ಬೆಳಗಾವಿ: ಬೆಳಗಾವಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಗೆಣಸು ಆವಕ ಹೆಚ್ಚಾಗಿದೆ. ಈ ಬಾರಿ ಉತ್ತಮ ಬೆಲೆ ಕೈ ಸೇರಿದ್ದರಿಂದ ರೈತರು ಸಂತಸದಲ್ಲಿದ್ದಾರೆ.
ಅತಿಯಾದ ಮಳೆಯಿಂದಾಗಿ ಗೆಣಸಿನ ಇಳುವರಿ ಕುಂಠಿತಗೊಂಡಿದ್ದರೂ ಬಂದ ಫಸಲಿಗೆ ಬೆಳಗಾವಿ ರೈತರು ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಪಡೆಯುತ್ತಿದ್ದಾರೆ. ಇಲ್ಲಿನ ಗುಣಮಟ್ಟದ ಗೆಣಸಿಗೆ ಉತ್ತರ ಭಾರತದಲ್ಲಿ ಭಾರೀ ಬೇಡಿಕೆ ಇದೆ.
ಬೆಳಗಾವಿ ಪಶ್ಚಿಮ ಭಾಗ, ಖಾನಾಪುರ ತಾಲೂಕಿನ ಕೆಲ ಗ್ರಾಮಗಳು ಮತ್ತು ಮಹಾರಾಷ್ಟ್ರದ ಚಂದಗಡ ತಾಲೂಕಿನ ರೈತರು ಹೇರಳವಾಗಿ ಸಿಹಿ ಗೆಣಸು ಬೆಳೆಯುತ್ತಾರೆ. ಖರ್ಚು ಕಡಿಮೆ, ಅಧಿಕ ಲಾಭ ಸಿಗುವ ಹಿನ್ನೆಲೆಯಲ್ಲಿ ಬಹಳಷ್ಟು ರೈತರು ಗೆಣಸನ್ನೇ ನೆಚ್ಚಿಕೊಂಡಿದ್ದಾರೆ. ಪ್ರಕೃತಿ ವಿಕೋಪದ ಮಧ್ಯೆಯೂ ಕೆಲ ರೈತರು ಉತ್ತಮ ಗೆಣಸು ಬೆಳೆದಿದ್ದಾರೆ.
ದೀಪಾವಳಿ ಬಳಿಕ ಗೆಣಸಿನ ಸುಗ್ಗಿ ಪ್ರಾರಂಭವಾಗಿದೆ. ಟ್ರ್ಯಾಕ್ಟರ್, ಗೂಡ್ಸ್ ವಾಹನಗಳಲ್ಲಿ ಗೆಣಸು ತುಂಬಿಕೊಂಡು ಬೆಳಗಾವಿ ಎಪಿಎಂಸಿಗೆ ರೈತರು ಆಗಮಿಸುತ್ತಿದ್ದಾರೆ.
ಪ್ರತೀ ಬುಧವಾರ ಮತ್ತು ಶನಿವಾರ ಗೆಣಸಿನ ಮಾರುಕಟ್ಟೆ ಇರುತ್ತದೆ. ಬುಧವಾರ 1 ಕ್ವಿಂಟಲ್ ಗೆಣಸಿಗೆ 3 ಸಾವಿರ ರೂ.ವರೆಗೆ ದರ ಸಿಕ್ಕಿದರೆ, ಶನಿವಾರ 1,500-2,300 ರೂ.ವರೆಗೆ ಗೆಣಸು ಮಾರಾಟವಾಗಿದೆ.
ಈ ದರ ಕಳೆದ ವರ್ಷಕ್ಕೆ ಹೋಲಿಸಿದರೆ ಹೆಚ್ಚು ಮತ್ತು ಇಷ್ಟು ದರ ಯಾವತ್ತೂ ರೈತರಿಗೆ ಸಿಕ್ಕಿಲ್ಲ ಎನ್ನುತ್ತಾರೆ ವ್ಯಾಪಾರಿಗಳು. ಬೆಳಗಾವಿ ಎಪಿಎಂಸಿಯಿಂದ ಉತ್ತರ ಪ್ರದೇಶ, ಮಧ್ಯ ಪ್ರದೇಶ, ದೆಹಲಿ, ಗುಜರಾತ್, ರಾಜಸ್ಥಾನ, ಗೋವಾ, ಮಹಾರಾಷ್ಟ್ರ ಸೇರಿ ಉತ್ತರ ಭಾರತದ ರಾಜ್ಯಗಳಿಗೆ ಗೆಣಸು ಹೋಗುತ್ತದೆ.
2023ರ ಏಪ್ರಿಲ್ 1ರಿಂದ 2024ರ ಮಾರ್ಚ್ 31ರವರೆಗೆ 3,68,396 ಕ್ವಿಂಟಲ್ ಗೆಣಸು ಆವಕವಾಗಿದ್ದರೆ, ಏಪ್ರಿಲ್ 1ರಿಂದ ಅಕ್ಟೋಬರ್ 31ರವರೆಗೆ 40,064 ಕ್ವಿಂಟಲ್ ಗೆಣಸು ಎಪಿಎಂಸಿಗೆ ಬಂದಿದೆ. ಕಳೆದ ವರ್ಷ ನ.15ರಂದು ಕ್ವಿಂಟಲ್ ಗೆಣಸು 500-1200 ರೂ.ಗೆ ಮಾರಾಟವಾಗಿತ್ತು. ಈ ವರ್ಷ 3 ಸಾವಿರ ರೂ ಗಡಿ ದಾಟಿದ್ದರಿಂದ ರೈತರು ನಿರಾಳರಾಗಿದ್ದಾರೆ.
