ಬೆಂಗಳೂರು: ಘನ ತ್ಯಾಜ್ಯ ನಿರ್ವಹಣೆ ಹಾಗೂ ಸಂಸ್ಕರಣೆ ವ್ಯವಸ್ಥೆ ಹೊಂದಿರದ ಅಪಾರ್ಟ್‌ಮೆಂಟ್, ಹೋಟೆಲ್, ಸಮುದಾಯ ಭವನಗಳು ಹಾಗೂ 5 ಸಾವಿರ ಚದರಡಿಯಲ್ಲಿ ನಿರ್ಮಿತ ಕಟ್ಟಡಗಳಲ್ಲಿಉತ್ಪಾದನೆಯಾಗುವ ಪ್ರತಿ ಕೆಜಿ ತ್ಯಾಜ್ಯ ನಿರ್ವಹಣೆಗೆ 12 ರೂ. ಬಳಕೆದಾರರ ಶುಲ್ಕ ವಿಧಿಸಲು ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ಲಿಮಿಟೆಡ್(ಬಿಎಸ್‌ಡಬ್ಲ್ಯುಎಂಎಲ್) ಮುಂದಾಗಿದೆ.
ಪ್ರತಿದಿನ 100 ಕೆಜಿಗಿಂತ ಹೆಚ್ಚು ತ್ಯಾಜ್ಯ ಉತ್ಪಾದಿಸುವ ಸುಮಾರು 2000ಕ್ಕೂ ಹೆಚ್ಚು ಹೋಟೆಲ್, ಅಪಾರ್ಟ್‌ಮೆಂಟ್, ಸಮುದಾಯ ಭವನಗಳಿಗೆ ನೋಟಿಸ್ ನೀಡಿದೆ. ಅಲ್ಲದೆ, ನೋಟಿಸ್ ತಲುಪಿದ ಏಳು ದಿನಗಳೊಳಗೆ ಕಳೆದ ಏಪ್ರಿಲ್‌ನಿಂದ ಈವರೆಗಿನ ಶುಲ್ಕ ಪಾವತಿಸುವಂತೆ ಸೂಚಿಸಿದೆ. ಪ್ರತಿ ಕೆಜಿ ತ್ಯಾಜ್ಯ ನಿರ್ವಹಣೆಗೆ 12 ರೂ. ಬಳಕೆದಾರರ ಶುಲ್ಕ ವಿಧಿಸಲಾಗಿದೆ. ಈ ನಿಯಮಕ್ಕೆ ಈಗಾಗಲೇ ಭಾರೀ ವಿರೋಧವೂ ವ್ಯಕ್ತವಾಗುತ್ತಿದೆ.
ನಗರದಲ್ಲಿ ಘನ ತ್ಯಾಜ್ಯ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದು ಪರಿಸರ ಮಾತ್ರವಲ್ಲದೆ, ಸ್ಥಳೀಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.
ಈ ಸಮಸ್ಯೆಯನ್ನು ಸಮರ್ಪಕವಾಗಿ ನಿರ್ವಹಿಸಲು ಮುಂದಾಗಿರುವ ಬಿಎಸ್‌ಡಬ್ಲ್ಯುಎಂಎಲ್, ಪ್ರತಿದಿನ 100 ಕೆಜಿಗಿಂತ ಹೆಚ್ಚು ತ್ಯಾಜ್ಯ ಉತ್ಪಾದಿಸುವ ಸುಮಾರು 2000ಕ್ಕೂ ಹೆಚ್ಚು ಹೋಟೆಲ್, ಅಪಾರ್ಟ್‌ಮೆಂಟ್, ಸಮುದಾಯ ಭವನಗಳಿಗೆ ನೋಟಿಸ್ ನೀಡಿದೆ. ಅಲ್ಲದೆ, ನೋಟಿಸ್ ತಲುಪಿದ ಏಳು ದಿನಗಳೊಳಗೆ ಕಳೆದ ಏಪ್ರಿಲ್‌ನಿಂದ ಈವರೆಗಿನ ಶುಲ್ಕ ಪಾವತಿಸುವಂತೆ ಸೂಚಿಸಿದೆ.
