ಕೊನೆಗೂ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಯಾರು ಆಗ್ತಾರೆ ಅನ್ನೋ ಕುತೂಹಲಗಳಿಗೆ ತೆರೆ ಬಿದ್ದಿದೆ. ದೇವೇಂದ್ರ ಫಡ್ನವಿಸ್ ಅವರನ್ನು ಬಿಜೆಪಿ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಮಾಡಲಾಗಿದೆ. ಅಂತೆಯೇ ಫಡ್ನವಿಸ್ ನಾಳೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ.
ಶಿವಸೇನೆ ಮುಖ್ಯಸ್ಥ ಏಕನಾಥ್ ಶಿಂಧೆ, ಎನ್ಸಿಪಿ ಅಜಿತ್ ಪವಾರ್ ಅವರು ಉಪಮುಖ್ಯಮಂತ್ರಿಯಾಗಲಿದ್ದಾರೆ. ಫಡ್ನವಿಸ್, ಶಿಂಧೆ, ಪವಾರ್ ಅವರು ನಾಳೆ ಸಂಜೆ ಐದು ಗಂಟೆಗೆ ಮುಂಬೈನಲ್ಲಿ ಪ್ರತಿಜ್ಞಾವಿಧಿ ಸ್ವೀಕಾರ ಮಾಡಲಿದ್ದಾರೆ. ಪ್ರಮಾಣವಚನ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿ ಹಲವು ಗಣ್ಯರು ಭಾಗಿಯಾಗಲಿದ್ದಾರೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಫಲಿತಾಂಶ ಬಂದು 11 ದಿನಗಳಾದರೂ ಕೂಡ ಭರ್ಜರಿ ಬಹುಮತ ಪಡೆದ ಮಹಾಯುತಿ ಪಡೆಯ ಸರ್ಕಾರ ರಚನೆ ಆಗಿರಲಿಲ್ಲ. ಮುಖ್ಯಮಂತ್ರಿ ವಿಚಾರದಲ್ಲಿ ಶಿಂಧೆ ಹಾಗೂ ಫಡ್ನವಿಸ್ ನಡುವೆ ನೇರ ಪೈಪೋಟಿ ಏರ್ಪಟ್ಟಿತ್ತು.
ಬದಲಾದ ರಾಜಕೀಯ ಸನ್ನಿವೇಶದಲ್ಲಿ ಇಂದು ಫಡ್ನವಿಸ್ ಅವರನ್ನು ಶಿಂಧೆ ಭೇಟಿ ಆಗಿದ್ದರು. ಅದಾದ ನಂತರ ಬಿಜೆಪಿಯ ಶಾಸಕಾಂಗ ಪಕ್ಷದ ಸಭೆ ನಡೆಯಿತು. ಈ ಸಭೆಯಲ್ಲಿ ಫಡ್ನವಿಸ್ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಮಾಡಲಾಗಿದೆ.