ಬೆಂಗಳೂರು: ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕೊಯ್ಲೋತ್ತರ ತಂತ್ರಜ್ಞಾನ ವಿಜ್ಞಾನ ವಿಭಾಗದ ವತಿಯಿಂದ ಬಗೆಬಗೆಯ ವೈನ್‌ಗಳನ್ನು ತಯಾರಿಸಿ ಬೆಂಗಳೂರಿನ ಕೃಷಿ ಮೇಳದಲ್ಲಿ ಪ್ರದರ್ಶನಕ್ಕಿಡಲಾಗಿದೆ.
ತೋಟಗಾರಿಕಾ ಬೆಳೆಗಳಿಂದ ವೈವಿಧ್ಯಮಯ ವೈನ್‌ಗಳನ್ನು ತಯಾರಿಸಿ ಹೆಬ್ಬಾಳದ ಜಿಕೆವಿಕೆಯಲ್ಲಿ ನಾಲ್ಕು ದಿನಗಳ ಕಾಲ ನಡೆಯುತ್ತಿರುವ ಕೃಷಿ ಮೇಳದಲ್ಲಿ ಪ್ರದರ್ಶನಕ್ಕಿಡಲಾಗಿದೆ.
ದ್ರಾಕ್ಷಿ ಜೊತೆಗೆ ಇತರೆ ಹಣ್ಣು, ತರಕಾರಿ ಹಾಗೂ ಗಿಡಮೂಲಿಕೆಗಳನ್ನು ಸೇರಿಸಿ ವೈನ್ ಸಿದ್ಧಪಡಿಸಿರುವುದು ವಿಶೇಷ. ದಾಳಿಂಬೆ, ವೀಳ್ಯದೆಲೆ, ಬೆಟ್ಟದ ನೆಲ್ಲಿಕಾಯಿ, ನೇರಳೆ, ಬೇಲದ ಹಣ್ಣು, ಹಲಸಿನ ಹಣ್ಣಿನ ತರಾವರಿ ವೈನ್ಗಳು ಗ್ರಾಹಕರ ಗಮನ ಸೆಳೆಯುತ್ತಿವೆ. ಇವು ಸಂಪೂರ್ಣ ಕೆಮಿಕಲ್‌ರಹಿತ ವೈನ್‌ಗಳೆಂಬುದು ಮತ್ತೊಂದು ವಿಶೇಷ.
ಹಣ್ಣು, ತರಕಾರಿಯನ್ನು ಜ್ಯೂಸ್ ಮಾಡಿಕೊಂಡು ಅದರಲ್ಲಿ ಸ್ಯಾಕರೋಮೈಸಸ್ ಎಂಬ ಈಸ್ಟ್ ಹಾಕಿ 2 ದಿನಗಳವರೆಗೆ ಗಾಳಿಯಾಡುವಂತೆ ಇಡಲಾಗುತ್ತದೆ. ಬಳಿಕ ಮತ್ತೊಂದು ಬಾಟಲಿಗೆ ಹಾಕಿ ಎರಡು ವಾರಗಳ ಕಾಲ ಕಳಿಯಲು ಬಿಡಲಾಗುವುದು. ಅದನ್ನು ಬಾಟಲಿಯಿಂದ ಬೇರ್ಪಡಿಸಿ, ಮಸ್ಲಿನ್ ಬಟ್ಟೆಯಲ್ಲಿ ಸೋಸಿ ಬಾಟಲಿಗೆ ತುಂಬಿ ಪ್ಯಾಶ್ಚರೀಕರಣ ಮಾಡಿ, ತದನಂತರ ಸೀಲ್ ಮಾಡಿ ಏಜಿಂಗ್ ಮಾಡಲಾಗುವುದು. ಇದರಿಂದ ಸುವಾಸನೆಯೊಂದಿಗೆ ಸ್ವಾದವನ್ನು ಕೂಡಾ ಕಾಪಾಡಬಹುದು. ಈ ವೈನ್‌ಗಳನ್ನು ಸೇವಿಸುವುದರಿಂದ ಆರೋಗ್ಯದ ಮೇಲೆ ಯಾವುದೇ ಅಡ್ಡ ಪರಿಣಾಮ ಇರುವುದಿಲ್ಲ. ಯಾವ ಹಣ್ಣು ಹಾಗೂ ತರಕಾರಿಯಿಂದ ವೈನ್ ಸಿದ್ಧಪಡಿಸಲಾಗಿದೆಯೋ ಅದೇ ಸುವಾಸನೆ ಸೇವಿಸುವವರೆಗೂ ಇರುತ್ತದೆ
ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಹಲವು ಹಣ್ಣುಗಳ ವೈನ್‌ಗಳನ್ನು ತಯಾರಿಸಲಾಗುತ್ತದೆ. ಇವುಗಳನ್ನು ಗಿಡಮೂಲಿಕೆಗಳನ್ನು ಬಳಸಿ ತಯಾರಿಸುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ಇದರಲ್ಲಿ ಸಕ್ಕರೆಯ ಅಂಶ ಕಡಿಮೆ. ಕರ್ನಾಟಕದಲ್ಲಿ ಸದ್ಯ ದ್ರಾಕ್ಷಿ ಹಣ್ಣಿನ ವೈನ್ ಮಾತ್ರ ಮಾರುಕಟ್ಟೆಗಳಲ್ಲಿ ಹೆಚ್ಚಾಗಿ ಸಿಗುತ್ತದೆ. ಬೇರೆ ಬೇರೆ ಹಣ್ಣುಗಳಿಂದ ದೊಡ್ಡಮಟ್ಟದ ವೈನ್ ತಯಾರಿಕೆ ಈವರೆಗೆ ನಡೆದಿಲ್ಲ. ಆದರೆ ತಂತ್ರಜ್ಞಾನವನ್ನು ಬಳಸಿ ದೊಡ್ಡಮಟ್ಟದಲ್ಲಿ ತಯಾರಿಸಬಹುದು. ಅಬಕಾರಿ ಇಲಾಖೆಯ ಅನುಮತಿ ಕೂಡ ತಯಾರಿಕೆಗೆ ಬೇಕಾಗುತ್ತದೆ” ಎಂದು ಡಾ.ಕೆ.ಆರ್.ವಾಸುದೇವ್ ಮಾಹಿತಿ ನೀಡಿದ್ದಾರೆ.
WhatsApp Group
Join Now
Telegram Group
Join Now
Instagram Account
Follow Now
Facebook Page
Follow Now