದೆ ಇತಿಹಾಸ.
1928ರಿಂದ ರಥೋತ್ಸವ ನಡೆಯುತ್ತ ಬಂತು ಎಂಬ ಇತಿಹಾಸವಿದೆ. ಆಶ್ವಯುಜ ಶುಕ್ಲ ಪೂರ್ಣಿಮೆಯ ಸಂದರ್ಭದಲ್ಲಿ ಪ್ರತಿ ವರ್ಷ ದೇವಿಯ ರಥಾರೋಹಣ ಮಾಡಿ, ರಥೋತ್ಸವ ನಡೆಸಲಾಗುತ್ತದೆ. ಈ ಸಂದರ್ಭದಲ್ಲಿ ಮಂಟಪೋತ್ಸವ, ಸಿಂಹವಾಹನೋತ್ಸವ, ಹಂಸವಾಹನೋತ್ಸವ ಮುಂತಾದ ಕಾರ್ಯಕ್ರಮಗಳು ಶಾಸ್ತ್ರೋಕ್ತವಾಗಿ ಹಾಗೂ ಬಹು ವಿಜೃಂಭಣೆಯಿಂದ ದೇವಸ್ಥಾನದ ಆವರಣದಲ್ಲಿ ಜರುಗುತ್ತವೆ ಎಂದು ಉಲ್ಲೇಖಿಸಿದ್ದಾರೆ.
ನಮ್ಮ ಶರೀರದ ಒಳಗಡೆ ಹೇಗೆ ಪರಮಾತ್ಮನಿರುತ್ತಾನೋ ಹಾಗೆಯೇ 24 ತತ್ವಗಳಿರುವ ರಥದಲ್ಲೂ ಪರಮಾತ್ಮ ನೆಲೆಸಿರುತ್ತಾನೆ ಎಂಬುದು ಹಿಂದೂ ಶ್ರದ್ಧಾಳುಗಳ ನಂಬಿಕೆ. 1982 ಕೊಯಮುತ್ತೂರಿನ ಭಕ್ತರು ಈಗಿನ ಮರದ ರಥವನ್ನು ಮಾಡಿಸಿದರು ಎನ್ನಲಾಗುತ್ತದೆ.
ಹಾಲಿ ರಥವೂ ಶಿಥಿಲವಾಗುತ್ತಾ ಬಂದಿವೆ. ಹಾಗಾಗಿ ಹೊಸ ಚಿನ್ನದ ರಥ ನಿರ್ಮಿಸಿ ಚಾಮುಂಡಿ ದೇವಿಯ ರಥೋತ್ಸವ ಮಾಡಬೇಕು ಎಂಬುದು ಭಕ್ತರ ಸಂಕಲ್ಪ. ದೇವಿಗೆ ಹೊಸ ಚಿನ್ನದ ರಥ ನಿರ್ಮಿಸುವ ಪ್ರಸ್ತಾವ ಈ ಹಿಂದೆಯೇ ಬಂದಿತ್ತು. ಅದಕ್ಕೆ ಸುಮಾರು 100 ಕೋಟಿ ರೂ. ಬೇಕಾಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ವಿವಿಧ ಕಾರಣಗಳಿಂದ ಅದು ಈಡೇರಿಲ್ಲ.
ಚಿನ್ನದ ರಥ ಮಾಡಲು ಸರ್ಕಾರ ಹಣ ಹಣದ ಅವಶ್ಯಕತೆ ಜೊತೆಗೆ ಭಕ್ತಾದಿಗಳು ದುಡ್ಡು ಮತ್ತು ಚಿನ್ನವನ್ನು ಹಾಕುತ್ತಾರೆ. ಅದಕ್ಕಾಗಿ ಹುಂಡಿಗಳನ್ನು ಪ್ರತಿಷ್ಠಾಪಿಸಬೇಕು. ಮುಂದಿನ ದಸರಾದ ಒಳಗಡೆ ರಥ ನಿರ್ಮಿಸಿ ದೇವಸ್ಥಾನದ ಒಳಗಡೆ ದೇವಿಯನ್ನು ಮೆರವಣಿಗೆ ಮಾಡಬೇಕು ಎಂಬುದು ಭಕ್ತರ ಬೇಡಿಕೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.