5 ಸಾವಿರ ಚದರಡಿಯಲ್ಲಿ ನಿರ್ಮಾಣವಾದ ಕಟ್ಟಡಗಳು, 100 ಕೆಜಿಗಿಂತ ಹೆಚ್ಚು ತ್ಯಾಜ್ಯ ಉತ್ಪಾದನೆ ಮಾಡುವ ಅಪಾರ್ಟ್‌ಮೆಂಟ್, ಹೋಟೆಲ್‌ಗಳು, ಸಮುದಾಯ ಭವನಗಳು ತ್ಯಾಜ್ಯ ನಿರ್ವಹಣೆ ಹಾಗೂ ಸಂಸ್ಕರಣೆಗೆ ತಮ್ಮದೇ ಆದ ಕಂಪೋಸ್ಟಿಂಗ್ ವ್ಯವಸ್ಥೆ ಹೊಂದಬೇಕೆಂಬ ನಿಯಮವಿದೆ. ಆದರೂ, ಇದನ್ನು ಯಾರೂ ಪಾಲಿಸುತ್ತಿಲ್ಲ. ಇದನ್ನು ಕಡ್ಡಾಯಗೊಳಿಸುವ ಉದ್ದೇಶದಿಂದ ನೋಟಿಸ್ ನೀಡಿರುವ ಬಿಎಸ್‌ಡಬ್ಲ್ಯುಎಂಎಲ್, ಕಾಂಪೋಸ್ಟಿಂಗ್ ಸೌಲಭ್ಯ ಇಲ್ಲದಿದ್ದರೆ ಪ್ರತಿ ಕೆಜಿ ತ್ಯಾಜ್ಯ ನಿರ್ವಹಣೆಗೆ 12 ರೂ. ಹಾಗೂ ಕಂಪೋಸ್ಟಿಂಗ್ ಸೌಲಭ್ಯ ಹೊಂದಿದವರು 3 ರೂ. ಶುಲ್ಕ ಪಾವತಿಸುವಂತೆ ಸೂಚಿಸಿದೆ.
ಬಿಬಿಎಂಪಿ ಹಿಂದಿನಿಂದಲೂ ಹೋಟೆಲ್‌ಗಳು, ಅಪಾರ್ಟ್‌ಮೆಂಟ್, ಸಮುದಾಯ ಭವನಗಳಲ್ಲಿ ಉತ್ಪಾದನೆಯಾಗುವ ತ್ಯಾಜ್ಯ ನಿರ್ವಹಣೆ ಮಾಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ತ್ಯಾಜ್ಯ ಸಂಗ್ರಹಿಸಿ, ವಿಲೇ ಮಾಡುವ ಖಾಸಗಿಯವರಿಗೆ ತಿಂಗಳಿಗೆ ಇಂತಿಷ್ಟು ಹಣ ನಿಗದಿ ಮಾಡಿ, ಅವರಿಗೆ ಒಪ್ಪಿಸುತ್ತಿದ್ದಾರೆ.
ಆ ತ್ಯಾಜ್ಯವೆಲ್ಲ ಬಿಬಿಎಂಪಿ ವಾಹನ, ತ್ಯಾಜ್ಯ ನಿರ್ವಹಣಾ ಘಟಕಗಳಿಗೆ ಬಂದು ಸೇರುತ್ತಿದೆ. ಇದರಿಂದ ಸಮಸ್ಯೆ ಉಲ್ಭಣಗೊಂಡಿದೆ. ಇದನ್ನು ತಡೆಗಟ್ಟಿ, ಬೃಹತ್ ತ್ಯಾಜ್ಯ ಉತ್ಪಾದಕರು ನೇರವಾಗಿ ಅಥವಾ ಸೇವಾ ಪೂರೈಕೆದಾರರ ಮೂಲಕ ತ್ಯಾಜ್ಯ ಸಂಸ್ಕರಿಸಲು ತಮ್ಮದೇ ಆದ ವ್ಯವಸ್ಥೆ ಹೊಂದಬೇಕೆಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಹರೀಶ್‌ಕುಮಾರ್ ತಿಳಿಸಿದರು.
ಈಗಾಗಲೇ ವಿದ್ಯುತ್, ನೀರಿನ ದರ ಏರಿಕೆಯಾಗಿದ್ದರಿಂದ ಹೋಟೆಲ್‌ಗಳಲ್ಲಿ ವಹಿವಾಟು ಕುಸಿದಿದೆ. ಈ ನಡುವೆ, ಪ್ರತಿ ಕೆಜಿ ತ್ಯಾಜ್ಯ ನಿರ್ವಹಣೆಗೆ 12 ರೂ. ಶುಲ್ಕ ಪಾವತಿಸುವಂತೆ ನೋಟಿಸ್ ನೀಡಿರುವುದು ಆಘಾತ ನೀಡಿದೆ. ಪ್ರಸ್ತುತ, ತ್ಯಾಜ್ಯ ನಿರ್ವಹಣೆಗೆ ಹೋಟೆಲ್‌ಗಳು ತಿಂಗಳಿಗೆ ಸುಮಾರು 5-10 ಸಾವಿರ ರೂ.ಗಳನ್ನು ಪಾವತಿಸುತ್ತಿವೆ.