ಬೆಳಗಾವಿ ಸುತ್ತಲೂ ಬೆಳೆಯುವ ಗೆಣಸು ಎಂದರೆ ಉತ್ತರ ಭಾರತೀಯರಿಗೆ ಅಚ್ಚುಮೆಚ್ಚು. ಉತ್ತರದಲ್ಲಿ ಕೊರೆಯುವ ಚಳಿಯಲ್ಲಿ ಇಲ್ಲಿನ ಗೆಣಸನ್ನು ಅವರು ಇಷ್ಟಪಡುತ್ತಾರೆ. ಹಾಗಾಗಿ, ಬೆಳಗಾವಿ ಗೆಣಸಿಗೆ ಅಲ್ಲಿ ತುಂಬಾ ಬೇಡಿಕೆ ಇದೆ. ಇಲ್ಲಿನ ಎಪಿಎಂಸಿಗೆ ಆವಕವಾಗುವ ಶೇ.95ರಷ್ಟು ಗೆಣಸು ಅಲ್ಲಿಗೆ ರಫ್ತಾಗುತ್ತದೆ.
ನಮ್ಮದು ರಾಜ್ಯದಲ್ಲೇ ಸಿಹಿ ಗೆಣಸು ಆವಕವಾಗುವ ಮುಖ್ಯ ಮಾರುಕಟ್ಟೆ. ದೀಪಾವಳಿ ನಂತರ ಸುಗ್ಗಿ ಶುರುವಾಗಿದ್ದು, ಬರುವ ಕೆಲವು ವಾರದವರೆಗೆ ಆವಕದಲ್ಲಿ ಸ್ಥಿರತೆ ಕಾಯ್ದುಕೊಳ್ಳಲಿದ್ದು, ಸರಾಸರಿ 1 ಕ್ವಿಂಟಲ್‌ಗೆ 1ರಿಂದ3 ಸಾವಿರವರೆಗೆ ದರವಿದೆ. ಒಳ್ಳೆಯ ದರ ಸಿಕ್ಕಿದ್ದರಿಂದ ರೈತರು ಹರ್ಷಗೊಂಡಿದ್ದಾರೆ. ಪ್ರತಿ ವಾರವೂ ದರದಲ್ಲಿ ಏರುಪೇರಾಗುತ್ತಿದೆ. ಹಾಗಾಗಿ, ಇದೇ ದರ ಮುಂದುವರಿಯುತ್ತಾ ಎಂದು ಕಾದು ನೋಡಬೇಕಿದೆ ಎಂದಿದ್ದಾರೆ.
ದಸರಾ ಹಬ್ಬದ ವೇಳೆ ಕ್ವಿಂಟಲ್‌ಗೆ 6 ಸಾವಿರ ರೂ.ವರೆಗೆ ಗೆಣಸಿನ ದರವಿತ್ತು. ಈಗ ಸುಗ್ಗಿ ಆರಂಭವಾಗಿದ್ದು ದರ ಕಡಿಮೆ ಆಗಿದೆ. ಆದರೆ, ಈಗಿನ ದರ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಅತೀ ಹೆಚ್ಚು.
ಖಾನಾಪುರ ತಾಲೂಕಿನ ತೀರ್ಥಕುಂಡೆ ಗ್ರಾಮದ ರೈತ ಬಲವಂತ ನಾಯಿಕ ಮಾತನಾಡಿ, “200 ಕ್ವಿಂಟಲ್ ಗೆಣಸು ಮಾರಾಟಕ್ಕೆ ತಂದಿದ್ದೇನೆ. ಸರಾಸರಿ ಕ್ವಿಂಟಲ್‌ಗೆ 1,900 ದರ ಸಿಕ್ಕಿದೆ. ಹೋದ ವರ್ಷ ಇಷ್ಟು ಒಳ್ಳೆಯ ದರ ಸಿಕ್ಕಿರಲಿಲ್ಲ. 10 ಎಕರೆಯಲ್ಲಿ ಗೆಣಸು ಬೆಳೆದಿದ್ದೇನೆ.
ಕಬ್ಬಿನ ಬೆಳೆಗಿಂತ ಇದು ಲಾಭದಾಯಕ. ಈ ಬಾರಿ ಹೆಚ್ಚು ಮಳೆಯಾಗಿ ಇಳುವರಿ ಕಡಿಮೆಯಾಗಿದೆ. ಆದರೆ, ಗುಣಮಟ್ಟದ ಗೆಣಸು ಬಂದಿದೆ. ಇನ್ನೂ 200 ಕ್ವಿಂಟಲ್ ಗೆಣಸು ಇಳುವರಿ ಬರುವ ನಿರೀಕ್ಷೆ ಇದೆ. ಇದೇ ರೀತಿ ದರ ಸಿಕ್ಕರೆ ಹೆಚ್ಚಿನ ಲಾಭವಾಗುತ್ತದೆ” ಎಂದು ಸಂತಸ ವ್ಯಕ್ತಪಡಿಸಿದರು.