ಫೆಂಗಲ್ ಚಂಡಮಾರುತದಿಂದ ತಮಿಳುನಾಡಿನ ಹಲವೆಡೆ ಭಾರೀ ಮಳೆಯಾಗಿದ್ದು, ತಿರುವಣ್ಣಾಮಲೈ, ವಿಲ್ಲುಪುರಂ, ಕೃಷ್ಣಗಿರಿ ಮತ್ತು ಧರ್ಮಪುರಿ ಜಿಲ್ಲೆಗಳು ಪ್ರವಾಹದಿಂದ ತತ್ತರಿಸಿವೆ. ತಮಿಳುನಾಡು ಮತ್ತು ಪುದುಚೇರಿಯಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ.
ನಿರಂತರ ಮಳೆಯು ವಿನಾಶಕಾರಿ ಬಂಡೆಗಳ ಕುಸಿತಕ್ಕೆ ಕಾರಣವಾಯ್ತು. ಕೆಸರು ನೀರು ಮಿಶ್ರಣಗೊಂಡು ಬಂದ ವೇಗಕ್ಕೆ ಸಿಕ್ಕ ಸಿಕ್ಕಿದ್ದೆನ್ನೆಲ್ಲಾ ನುಂಗಿ ಬೆಚ್ಚಿಬೀಳುವಂತೆ ಮಾಡ್ತು.. ಭಯಬೀತರಾಗಿ ಮನೆಯಿಂದ ಹೊರ ಬಂದ ಮಹಿಳೆ ಗುಡ್ಡದ ಕಡೆಗೆ ನೋಡಿ.. ಕಾಪಾಡೋ ಭಗವಂತ ಅಂತಾ ಕೈ ಮುಗಿದು ಬೇಡಿಕೊಂಡಿದ್ದಾರೆ.
ಫೆಂಗಲ್ ಸೈಕ್ಲೋನ್ ಆರ್ಭಟಕ್ಕೆ ತಮಿಳುನಾಡು ತತ್ತರಿಸಿದೆ. ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ಭೂ ಕುಸಿತ ಒಂದೇ ಕುಟುಂಬದ ಏಳು ಜನರನ್ನ ಕೊಂದು ಮುಗಿಸಿದೆ.
ಇನ್ನೂ ಸಹ ರಕ್ಷಣಾ ಕಾರ್ಯಾಚರಣೆ ಸಾಗ್ತಿದೆ. ಅರುಣಾಚಲೇಶ್ವರ ದೇವಸ್ಥಾನದ ಬಳಿಯ ಗುಡ್ಡದಿಂದ ಮನೆಗಳ ಮೇಲೆ ಬಂಡೆಗಳು ಉರುಳಿಬಿದ್ದಿದ್ದ ಭಯಾನಕ ಕ್ಷಣದ ದೃಶ್ಯಗಳು ಸಿಸಿವಿಟಿಯಲ್ಲಿ ಸೆರೆ.
ಮಣ್ಣಿನಡಿ ಸಿಲುಕಿರುವ ಇತರರಿಗಾಗಿ ಕಾರ್ಯಾಚರಣೆ ತೀವ್ರಗೊಳಿಸಿದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸಿಬ್ಬಂದಿ, ಕಮಾಂಡೋ, ತಮಿಳುನಾಡಿನ ಅಗ್ನಿ ಶಾಮಕ ದಳದ ಕಾರ್ಯಾಚರಣೆ ಮುಂದುವರೆದಿದೆ.
ಬೃಹತ್ ಗಾತ್ರದ ಕಲ್ಲುಗಳು ಇರುವುದರಿಂದ ಸಂತ್ರಸ್ತರ ಪತ್ತೆ ಹಚ್ಚಲು ಸ್ಕ್ಯಾನಿಂಗ್ ಯಂತ್ರಕ್ಕೆ ಕಷ್ಟವಾಗುತ್ತಿದೆ ಎಂದು ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
ಇನ್ನೂ ಗುಡ್ಡ ಕುಸಿತದ ಸ್ಥಳಕ್ಕೆ ಸಚಿವ ಪೊನ್ಮುಡಿ ಭೇಟಿ ನೀಡಿದ್ದ ವೇಳೆ.. ಕೆಲವರು ಕೆಸರೆರೆಚಿದ ಘಟನೆ ನಡೆದಿದೆ. ಇದಕ್ಕೆ ವಿಪಕ್ಷಗಳೇ ಕಾರಣ ಎಂದು ಸಚಿವ ಪೊನ್ಮುಡಿ ಪ್ರತಿಕ್ರಿಯೆ ನೀಡಿದ್ದಾರೆ.
