ಮೈಸೂರು: ಅಬಕಾರಿ ಇಲಾಖೆಯಲ್ಲಿ ಒಂದೇ ಒಂದು ರೂಪಾಯಿ ಭ್ರಷ್ಟಾಚಾರ ಆಗಿಲ್ಲ. ಭ್ರಷ್ಟಾಚಾರ ಆಗಿದ್ದರೆ ನಾನು ರಾಜಕೀಯ ಬಿಡುತ್ತೇನೆ. ಪ್ರಧಾನಿ ಮೋದಿ ಸುಳ್ಳು ಆರೋಪ ಮಾಡಿದ್ದಾರೆ. ಅವರು ನಮ್ಮ ವಿರುದ್ಧದ ಆರೋಪ ಸಾಬೀತುಪಡಿಸದಿದ್ದರೆ ರಾಜೀನಾಮೆ ನೀಡುತ್ತಾರೆಯೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿಗೆ ಕರ್ನಾಟಕ ಮತ್ತು ಸಿದ್ದರಾಮಯ್ಯ ಟಾರ್ಗೆಟ್. ಕರ್ನಾಟಕ ಅತಿ ದೊಡ್ಡ ರಾಜ್ಯ. ಇಲ್ಲಿ ನಾವು 136 ಸ್ಥಾನ ಗೆದ್ದಿದ್ದೇವೆ. ಹೀಗಾಗಿ ನಮ್ಮನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ. ನಮ್ಮಲ್ಲಿ ಯಾವ ಭ್ರಷ್ಟಾಚಾರವೂ ಇಲ್ಲ. ಭ್ರಷ್ಟಾಚಾರ ನಡೆಯುವುದಕ್ಕೂ ಬಿಡುವುದಿಲ್ಲ.
ಬಿಜೆಪಿಯವರು ಭ್ರಷ್ಟಾಚಾರ ನಡೆಯುತ್ತಿದೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದರು.
ಬಿಜೆಪಿಯವರ ಮೇಲೆ ಅನೇಕ ಆರೋಪಗಳಿವೆ. ಕೊರೊನಾ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಮಾಡಿರುವ ಅವ್ಯವಹಾರಗಳ ಬಗ್ಗೆ ನಿವೃತ್ತ ನ್ಯಾಯಮೂರ್ತಿ ಡಿ.ಕುನ್ಹಾ ಆಯೋಗ ವರದಿ ಸಲ್ಲಿಸಿದ್ದು, 330 ರೂಪಾಯಿಗೆ ಸಿಗುವ ಪಿಪಿಇ ಕಿಟ್ ನ್ನು 2140 ರೂಪಾಯಿಗಳಿಗೆ ಖರೀದಿ ಮಾಡಿದ್ದಾರೆ. ಇದಕ್ಕೆ ನರೇಂದ್ರ ಮೋದಿ ಏನು ಹೇಳುತ್ತಾರೆ? ಭ್ರಷ್ಟಾಚಾರ ಮಾಡಿರುವುದು ಅವರ ಸರ್ಕಾರ.
ನಮ್ಮ ಸರ್ಕಾರದಲ್ಲಿ ಯಾವುದೇ ಭ್ರಷ್ಟಾಚಾರವಾಗಿಲ್ಲ. ಭ್ರಷ್ಟಾಚಾರ ಮಾಡುವುದೂ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ರು.
ಇ.ಡಿ. ತನಿಖೆ ನಡೆಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಇ.ಡಿ. ಯವರು ಅವರ ಕೆಲಸ ಮಾಡುತ್ತಿದ್ದಾರೆ.
ನಾನು ಆ ಬಗ್ಗೆ ಪ್ರತಿಕ್ರಿಯೆ ಕೊಡುವುದಿಲ್ಲ. ಅವರು ಯಾರನ್ನಾದರೂ ಕರೆಸಲಿ, ವಿಚಾರಣೆ ನಡೆಸಲಿ. ಅದು ಅವರ ತನಿಖಾ ಕ್ರಮ. ಇ.ಡಿ. ಲೋಕಾಯುಕ್ತದ ತನಿಖೆಗಳು ಸುಳ್ಳು ಕೇಸಿನ ಮೇಲೆ ನಡೆಯುತ್ತಿವೆ. ಅದರ ಬಗ್ಗೆ ನಾನೇಕೆ ಪ್ರತಿಕ್ರಿಯೆ ಕೊಡಲಿ ಎಂದರು.
ಸಚಿವ ಸಂಪುಟ ಪುನಾರಚನೆ ಏನೂ ಇಲ್ಲ. ಬಿ.ನಾಗೇಂದ್ರ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವ ಬಗ್ಗೆ ಕೇಳಿದ್ದಾರೆ. ಉಪಚುನಾವಣೆ ಬಳಿಕ ನೋಡೋಣ ಎಂದು ಹೇಳಿದ್ದೇನೆ. ನಿನ್ನೆ ಹೆಚ್.ಡಿ. ಕೋಟೆ ಕಾರ್ಯಕ್ರಮದಲ್ಲಿ ಹೇಳಿದ್ದೇನೆ. ಅಂತಹ ಪ್ರಸ್ತಾವ ಇಲ್ಲ ಎಂದರು.
ಕುಮಾರಸ್ವಾಮಿ ಅವರನ್ನು ಸಚಿವ ಜಮೀರ್ ಅಹ್ಮದ್ ಅವರು ಕರಿಯಣ್ಣ ಎಂದು ಕರೆದಿರುವ ಬಗ್ಗೆ ಮಾತನಾಡಿ, ಜಮೀರ್ ಮತ್ತು ಕುಮಾರಸ್ವಾಮಿ ಆತ್ಮೀಯರು. ಆ ವಿಚಾರವಾಗಿ ಜಮೀರ್ ಈಗಾಗಲೇ ಸ್ಪಷ್ಟೀಕರಣ ಕೊಟ್ಟಿದ್ದಾರೆ. ಇದೆಲ್ಲವೂ ಉಪಚುನಾವಣೆಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೇಳಿದರು.
ಬಂಡೀಪುರದಲ್ಲಿ ರಾತ್ರಿ ವಾಹನಗಳ ಸಂಚಾರ ನಿಷೇಧ ತೆಗೆಯುವ ವಿಚಾರವಾಗಿ ಪ್ರಸ್ತಾವವಿಲ್ಲ. ಮಾತುಕತೆಯೂ ಆಗಿಲ್ಲ. ಡಿಸಿಎಂ ಡಿ.ಕೆ. ಶಿವಕುಮಾರ್ ಯಾವ ಅರ್ಥದಲ್ಲಿ ಆ ಬಗ್ಗೆ ಹೇಳಿಕೆ ನೀಡಿದ್ದಾರೆಯೋ ಗೊತ್ತಿಲ್ಲ, ಹೆಚ್ಚಿನ ಮಾಹಿತಿ ಅವರನ್ನೇ ಕೇಳಿ ಎಂದರು.