ಬೃಹತ್ ತ್ಯಾಜ್ಯ ಉತ್ಪಾದಕರು ನೇರ ಅಥವಾ ಸೇವಾ ಪೂರೈಕೆದಾರರ ಮೂಲಕ ತ್ಯಾಜ್ಯ ಸಂಸ್ಕರಿಸಲು ತಮ್ಮದೇ ಆದ ವ್ಯವಸ್ಥೆ ಹೊಂದುವವರೆಗೆ ಬಳಕೆದಾರರ ಶುಲ್ಕ ತಾತ್ಕಾಲಿಕ ಕ್ರಮವಾಗಿದೆ ಎಂದು ಹರೀಶ್‌ಕುಮಾರ್, ವಿಶೇಷ ಆಯುಕ್ತರು, ಬಿಬಿಎಂಪಿ ಹೇಳಿದ್ದಾರೆ.
ಹೋಟೆಲ್‌ಗಳಲ್ಲಿ ಸಂಸ್ಕರಣಾ ವ್ಯವಸ್ಥೆ ಹೊಂದಲು ಸಾಧ್ಯವಿಲ್ಲ. ಬಿಬಿಎಂಪಿ ಭೂಮಿ ನೀಡಿದರೆ, ಆ ಸೌಲಭ್ಯವನ್ನು ಅಳವಡಿಸಿಕೊಂಡು ನಿರ್ವಹಣೆ ಮಾಡಲಾಗುವುದು. ಅದಕ್ಕೆ ಕಾಲಾವಕಾಶ ಬೇಕು.
ಬಿಎಸ್‌ಡಬ್ಲ್ಯುಎಂಎಲ್‌ನ ಬಳಕೆದಾರರ ಶುಲ್ಕ ಕ್ರಮ ಅಸಹಜವಾಗಿದ್ದು, ಹಿಂಪಡೆಯಬೇಕು ಪಿ.ಸಿ.ರಾವ್, ಬೆಂಗಳೂರು ಹೋಟೆಲ್ ಅಸೋಸಿಯೇಷನ್‌ನ ಅಧ್ಯಕ್ಷರು ಹೇಳಿದ್ದಾರೆ.
ತ್ಯಾಜ್ಯ ನಿರ್ವಹಣೆ ಹಾಗೂ ಸಂಸ್ಕರಣೆಗೆ ದುಬಾರಿ ಶುಲ್ಕ ವಸೂಲಿ ಮಾಡಲು ಮುಂದಾಗಿರುವ ಬಿಎಸ್‌ಡಬ್ಲ್ಯುಎಂಎಲ್ ಕ್ರಮ ಖಂಡನೀಯ. ಚರ್ಚೆ, ಆಕ್ಷೇಪಣೆಗೆ ಅವಕಾಶ ನೀಡದೇ, ದುಬಾರಿ ಶುಲ್ಕ ನಿಗದಿ ಮಾಡಿದ್ದನ್ನು ಹಿಂಪಡೆಯಬೇಕು ಎಂದು ಅಲೀಂ, ಜೆಪಿ ನಗರ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ಹೇಳಿದ್ದಾರೆ.
ಈಗಿನ ಶುಲ್ಕವು ಆಸ್ತಿ ತೆರಿಗೆ ಮತ್ತು ಇತರ ಶುಲ್ಕಗಳಿಗಿಂತಲೂ ದುಬಾರಿಯಾಗಿದ್ದು, ತಿಂಗಳಿಗೆ 50 ಸಾವಿರ ರೂ.ನಷ್ಟಾಗುತ್ತದೆ. ಬಿಎಸ್‌ಡಬ್ಲ್ಯುಎಂಎಲ್ ಶುಲ್ಕ ಅಂತಿಮಗೊಳಿಸುವ ಮೊದಲು ಚರ್ಚಿಸಬೇಕಿತ್ತು. ಆದರೆ, ಏಕಾಏಕಿ ಶುಲ್ಕ ನಿಗದಿಪಡಿಸಿರುವುದು ಅವೈಜ್ಞಾನಿಕ ಮತ್ತು ಅಸಹಜ ಕ್ರಮ. ಇದನ್ನು ಹಿಂಪಡೆಯಬೇಕು, ಎಂದು ಹೋಟೆಲ್ ಮತ್ತು ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ಗಳು ಒತ್ತಾಯಿಸಿವೆ.