ತಿರುವಣ್ಣಾಮಲೈನ ಸಂತ್ರಸ್ತರ ಸಂಬಂಧಿಕರನ್ನ ಚಿನ್ನಮ್ಮ ಶಶಿಕಲಾ ಭೇಟಿ ಮಾಡಿದ್ದಾರೆ. ಸಾಂತ್ವನ ಹೇಳಲು ಹೋದಾಗ ಸಂತ್ರಸ್ತರ ಅಳಲನ್ನ ಕಂಡು ಅವರು ಕಣ್ಣೀರಿಟ್ರು.
ವಿಲ್ಲುಪುರಂನ ಆಯುರ್ ಅಕಾರಂ ಪ್ರವಾಹ ಪರಿಹಾರ ಕಾರ್ಯಕ್ಕೆ ವೇಗ ನೀಡುವಂತೆ ಆಗ್ರಹಿಸಿ ಗ್ರಾಮಸ್ಥರು ನಡುರಸ್ತೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹಲವು ಗಂಟೆಗಳ ಕಾಲ ಚಲಿಸದೆ ವಾಹನಗಳು ನಡುರಸ್ತೆಯಲ್ಲಿಯೇ ನಿಂತಿದ್ದವು.
ಫೆಂಗಲ್ ಚಂಡಮಾರುತ ಸೃಷ್ಟಿಸಿರೋ ಅನಾಹುತದಿಂದಾಗಿ ತಮಿಳುನಾಡಿನ ರಾಜಧಾನಿ ಚೆನ್ನೈ ತತ್ತರಿಸಿದೆ. ಅಪಾರ್ಟ್ಮೆಂಟ್ಗಳು ಜಲಾವೃತವಾಗಿದೆ.. ಹಾಗೆ ಜಲಾವೃತವಾದ ಅಪಾರ್ಟ್ಮೆಂಟ್ ಮುಂದೆ ಇರೋ ಜಾಗದಲ್ಲಿ ನೀರು ನಿಂತು ಹೊರ ಬಾರಲಾರದೇ ಜನ ಸಂಕಷ್ಟ ಅನುಭವಿಸ್ತಿದ್ದಾರೆ. ಆದರೆ ಇಲ್ಲಿ ಅಜ್ಜನೊಬ್ಬ ತನ್ನ ಮೊಮ್ಮಕ್ಕಳ ಜೊತೆ ನೀರನಲ್ಲಿ ಹೇಗೆ ಆಟವಾಡಿದ್ದಾರೆ.
ಕತ್ತಿನ ಆಳದ ಪ್ರವಾಹದಲ್ಲಿ ಸಿಲುಕಿದ್ದ ಶಿಶುವನ್ನು ಯುವಕನೊಬ್ಬ ಬುಟ್ಟಿಯಲ್ಲಿ ಹೊತ್ತು ತಂದ ರಕ್ಷಿಸಿದ ಘಟನೆ ತಿರುಕೋವಿಲೂರ್ನಲ್ಲಿ ಸೆರೆಯಾಗಿದೆ.
ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಸರ್ಕಾರ ಭೂಕುಸಿತದಿಂದ ಮೃತಪಟ್ಟ ಕುಟುಂಬದವರಿಗೆ ₹ 5 ಲಕ್ಷ ಪರಿಹಾರ ಮತ್ತು ವಿಲ್ಲುಪುರಂ, ಕಡಲೂರು ಮತ್ತು ಕಲ್ಲಕುರಿಚಿ ಜಿಲ್ಲೆಗಳಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರತಿ ಕುಟುಂಬಕ್ಕೆ ₹ 2,000 ಪರಿಹಾರವನ್ನ ಘೋಷಿಸಿದೆ.
ಇದರ ಜೊತೆಗೆ ಕೇಂದ್ರವೂ ಕೂಡ ತಾನು ನೆರವು ನೀಡೋದಾಗಿ ಭರವಸೆ ಕೊಟ್ಟಿದೆ. ಫೆಂಗಲ್ ಅಬ್ಬರ ಕಡಿಮೆಯಾದ್ರೂ ಕೂಡ, ಅದು ಸೃಷ್ಟಿಸಿ ಹೋಗಿರುವ ಅವಾಂತರಗಳು ನಿಜಕ್ಕೂ ಬೆಚ್ಚಿಬೀಳಿಸುವಂತಿವೆ.
ಸೇಲಂ ಜಿಲ್ಲೆಯ ಓಮಲೂರ್ ಭಾಗದ ಸರಬಂಗಾ ನದಿಯು ಉಕ್ಕಿ ಹರಿದಿದ್ದು, ಜನರು ಪ್ರವಾಹದಲ್ಲಿ ಸಿಲುಕಿದ್ರು.. ಸಂತ್ರಸ್ತರನ್ನ ಕ್ರೇನ್ ಮೂಲಕ ಅಗ್ನಿಶಾಮಕ ದಳದಿಂದ ರಕ್ಷಣೆ ಮಾಡಿದ್ದಾರೆ.